SUDDIKSHANA KANNADA NEWS/ DAVANAGERE/ DATE:13-08-2023
ದಾವಣಗೆರೆ: ಸೂಳೆಕೆರೆ (Sulekere) ನೀರು ಕುಡಿಯಲು ಯೋಗ್ಯವಲ್ಲ ಎಂದು ಚನ್ನಗಿರಿ ತಾಲೂಕು ವೈದ್ಯಾಧಿಕಾರಿಗಳು ಪ್ರಮಾಣೀಕರಿಸಿದ್ದಾರೆ. ಮೂರು ತಿಂಗಳ ಕಾಲ ನೀರು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಆದ್ರೆ, ಏಷ್ಯಾಖಂಡದ ಎರಡನೇ ದೊಡ್ಡ ಕೆರೆ ಎಂಬ ಖ್ಯಾತಿ ಪಡೆದಿರುವ ಸೂಳೆಕೆರೆ (Sulekere) ಅಭಿವೃದ್ಧಿ, ಉಳಿವಿಗೆ ಖಡ್ಗ ಸಂಘಟನೆ ಟೊಂಕ ಕಟ್ಟಿ ನಿಂತಿದ್ದು, ಹೋರಾಟ ನಡೆಸುತ್ತಲೇ ಬಂದಿದೆ. ಚಿತ್ರದುರ್ಗದ ಕಾವಾಡಿಗರ ಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ಜನರು ಮೃತಪಟ್ಟಾಗಲೇ ಮಾಹಿತಿ ನೀಡಿದೆ. ಆದರೂ ಎಚ್ಚೆತ್ತು ಕೊಂಡಿರಲಿಲ್ಲ. ಈಗ ನೀರು ಪೂರೈಕೆ ಸ್ಥಗಿತಗೊಳಿಸುವುದಾಗಿ ಹೇಳಿದ ಬಳಿಕ ಅಧಿಕಾರಿಗಳು ಎಚ್ಚೆತ್ತು ಕೊಂಡಿದ್ದಾರೆ. ಇದು ಆಡಳಿತದ ನಿರ್ಲಕ್ಷ್ಯಕ್ಕೆ ಸಾಕ್ಷಿ.
ಕಾವಾಡಿಗರ ಹಟ್ಟಿ ಪ್ರಕರಣ ರಾಜ್ಯದ ಗಮನ ಸೆಳೆಯುತ್ತಿದ್ದಂತೆ ಅಧಿಕಾರಿಗಳು ತಂಡೋಪತಂಡವಾಗಿ ಭೇಟಿ ನೀಡಿ ಆಗಲೇ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದ್ದರೆ ಈಗ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಖಡ್ಗ ಸಂಘಟನೆಯು ಒಂದು ವರ್ಷವಲ್ಲ, ಕಳೆದ ಮೂರು ವರ್ಷಗಳಿಂದಲೂ ಸೂಳೆಕೆರೆಗೆ ಹೋಗುತ್ತಿರುವ ತ್ಯಾಜ್ಯದ ಬಗ್ಗೆ ಗಮನ ಸೆಳೆಯುತ್ತಲೇ ಇದೆ, ದೂರು ಕೊಟ್ಟಿದೆ. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೂ ತಂದಿದೆ. ಯಾರೂ ತಲೆಕೆಡಿಸಿಕೊಂಡಿಲ್ಲ. ಅನಾಹುತ ಆದ ಮೇಲೆ ಬರುವುದಕ್ಕಿಂತ ಮುಂಚೆಯೇ ಈ ಕ್ರಮ ತೆಗೆದುಕೊಂಡಿದ್ದರೆ ಈ ಸಮಸ್ಯೆ ಎದುರಾಗುತ್ತಿರಲಿಲ್ಲ ಎಂದು ಖಡ್ಗ ಸಂಘಟನೆ ರೂವಾರಿ ರಘು ಅವರು ಮಾಹಿತಿ ನೀಡಿದ್ದಾರೆ.
