Home ದಾವಣಗೆರೆ ಸಿಎಂ ಕುರ್ಚಿ ಕಚ್ಚಾಟ ಬಿಟ್ಟು ರೈತರ ಬೇಡಿಕೆ ಈಡೇರಿಸಿ: ಬಿ. ವೈ. ವಿಜಯೇಂದ್ರ
ದಾವಣಗೆರೆಬೆಂಗಳೂರು

ಸಿಎಂ ಕುರ್ಚಿ ಕಚ್ಚಾಟ ಬಿಟ್ಟು ರೈತರ ಬೇಡಿಕೆ ಈಡೇರಿಸಿ: ಬಿ. ವೈ. ವಿಜಯೇಂದ್ರ

Share
ಬಿ. ವೈ. ವಿಜಯೇಂದ್ರ
Share

SUDDIKSHANA KANNADA NEWS/DAVANAGERE/DATE:25_11_2025

ದಾವಣಗೆರೆ: ರೈತ ವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಇವತ್ತು ಹೋರಾಟಕ್ಕೆ ಚಾಲನೆ ನೀಡಿದ್ದೇವೆ. ಸಿಎಂ ಕುರ್ಚಿ ಕಚ್ಚಾಟ ಬಿಟ್ಟು ರೈತರ ಬೇಡಿಕೆ ಈಡೇರಿಸಲು ರಾಜ್ಯ ಸರ್ಕಾರ ಗಮನ ಹರಿಸಬೇಕು. ಆದಷ್ಟು ಬೇಗ ಭತ್ತ ಮತ್ತು ಮೆಕ್ಕೆಜೋಳ ಖರೀದಿ ಕೇಂದ್ರ ತೆರೆದು ಎಲ್ಲಾ ಬೆಳೆಗಳನ್ನು ಖರೀದಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಒತ್ತಾಯಿಸಿದರು.

READ ALSO THIS STORY: ಗೊಂದಲಕ್ಕೆ ಹೈಕಮಾಂಡ್ ಇತಿಶ್ರೀ ಹಾಡಬೇಕು, ರಾಹುಲ್ ಗಾಂಧಿ ಭೇಟಿ ಸದ್ಯಕ್ಕಿಲ್ಲ: ಹೊಸ ದಾಳ ಉರುಳಿಸಿದ ಸಿಎಂ ಸಿದ್ದರಾಮಯ್ಯ!

ಬಿ. ವೈ. ವಿಜಯೇಂದ್ರ

ಮೆಕ್ಕೆಜೋಳ ಮತ್ತು ಭತ್ತ ಖರೀದಿ ಕೇಂದ್ರ ತೆರೆಯಬೇಕು ಎಂದು ಒತ್ತಾಯಿಸಿ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ವಿರುದ್ಧ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಂಕಷ್ಟದಲ್ಲಿರುವ ರೈತರಿಗೆ ಸ್ಪಂದಿಸದೇ ಇರುವುದು ಅಕ್ಷಮ್ಯ ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೆಕ್ಕೆಜೋಳದ ಬೆಳೆಗಾರರು ಹೋರಾಟ ಮಾಡುತ್ತಿದ್ದಾರೆ. ಲಕ್ಷ್ಮೇಶ್ವರದಲ್ಲಿ ಹೋರಾಟ ನಡೆಯುತ್ತಿದೆ. ನವಲಗುಂದದಲ್ಲಿ ರೈತ ಮುಖಂಡ ಶಂಕ್ರಣ್ಣ ಅಂಬಳಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ಬಾಗಲಕೋಟೆ, ಶಿವಮೊಗ್ಗ ಸೇರಿ ಅನೇಕ ಜಿಲ್ಲೆಗಳಲ್ಲಿ ಹೋರಾಟ ನಡೆಯುತ್ತಿದೆ. ಕೇಂದ್ರವು ಬೆಂಬಲ ಬೆಲೆ ಘೋಷಿಸಿದ್ದರೂ ರಾಜ್ಯ ಸರಕಾರವು ಖರೀದಿ ಕೇಂದ್ರ ತೆರೆದಿಲ್ಲ ಎಂದು ಆಕ್ಷೇಪಿಸಿದರು.

ಮುಖ್ಯಮಂತ್ರಿಗಳು ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಬೇಕು. ತುಂಗಭದ್ರಾ ಅಣೆಕಟ್ಟಿಗೆ 32 ಕ್ರಸ್ಟ್ ಗೇಟ್ ಅಳವಡಿಸದೇ ಕೊಪ್ಪಳ, ಬಳ್ಳಾರಿ, ವಿಜಯನಗರ, ರಾಯಚೂರು ಸುತ್ತಲಿನ ರೈತರು ಎರಡನೇ ಬೆಳೆ ಬೆಳೆಯಲು ಆಗುತ್ತಿಲ್ಲ. ರಾಜ್ಯ ಸರಕಾರ ಈ ನಿಟ್ಟಿನಲ್ಲಿ ಅನ್ಯಾಯ ಮಾಡಿದೆ. ಅವರಿಗೆ ಎಕರೆಗೆ 25 ಸಾವಿರ ಪರಿಹಾರ ಕೊಡಬೇಕೆಂದು ಒತ್ತಾಯಿಸಿದರು.

