Site icon Kannada News-suddikshana

ಸ್ವಾತಿ ಮಾಲಿವಾಲ್ ಕೇಸ್: ಕೇಜ್ರಿವಾಲ್ ಮನೆಯ ಸಿಸಿಟಿವಿ ಡಿವಿಆರ್ ವಶಕ್ಕೆ ಪಡೆದ ಪೊಲೀಸರು

ನವದೆಹಲಿ: ಎಎಪಿ ರಾಜ್ಯಸಭಾ ಸಂಸದೆ ಸ್ವಾತಿ ಮಾಲಿವಾಲ್ ಅವರ ಮೇಲಿನ ಹಲ್ಲೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರ ಮನೆಯ ಸಿಸಿಟಿವಿ ಡಿವಿಆರ್ ಅನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೂಲಗಳ ಪ್ರಕಾರ ಸ್ವಾತಿ ಮಾಲಿವಾಲ್ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ತಂಡ ಇಂದು ಕೇಜ್ರಿವಾಲ್‌ ಅವರ ಅಧಿಕೃತ ನಿವಾಸಕ್ಕೆ ಭೇಟಿ ನೀಡಿದೆ ಎಂದು ತಿಳಿದುಬಂದಿದೆ. ಈ ವೇಳೆ ಮನೆಯ ಸಿಸಿಟಿವಿ ಡಿವಿಆರ್ ಸೇರಿದಂತೆ ಎಲೆಕ್ಟ್ರಾನಿಕ್ ಸಾಧನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಮೇ 13ರಂದು ಕೇಜ್ರಿವಾಲ್ ಅವರ ಆಪ್ತ ಸಹಾಯಕ ವಿಭವ್ ಕುಮಾ‌ರ್ ಅವರು ಸಿಎಂ ನಿವಾಸದ ಡ್ರಾಯಿಂಗ್ ರೂಮಿನಲ್ಲಿ ಮಾಲಿವಾಲ್ ಮೇಲೆ ಹಲ್ಲೆ ನಡೆಸುವ ಜೊತೆಗೆ ಅವ್ಯಾಚ ಶಬ್ದಗಳಿಂದ ಬೈದಿದ್ದಾರೆ ಎಂಬ ಆರೋಪ ಮಾಡಲಾಗಿದೆ. ಈ ಬಗ್ಗೆ ವಿಭವ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲು ಮಾಡಿ, ಬಂಧಿಸಲಾಗಿದೆ. ಇದೀಗ ಸ್ವಾತಿ ಮಾಲಿವಾಲ್ ಅವರ ಮೇಲೆ ಹಲ್ಲೆ ನಡೆಸಿದ ದೃಶ್ಯಾವಳಿಗಳನ್ನು ಪಡೆಯಲು ಪೊಲೀಸರ ತಂಡ ಸಿಸಿಟಿವಿ ಡಿವಿಆರ್ ಸೇರಿದಂತೆ ಎಲೆಕ್ಟ್ರಾನಿಕ್ ಸಾಧನಗಳನ್ನು ವಶಕ್ಕೆ ಪಡೆದಿದೆ.

ಸಿಎಂ ನಿವಾಸದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ತಿರುಚಲಾಗುತ್ತಿದೆ ಎಂದು ಮಾಲಿವಾಲ್ ಆರೋಪ ಮಾಡಿದ್ದರು. ಇನ್ನು ಶನಿವಾರ ಬಂಧಿಸಿದ ವಿಭವ್ ಕುಮಾರ್ ಅವರನ್ನು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ದೆಹಲಿ ನ್ಯಾಯಾಲಯ ಆದೇಶ ಹೊರಡಿಸಿದೆ.

 

Exit mobile version