ಚನ್ನಗಿರಿ ಪಟ್ಟಣದ ತ್ಯಾಜ್ಯವೆಲ್ಲಾ ಹಳ್ಳಕ್ಕೆ ಬಿಡುತ್ತಾರೆ. ಮಳೆಗಾಲದ ವೇಳೆ ಹಾಗೂ ಭದ್ರಾ ನಾಲೆಯಲ್ಲಿ ನೀರು ಬಿಟ್ಟಾಗ ಈ ತ್ಯಾಜ್ಯವೆಲ್ಲಾ ಹೋಗಿ ಸೂಳೆಕೆರೆ (Sulekere) ಸೇರುತ್ತದೆ. ಹಲವಾರು ವರ್ಷಗಳಿಂದಲೂ ನಡೆದುಕೊಂಡು ಬಂದಿದೆ. ನಲ್ಲೂರಿನ ಪ್ರತಿಮನೆಯ ತ್ಯಾಜ್ಯವೂ ಸಹ ಇದೇ ಕೆರೆಗೆ ಸೇರುತ್ತದೆ. ಕೆರಬಿಳಚಿಯಲ್ಲಿನ ಮಾಂಸದ ತ್ಯಾಜ್ಯವೂ ಸೂಳೆಕೆರೆಗೆ ಸೇರುತ್ತದೆ. ಈ ಎಲ್ಲಾ ಕಾರಣಗಳಿಂದ ಸೂಳೆಕೆರೆ ನೀರು ಕಲುಷಿತಗೊಂಡಿದೆ. ಈ ಕೆರೆಯ ನೀರು ಕುಡಿಯಲು ಯೋಗ್ಯ. ಆದ್ರೆ, ತ್ಯಾಜ್ಯ ನಿರ್ವಹಣೆ ಸರಿಯಿಲ್ಲದ ಕಾರಣ ಇಂಥದ್ದೊಂದು ಸಮಸ್ಯೆ ತಲೆದೋರಿದೆ ಎಂದು ಮಾಹಿತಿ ನೀಡಿದ್ದಾರೆ ರಘು.
ಈ ಸುದ್ದಿಯನ್ನೂ ಓದಿ:
Sulekere Big Story: ಕುಡಿಯಲು ಯೋಗ್ಯವಲ್ಲ ಸೂಳೆಕೆರೆ ನೀರು: ಜೀವಜಲಚರ, ಕೃಷಿಗೆ ಕಂಟಕನಾ? ಆತಂಕದಲ್ಲಿ ಮತ್ಸ್ಯ ಪ್ರಿಯರು, ರೈತಾಪಿ ವರ್ಗ…!
ಸೂಳೆಕೆರೆ (Sulekere) ಅವ್ಯವಸ್ಥೆ ಸೇರಿದಂತೆ ಪ್ರತಿಯೊಂದು ವಿಚಾರದಲ್ಲಿಯೂ ಖಡ್ಗ ಸಂಘಟನೆ ಹೋರಾಟ ನಡೆಸಿಕೊಂಡು ಬರುತ್ತಲೇ ಇದೆ. ಸೂಳೆಕೆರೆ ಒತ್ತುವರಿ ಮಾಡಿದವರ ವಿರುದ್ಧವೂ ಸಮರ ಸಾರಿದೆ. ಈ ಪ್ರಕರಣ ನ್ಯಾಯಾಲಯಲ್ಲಿದೆ. ಅಧಿಕಾರಕ್ಕೆ ಬಂದ ಯಾವೊಬ್ಬ ಜನಪ್ರತಿನಿಧಿಯು ಕಠಿಣ ನಿರ್ಧಾರ ತೆಗೆದುಕೊಳ್ಳದ ಕಾರಣ ಒತ್ತುವರಿ ಸಮಸ್ಯೆ ಹಾಗೆಯೇ ಉಳಿದಿದೆ. ಸೂಳೆಕೆರ (Sulekere) ಉಳಿಯಬೇಕು. ಅಭಿವೃದ್ಧಿಪಡಿಸಬೇಕು. ತ್ಯಾಜ್ಯ ಬಿಡುವುದನ್ನು ನಿಲ್ಲಿಸಬೇಕು ಎಂಬ ಒತ್ತಾಯ ಖಡ್ಗ ಸಂಘಟನೆಯದ್ದು ಎಂದು ತಿಳಿಸಿದ್ದಾರೆ.
