SUDDIKSHANA KANNADA NEWS/ DAVANAGERE/ DATE:18-01-2024
ಶಿವಮೊಗ್ಗ: ಕಳೆದ ಎಂಟು ತಿಂಗಳ ಹಿಂದೆಯಷ್ಟೇ ಪ್ರೀತಿ ಮಾಡಿ ಮದುವೆಯಾಗಿದ್ದ ಸುಂದರ ನವ ವಿವಾಹಿತೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾದ ಘಟನೆ ತೀರ್ಥಹಳ್ಳಿ ತಾಲೂಕಿನ ನಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಸನಕೊಡಿಗೆ ಗ್ರಾಮದಲ್ಲಿ ನಡೆದಿದೆ.
ದಾಸನಕೊಡಿಗೆ ಗ್ರಾಮದಲ್ಲಿ ಬಿ. ಯು. ಶರ್ಮಿತಾ (24) ಆತ್ಮಹತ್ಯೆ ಮಾಡಿಕೊಂಡಾಕೆ ಎಂದು ಗುರುತಿಸಲಾಗಿದೆ. ಸೋಮೇಶ್ವರ ವನ್ಯಜೀವಿ ಅಭಯಾರಣ್ಯ ವಿಭಾಗದ ಅಮಾವಾಸ್ಯೆಬೈಲು ವಲಯ ಅರಣ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿದ್ಯಾರ್ಥ್ ಜೊತೆ ವಿವಾಹವಾಗಿತ್ತು. ಪ್ರೀತಿಸಿ ಶರ್ಮಿತಾ ಮದುವೆಯಾಗಿದ್ದಳು. ಆನಂತರ ಪೋಷಕರೂ ಮದುವೆ ಸಮ್ಮತಿಸಿದ್ದರಿಂದ ಗಂಡ ಹೆಂಡತಿ ಇಬ್ಬರೂ ಅನೋನ್ಯವಾಗಿದ್ದರು.

ಮನೆಯ ಮೇಲಿನ ಉಪ್ಪರಿಗೆಯ ಕೊಠಡಿಗೆ ರಾತ್ರಿ ಮಲಗಲು ಶರ್ಮಿತಾ ತೆರಳಿದ್ದರು. ಯಾವಾಗಲೂ ಬೆಳಿಗ್ಗೆ ಬೇಗನೇ ಎದ್ದು ಬರುತ್ತಿದ್ದ ಶರ್ಮಿತಾ ಹೊತ್ತು ಕಳೆದರೂ ಹೊರಗೆ ಬರಲಿಲ್ಲ. ಆಗ ಮನೆಯವರು ಕಿಟಕಿಯಿಂದ ನೋಡಿದಾಗ ಆಕೆಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮನೆಯ ಬಾಗಿಲು ಒಡೆದು ಒಳಗೆ ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ.
ಇನ್ನು ಅರಣ್ಯ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವಿದ್ಯಾರ್ಥ್ ರಾತ್ರಿ ಕೆಲಸಕ್ಕೆ ತೆರಳಿದದ್ರು. 2023ರ ಮಾರ್ಚ್ ತಿಂಗಳಿನಲ್ಲಿ ನೊಣಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಜ್ಜಳ ಗ್ರಾಮದ ಶರ್ಮಿತಾ ಹಾಗೂ ವಿದ್ಯಾರ್ಥ್ ನಡುವೆ ವಿವಾಹ ನಡೆದಿತ್ತು. ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ಸಾವಿಗೆ ಅನಾರೋಗ್ಯ ತೀವ್ರವಾಗಿ ಕಾಡುತ್ತಿರುವ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿರುವುದಾಗಿ ಆಕೆ ಬರೆದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಮನೆಯಲ್ಲಿ ವಿದ್ಯಾರ್ಥ್ ತಂದೆ ಮತ್ತು ತಾಯಿ ಇದ್ದರು.
ತಹಶೀಲ್ದಾರ್ ಜಕ್ಕನಗೌಡರ್ ಅವರ ಸಮ್ಮುಖದಲ್ಲಿ ತೀರ್ಥಹಳ್ಳಿಯ ಜೆ.ಸಿ.ಆಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟಂ ನಡೆದಿದ್ದು, ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.