Site icon Kannada News-suddikshana

ಬಣಗಳ ನಡುವಿನ ಯುದ್ಧದ ಅಂತಿಮ ವಿಜಯಕ್ಕಾಗಿ ತಂತ್ರ; ಹೊಸ ದಾಳ ಉರುಳಿಸಿದ ವಿಜಯೇಂದ್ರ!

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ, ಎರಡು ಬಣಗಳಾಗಿರುವ ಪಕ್ಷದಲ್ಲಿ ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗುವುದು ಸವಾಲಿನ ಕೆಲಸವಾಗಿದೆ. ರಾಜ್ಯ ಬಿಜೆಪಿಯಲ್ಲಿ ಬಣಗಳ ನಡುವಿನ ವಾರ್​ನಲ್ಲಿ ಅಂತಿಮ ಗೆಲುವಿಗೆ ತಂತ್ರಗಾರಿಕೆ ನಡೆಸಲಾಗುತ್ತಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಮಾಜಿ ಸಚಿವರು, ಶಾಸಕರು, ಸಂಸದರ ಸಭೆ ಕರೆದಿದ್ದಾರೆ.

ಪಕ್ಷದ ನಾಯಕರನ್ನು ವಿಶ್ವಾಸಕ್ಕೆ ಪಡೆಯಲು ಬಿ ವೈ ವಿಜಯೇಂದ್ರ ತಂತ್ರಗಾರಿಕೆ ನಡೆಸುತ್ತಿದ್ದು, ಜನವರಿ 10 ರಂದು ಖಾಸಗಿ ಹೋಟೆಲ್​ನಲ್ಲಿ ಭೋಜನ ಕೂಟ ಏರ್ಪಾಡು ಮಾಡಿದ್ದಾರೆ. ಪಕ್ಷ ಸಂಘಟನೆಗೆ ಮುಂದಾಗಿರುವ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಬಿ ಎಸ್ ಯಡಿಯೂರಪ್ಪ ಕೂಡ ಸಾಥ್ ನೀಡಲಿದ್ದಾರೆ.

ಒಂದೆಡೆ ದೆಹಲಿಯಲ್ಲಿ ಬಿಜೆಪಿ ನಾಯಕರು ರಾಜ್ಯಾಧ್ಯಕ್ಷರ ವಿರುದ್ಧ ರಣತಂತ್ರ ಹೆಣೆಯುತ್ತಿದ್ದರೆ ಇತ್ತ ವಿಜಯೇಂದ್ರ ಅವರು ಪಕ್ಷದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಶುಕ್ರವಾರ ನಡೆಯಲಿರುವ ಸಭೆಗೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕೂಡ ಆಗಮಿಸುತ್ತಿದ್ದಾರೆ. ನಾಳೆ ನಡೆಯಲಿರುವ ಸಭೆಗೆ ಮಾಜಿ ಶಾಸಕರುಗಳು, ಮಾಜಿ ಮಂತ್ರಿಗಳು, ಮಾಜಿ ಪರಿಷತ್ ಸದಸ್ಯರುಗಳಿಗೆ ಮಾತ್ರ ಆಹ್ವಾನ ನೀಡಲಾಗಿದೆ.

ಇತ್ತೀಚೆಗೆ ದೆಹಲಿಗೆ ತೆರಳಿದ್ದ ಬಿಜೆಪಿ ನಾಯಕರ ಟೀಂ ರಹಸ್ಯವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದೆ. ಈ ಭೇಟಿ ವಿಚಾರವನ್ನು ಗೌಪ್ಯವಾಗಿಡುವಂತೆ ನಾಯಕರಿಗೆ ಅಮಿತ್ ಶಾ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಮಂಗಳವಾರ ಸುಮಾರು 45 ನಿಮಿಷಗಳ ಕಾಲ ಅಮಿತ್ ಶಾ ಜೊತೆ ಬಿಜೆಪಿ ನಾಯಕರ ಟೀಂ ಮಾತನಾಡಿದೆ ಎಂದು ತಿಳಿದು ಬಂದಿದೆ. ಯತ್ನಾಳ್ ಅನುಪಸ್ಥಿತಿಯಲ್ಲಿ ಅಮಿಯ್ ಶಾ ಜೊತೆ ಬಿಜೆಪಿ ನಾಯಕರು ಮಾತುಕತೆ ನಡೆಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬಗ್ಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೆ‌ ರಾಜ್ಯಾಧ್ಯಕ್ಷರ ಬದಲಾವಣೆಯ ಅವಶ್ಯಕತೆ ಬಗ್ಗೆ ಅಮಿತ್ ಶಾ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ.

ಅಲ್ಲದೆ ಒಬಿಸಿ ಕೋಟಾದಡಿ ಕುಮಾರ್ ಬಂಗಾರಪ್ಪಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡುವಂತೆ ಅಮಿತ್ ಶಾ ಮುಂದೆ ನಾಯಕರು ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ. ವಕ್ಫ್​ ಹೋರಾಟದ ವರದಿ ಬಗ್ಗೆಯೂ ಅಮಿತ್ ಶಾ ಅವರಿಗೆ ನಾಯಕರು ಮಾಹಿತಿ ನೀಡಿದ್ದು, ವಕ್ಫ್​ ಹೋರಾಟಕ್ಕೆ ಬಿಜೆಪಿ ನಾಯಕರಿಗೆ ಅಮಿತ್ ಶಾ ಶಹಬ್ಬಾಸ್ ಎಂದಿದ್ದಾರೆ. ಅಲ್ಲದೆ ತಾಲೂಕು ಹಂತದಲ್ಲಿ ವಕ್ಫ್​ ಹೋರಾಟ ಕೊಂಡೊಯ್ಯುವಂತೆ ಅಮೀತ್ ಶಾ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಅಮಿತ್ ಶಾ ಭೇಟಿಗಾಗಿಯೇ ನಿನ್ನೆಯಿಂದ ದೆಹಲಿಯಲ್ಲಿ ಠಿಕಾಣಿ ಹೂಡಿದ್ದ ಬಿಜೆಪಿ ನಾಯಕರು, ಅಂದುಕೊಂಡಂತೆ ಭೇಟಿ ಮಾಡಿದ್ದಾರೆ ಎನ್ನಲಾಗಿದೆ.

ನಾಯಕರ ದೆಹಲಿ ಭೇಟಿ ಬೆನ್ನಲ್ಲೇ ಆ್ಯಕ್ಟಿವ್ ಆದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ಕೊಡಲು ಮುಂದಾಗಿದ್ದಾರೆ. ಪರಾಜಿತ ಅಭ್ಯರ್ಥಿಗಳೊಂದಿಗೆ ಬಿ ವೈ ವಿಜಯೇಂದ್ರ ಸಭೆ ನಡೆಸಲು ಪ್ಲ್ಯಾನ್ ಮಾಡಿದ್ದಾರೆ. ಅಲ್ಲದೆ ಸ್ಥಳೀಯ ಸಂಸ್ಥೆಗಳ ಚುನಾವಣಾ‌ ಸಿದ್ದತೆಗಾಗಿ ಬೆಂಗಳೂರಲ್ಲಿ ಸಭೆ ಕರೆದಿದ್ದಾರೆ.

Exit mobile version