ಮೂರು ವರ್ಷಗಳ ಹಿಂದೆಯೇ ಸೂಳೆಕೆರೆ(Sulekere) ಗೆ ಹೋಗುತ್ತಿರುವ ತ್ಯಾಜ್ಯ ನಿಲ್ಲಿಸಬೇಕು. ಮನೆಗಳಲ್ಲಿನ ತ್ಯಾಜ್ಯ ಕೆರೆಗೆ ಸೇರುತ್ತಿರುವುದನ್ನು ನಿಲ್ಲಿಸಬೇಕು. ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಿದ್ದರೂ ಇದುವರೆಗೆ ತಲೆ ಕೆಡಿಸಿಕೊಂಡಿರಲಿಲ್ಲ. ಕಾವಾಡಿಗರ ಹಟ್ಟಿ ದುರಂತ ಪ್ರಕರಣ ಆದ ಬಳಿಕ ಎಚ್ಚೆತ್ತುಕೊಳ್ಳಲಾಗಿದೆ. ಚಿತ್ರದುರ್ಗ ಜಿಲ್ಲೆಗೆ ಸೂಳೆಕೆರೆ(Sulekere)ಯಿಂದಲೇ ನೀರು ಹೋಗುತ್ತದೆ. ಈ ನೀರೇ ಕುಡಿಯಲು ಆಧಾರ. ಜನರು ಮೃತಪಟ್ಟ ಬಳಿಕ ಎಚ್ಚೆತ್ತುಕೊಂಡಿದ್ದಾರೆ. ಮೊದಲೇ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದ್ದರೆ ಅನಾಹುತ ತಪ್ಪಿಸಬಹುದಿತ್ತು ಎಂದು ರಘು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೂಳೆಕೆರೆಗೆ ಎಲ್ಲೆಲ್ಲಿಂದ ತ್ಯಾಜ್ಯ ಹೋಗುತ್ತಿದೆ ಎಂಬ ಕುರಿತಂತೆ ಫೋಟೋ, ವಿಡಿಯೋ ಸಂಗ್ರಹಿಸಿ ಜನರ ಮುಂದೆ ಸದ್ಯದಲ್ಲಿಯೇ ತೆರೆದಿಡಲಿದ್ದೇವೆ. ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳದಿದ್ದರೆ ಪ್ರತಿಭಟನೆಯನ್ನೂ ನಡೆಸುತ್ತೇವೆ ಎಂದು
ಎಚ್ಚರಿಕೆ ನೀಡಿದ್ದಾರೆ.
ಮೊದಲಿನಿಂದಲೂ ಸೂಳೆಕೆರೆ ನೀರು ಕುಡಿಯಲು ಯೋಗ್ಯವೇ ಎಂಬ ಕುರಿತಂತೆ ಪರೀಕ್ಷೆ ನಡೆಸುವಂತೆ ಮನವಿ ಮಾಡಿದ್ದರೂ ಮಾಡಿರಲಿಲ್ಲ. ಕಾವಾಡಿಗರ ಹಟ್ಟಿ ಪ್ರಕರಣ ಬಳಿಕ ನೀರು ಪರೀಕ್ಷೆಗೆ ಕಳುಹಿಸಲಾಗಿದೆ. ಇದು ಜಡ್ಡು ಹಿಡಿದಿರುವ ಆಡಳಿತ ವ್ಯವಸ್ಥೆಗೆ ಸಾಕ್ಷಿ ಎಂದು ಹೇಳಿರುವ ರಘು ಅವರು, ಇನ್ನು ಮುಂದಾದರೂ ನೀರಾವರಿ ಇಲಾಖೆ, ತಾಲೂಕು ಆಡಳಿತ, ಜಿಲ್ಲಾಡಳಿತ, ಸ್ಥಳೀಯ ಶಾಸಕರು ಹಾಗೂ ರಾಜ್ಯ ಸರ್ಕಾರವು ಇತ್ತ ಗಮನ ಹರಿಸಬೇಕು. ಸಂಬಂಧಪಟ್ಟ ಸಚಿವರು ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಪರಿಹರಿಸಿದರೆ ಚಿತ್ರದುರ್ಗ ಜಿಲ್ಲೆಯ ಜನತೆಯ ಕುಡಿಯುವ ನೀರಿನ ಆಸರೆಯಾಗಿರುವ ಸೂಳೆಕೆರೆ ನೀರು ಬಳಕೆಗೆ ಬರುತ್ತದೆ. ಇಲ್ಲದಿದ್ದರೆ ಸಮಸ್ಯೆ ಮತ್ತಷ್ಟು ತೀವ್ರವಾಗುತ್ತದೆ ಎಂದು ಹೇಳಿದ್ದಾರೆ.
ಸೂಳೆಕೆರೆ ನೀರು ಚನ್ನಗಿರಿ ತಾಲೂಕಿನ ಗ್ರಾಮಗಳಿಗೆ ಹೋಗುತ್ತಿದ್ದು, ಕೆಲವರು ಈ ನೀರಿನಲ್ಲಿ ಸ್ನಾನ ಮಾಡಿದರೆ ತುರಿಕೆ ಬರುತ್ತದೆ ಎಂಬ ಮಾಹಿತಿ ನೀಡಿದ್ದರೂ ತಲೆಕೆಡಿಸಿಕೊಂಡಿರಲಿಲ್ಲ. ಸೂಳೆಕೆರೆಯಲ್ಲಿನ ಲಕ್ಷಾಂತರ ಮೀನುಗಳಿಗೂ ಸಮಸ್ಯೆ
ತಂದೊಡ್ಡುವುದು ಖಚಿತ ಎಂದು ತಿಳಿಸಿದ್ದಾರೆ.