SUDDIKSHANA KANNADA NEWS/ DAVANAGERE/ DATE:18-06-2024
ದಾವಣಗೆರೆ: ಮದುವೆಯಾಗಲು ಹೆಣ್ಣು ಸಿಗಲ್ಲ ಎಂಬುದು ಇಂದಿನ ಬಹುತೇಕ ಯುವಕರ ಗೋಳು. ಅದರಲ್ಲಿ ಗ್ರಾಮೀಣ ಭಾಗದ ಯುವಕರ ಪಾಡು ಅಷ್ಟಿಷ್ಟಲ್ಲ. ಎಷ್ಟೇ ಹುಡುಕಾಡಿದರೂ ಇಂದು ಹುಡುಗಿಯರು ಹಳ್ಳಿ ಹುಡುಗರನ್ನು ಒಪ್ಪುವುದು ತುಂಬಾನೇ ಕಷ್ಟ. ಅಷ್ಟು ಮಾತ್ರವಲ್ಲ, ಸ್ವಲ್ಪ ಓದಿಲ್ಲ ಎಂದರೂ ತಿರಸ್ಕಾರ ಮಾಡಿಬಿಡುತ್ತಾರೆ. ಹಾಗಾಗಿ ಗ್ರಾಮೀಣ ಭಾಗದ ಯುವಕರು ಮದುವೆಯಾಗಿಲ್ಲ ಎಂದು ಕೊರಗುವುದು ಸಾಮಾನ್ಯ ಎಂಬಂತಾಗಿದೆ.
ಆದ್ರೆ, ಹೊನ್ನಾಳಿ ತಾಲೂಕಿನ ಹಿರೇಬಾಸೂರು ಗ್ರಾಮದಲ್ಲಿ ವಧು ಸಿಗಲಿಲ್ಲವೆಂಬ ಕಾರಣಕ್ಕೆ ಮನನೊಂದು ವಿಷ ಸೇವಿಸಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಹಿರೇಬಾಸೂರು ಗ್ರಾಮದ ಹೆಚ್. ಪವನ್ ಸಾವಿಗೆ ಶರಣಾದ ಯುವಕ ಎಂದು ಗುರುತಿಸಲಾಗಿದೆ.
ಕಳೆದ ಎರಡು ವರ್ಷಗಳಿಂದ ಮದುವೆಯಾಗಲು ವಧು ಹುಡುಕುತ್ತಿದ್ದ ಪವನ್ ಗೆ ಮದುವೆ ನಿಶ್ಛಿತವಾಗಲಿಲ್ಲ. ಯುವತಿಯರು ಒಪ್ಪುತ್ತಿರಲಿಲ್ಲ. ಹನುಮಂತಪ್ಪ ಎಂಬುವವರ ಇಬ್ಬರು ಮಕ್ಕಳ ಪೈಕಿ ಪವನ್ ಹಿರಿಯ ಪುತ್ರ. ಮತ್ತೊಬ್ಬ ಪುತ್ರ ಬಡಗಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಮದುವೆಗೆ ಇಬ್ಬರಿಗೂ ಹೆಣ್ಣು ಹುಡುಕಾಟ ನಡೆದಿತ್ತು. ವಧು ಸಿಗದೇ ಇರವ ಕಾರಣಕ್ಕೆ ಪವನ್ ಮಾನಸಿಕ ಖಿನ್ನತೆಗೂ ಒಳಗಾಗಿದ್ದ. ಮಾತ್ರವಲ್ಲ, ಯಾರೊಟ್ಟಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ ಎಂದು ಹೊನ್ನಾಳಿ ಠಾಣೆ ಪೊಲೀಸರಿಗೆ ಗ್ರಾಮಸ್ಥರು ಹಾಗೂ ಕುಟುಂಬದವರು ಮಾಹಿತಿ ನೀಡಿದ್ದಾರೆ.
ಕುಟುಂಬದ ಸದಸ್ಯರು ಜಮೀನಿನಲ್ಲಿ ಕೃಷಿ ಕೆಲಸಕ್ಕೆ ತೆರಳಿದ್ದರು. ಈ ವೇಳೆಯಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ. ಆಗ ಪವನ್ ವಿಷ ಸೇವಿಸಿದ್ದ. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಆತನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.