ರಾಜ್ಯದ ರೈತರ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸದೇ ಇಡೀ ಸಚಿವಸಂಪುಟವು ದೆಹಲಿಯಲ್ಲಿ ಕುಳಿತಿದೆ. ಮುಖ್ಯಮಂತ್ರಿಗಳು ಮೆಕ್ಕೆಜೋಳ ಖರೀದಿ ಕೇಂದ್ರದ ಕುರಿತು ಚರ್ಚಿಸಲು ಸಭೆ ಕರೆದರೆ ಕೃಷಿ ಸಚಿವರು ದೆಹಲಿಯಲ್ಲಿದ್ದರು ಎಂದು ಟೀಕಿಸಿದರು.

ಸಿಎಂ ಯಾರೆಂಬುದು ಮುಖ್ಯವಲ್ಲ, ಪರಿಹಾರ ಕೊಡಿ:

ಮುಖ್ಯಮಂತ್ರಿ ಯಾರೆಂಬುದು ನಮಗೆ ಸಂಬಂಧವಿಲ್ಲ. ರೈತರ ಸಮಸ್ಯೆಗೆ ತಕ್ಷಣ ಪರಿಹಾರ ನೀಡಬೇಕೆಂದು ಆಗ್ರಹಿಸಿದರು. ಇದೇ 27, 28ರಂದು ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ಹೋರಾಟಕ್ಕೆ ಕರೆ ನೀಡಲಾಗಿದೆ. ಡಿ.1 ಮತ್ತು 2ರಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ
ಬಿಜೆಪಿ ರೈತ ಮೋರ್ಚಾ ಹೋರಾಟ ಮಾಡಲಿದೆ ಎಂದು ತಿಳಿಸಿದರು.

ಇದಕ್ಕೂ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು, ಕಬ್ಬು ಬೆಳೆಗಾರರು, ಮೆಕ್ಕ ಜೋಳ ಬೆಳೆಗಾರರ ಸಮಸ್ಯೆಗೆ ರಾಜ್ಯ ಸರಕಾರ ಸ್ಪಂದಿಸುತ್ತಿಲ್ಲ ಎಂದು ಟೀಕಿಸಿದರು. ಸರಕಾರವನ್ನು ಎಚ್ಚರಿಸುವ ದೃಷ್ಟಿಯಿಂದ ಇಲ್ಲಿ ಹೋರಾಟಕ್ಕೆ ಚಾಲನೆ ಕೊಡಲಾಗುತ್ತಿದೆ ಎಂದು ಪ್ರಕಟಿಸಿದರು.

ರೈತ ಮೋರ್ಚಾ ರಾಜ್ಯ ಅಧ್ಯಕ್ಷ ನಡಹಳ್ಳಿ, ರಾಜ್ಯದ ಹಿರಿಯ ನಾಯಕ ಸಿ.ಟಿ.ರವಿ, ಮುಖಂಡರಾದ ರೇಣುಕಾಚಾರ್ಯ, ಮಾಡಾಳ್ ವಿರೂಪಾಕ್ಷಪ್ಪ ಸೇರಿ ಜಿಲ್ಲೆಯ ನಾಯಕರು ಒಟ್ಟಾಗಿ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ. ರಾಜ್ಯದಲ್ಲಿರುವ ಅನಿಷ್ಟ ರೈತವಿರೋಧಿ ಕಾಂಗ್ರೆಸ್ ಸರಕಾರವು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ ಅವರು, ಮುಖ್ಯಮಂತ್ರಿ ಯಾರು ಇರುತ್ತೀರೋ, ಬಿಡುತ್ತೀರೋ ಗೊತ್ತಿಲ್ಲ. ದರಿದ್ರ ಸರ್ಕಾರ ತೊಲಗಬೇಕು ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಸಿ. ಟಿ. ರವಿ, ಮಾಜಿ ಸಚಿವರಾದ ಹರತಾಳು ಹಾಲಪ್ಪ, ಎಂ. ಪಿ. ರೇಣುಕಾಚಾರ್ಯ, ಮಾಜಿ ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ, ಬಸವರಾಜ್ ನಾಯ್ಕ್, ಎಸ್. ವಿ. ರಾಮಚಂದ್ರಪ್ಪ, ಲೋಕಿಕೆರೆ ನಾಗರಾಜ್, ಅಜಯ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್ ನಾಗಪ್ಪ, ಶಿವಯೋಗಿಸ್ವಾಮಿ, ಚಂದ್ರಶೇಖರ್ ಪೂಜಾರಿ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.

Share

Leave a comment

Leave a Reply

Your email address will not be published. Required fields are marked *