SUDDIKSHANA KANNADA NEWS/ DAVANAGERE/ DATE:04-12-2023
ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮತ್ತೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಜನರು ಮನೆಯಿಂದ ಹೊರ ಬರಲು ಹೆದರುವಂಥ ಸ್ಥಿತಿ ನಿರ್ಮಾಣವಾಗಿದೆ. ಕೆಲವೆಡೆಗಳಲ್ಲಂತೂ ಬೈಕ್ ಸವಾರರ ಬೆನ್ನಟ್ಟಿ ಬರುತ್ತಿವೆ. ಇದು ಜನರ ಆತಂಕಕ್ಕೆ ಕಾರಣವಾಗಿದೆ.
ವಾರ್ಡ್ ನಂಬರ್ 23 ರ ವಿನೋಬನಗರ ಮೂರನೇ ಮುಖ್ಯರಸ್ತೆಯ 15 ನೇ ತಿರುವಿನಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, 10 ರಿಂದ 15 ನಾಯಿಗಳು ಇವೆ. ರಸ್ತೆಯಲ್ಲಿ ಹೊರ ಬರುತ್ತಿದ್ದಂತೆ ಜನರ ಮೇಲೆ ಎರಗುತ್ತಿವೆ. ಕೆಲವರನ್ನು
ಈಗಾಗಲೇ ಕಚ್ಚಿ ಗಾಯಗೊಳಿಸಿವೆ. ಮಕ್ಕಳನ್ನು ಮನೆಯಿಂದ ಹೊರಗೆ ಬಿಡಲು ಪೋಷಕರು ಹೆದರುವಂಥ ಸ್ಥಿತಿ ನಿರ್ಮಾಣವಾಗಿದೆ.
ಹಿಂಡು ಹಿಂಡಾಗಿ ಬರುವ ಹತ್ತರಿಂದ ಹದಿನೈದು ನಾಯಿಗಳು ರಸ್ತೆಯಲ್ಲಿ ಹೋಗುವವರಿಗೆ ಕಚ್ಚಿ ಗಾಯಗೊಳಿಸುತ್ತಿವೆ. ಇಲ್ಲಿನ ವಾಸಿಗಳು ನಾಯಿಗಳನ್ನು ನೋಡಿದರೆ ಭಯಪಡುವಂತಾಗಿದೆ. ಭಯದ ವಾತಾವರಣದಲ್ಲಿ ಜನರು ಕಾಲ ಕಳೆಯುವಂತಾಗಿದೆ. ಈಗಾಗಲೇ ಮಕ್ಕಳನ್ನು ಕಚ್ಚಿ ಗಾಯಗೊಳಿಸಿರುವ ನಾಯಿಗಳ ಕಾಟಕ್ಕೆ ಜನರು ಬೇಸತ್ತಿದ್ದಾರೆ. ಬೈಕ್ ಗಳ ಸೀಟ್ ಕವರ್ ಹಾಗೂ ಕಾರ್ ಗಳ ಕವರ್ ಗಳನ್ನು ಕಚ್ಚಿ ಹರಿದು ಹಾಕುತ್ತಿವೆ. ಆದಷ್ಟು ಬೇಗ ನಾಯಿಗಳನ್ನು ಹಿಡಿದು ಬೇರೆಡೆ ಸ್ಥಳಾಂತರ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಶಾಲೆಗೆ ಹೋಗುವ ಮಕ್ಕಳು, ಕೆಲಸಕ್ಕೆ ಹೋಗುವ ಮಹಿಳೆಯರು, ಪುರುಷರೂ ಸಹ ರಸ್ತೆಯಲ್ಲಿ ನಾಯಿಗಳ ತೊಂದರೆಯಿಂದ ರಸ್ತೆಯಲ್ಲಿ ಹೋಗಲು ಭಯಪಡುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರು ಆದಷ್ಟು ಬೇಗ ಕ್ರಮ ತೆಗೆದುಕೊಳ್ಳಬೇಕು. ಮಕ್ಕಳನ್ನು ನಾಯಿಗಳು ಬೆನ್ನತ್ತಿಕೊಂಡು ಹೋಗುತ್ತಿರುವುದು ಆತಂಕ ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ.
ಮಹಾನಗರ ಪಾಲಿಕೆಯ ಅಧಿಕಾರಿಗಳು ಸಬೂಬು ಹೇಳದೇ ಆದಷ್ಟು ಬೇಗ ನಾಯಿಗಳನ್ನು ಬೇರೆಡೆ ಸ್ಥಳಾಂತರ ಮಾಡಬೇಕು. ಒಂದಲ್ಲಾ ಎರಡಲ್ಲಾ ಹಿಂಡು ಹಿಂಡಾಗಿ ಬರುವ ನಾಯಿಗಳು ದಾಳಿ ಮಾಡುತ್ತಿರುವ ರೀತಿ ನೋಡಿದರೆ ರೌಡಿಗಳು ಮೈಮೇಲೆ
ಎರಗಿದಂತೆ ಬರುತ್ತಿವೆ. ಈ ನಾಯಿಗಳಿಂದ ತಪ್ಪಿಸಿಕೊಂಡು ಮನೆಗೆ ಹೋಗುವುದೇ ಕಷ್ಟ ಎಂಬಂತ ವಾತಾವರಣ ನಿರ್ಮಾಣವಾಗಿದೆ. ಕೂಡಲೇ ಈ ನಾಯಿಗಳನ್ನು ಸ್ಥಳಾಂತರ ಮಾಡದಿದ್ದರೆ ಮತ್ತಷ್ಟು ಸಮಸ್ಯೆ ಹೆಚ್ಚಾಗಲಿದೆ. ಪರಿಸ್ಥಿತಿ ಗಂಭೀರಕ್ಕೆ ಹೋದ ಮೇಲೆ ಎಚ್ಚೆತ್ತುಕೊಳ್ಳುವುದಕ್ಕಿಂತ ಆದಷ್ಟು ಬೇಗ ಈ ಸಮಸ್ಯೆಯಿಂದ ಮುಕ್ತಿ ಕೊಡಿ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಮಕ್ಕಳು ಶಾಲೆಗೆ ಹೋಗಲು ಮತ್ತು ಶಾಲೆಯಿಂದ ಮನೆಗೆ ಬರಲು ಹೆದರುತ್ತಿದ್ದಾರೆ. ಪೋಷಕರು ಜೊತೆಯಲ್ಲಿದ್ದರೂ ಒಂದು ಅಥವಾ ಎರಡು ನಾಯಿಗಳಾದರೆ ಹೇಗೋ ಓಡಿಸಬಹುದು. ಒಮ್ಮೆಲೆ ಹತ್ತಕ್ಕೂ ಹೆಚ್ಚು ನಾಯಿಗಳು ಬಂದರೆ ಏನು ಮಾಡಬೇಕು. ಬೈಕ್ ಸವಾರರನ್ನು ಬೆನ್ನಟ್ಟಿ ಹೋಗುವ ನಾಯಿಗಳು ಅಟ್ಯಾಕ್ ಮಾಡುತ್ತಿವೆ. ಇದರಿಂದಾಗಿ ಬೈಕ್ ಸವಾರರು ರಸ್ತೆಯಲ್ಲಿ ಸಂಚರಿಸುವುದು ದುಸ್ತರವಾಗಿದೆ. ನಮ್ಮ ಸಮಸ್ಯೆಗೆ ಆದಷ್ಟು ಬೇಗ ಮುಕ್ತಿ ಕೊಡಿ, ಇಲ್ಲವೇ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ವಾರ್ಡ್ ನ ಜನರು ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಸ್ಥಳೀಯ ಕಾರ್ಪೊರೇಟರ್ ರೇಖಾ ಸುರೇಶ್ ಗಂದಗಾಳೆ ಅವರ ಗಮನಕ್ಕೂ ತರಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದಷ್ಟು ಬೇಗ ಕಾರ್ಪೊರೇಟರ್ ಅವರು ಮಹಾನಗರ ಪಾಲಿಕೆಯ ಅಧಿಕಾರಿಗಳ ಜೊತೆ ಮಾತನಾಡಿ ಈ ನಾಯಿಗಳ ಕಾಟದಿಂದ ಮುಕ್ತಿ ಕೊಡಿಸಬೇಕು ಎಂದು ಮನವಿ ಮಾಡಿದ್ದಾರೆ.