SUDDIKSHANA KANNADA NEWS/ DAVANAGERE/ DATE:09-11-2024
ದಾವಣಗೆರೆ: ರಾಜ್ಯಮಟ್ಟದ ಕರಾಟೆ ಸ್ಪರ್ಧೆ ದಾವಣಗೆರೆಯ ನಗರದ ಎಸ್ ಎಸ್ ಬಡಾವಣೆಯಲ್ಲಿರುವ ನೇತಾಜಿ ಸುಭಾಷ್ ಚಂದ್ರಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಬರೋಬ್ಬರಿ 32 ಜಿಲ್ಲೆಗಳಿಂದಲೂ ಕ್ರೀಡಾಪಟುಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಪದವಿಪೂರ್ವ ಶಾಲಾ ಶಿಕ್ಷಣ ಇಲಾಖೆ ಹಾಗೂ ರಾಘವೇಂದ್ರ ಹೈ- ಟೆಕ್ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ನವೆಂಬರ್ 13 ಮತ್ತು 14ರಂದು 2024-25ನೇ ಸಾಲಿನ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕರಾಟೆ ಸ್ಪರ್ಧೆ ಏರ್ಪಡಿಸಿದ್ದು, ಬೆಳಗ್ಗೆ 8ಗಂಟೆಗೆ ಪಂದ್ಯಗಳು ಶುರುವಾಗುತ್ತವೆ ಎಂದು ಡಿಡಿಪಿಯು ಎಸ್.ಜಿ ಕರಿಸಿದ್ದಪ್ಪ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕ್ರೀಡಾಕೂಟಕ್ಕೆ ಆಗಮಿಸುವ ವಿದ್ಯಾರ್ಥಿಗಳಿಗೆ ಊಟ, ವಸತಿಸೌಲಭ್ಯ ವ್ಯವಸ್ಥಿತವಾಗಿ ಮಾಡಲಾಗುತ್ತದೆ. 32 ಜಿಲ್ಲೆಗಳಿಂದ ಕ್ರೀಡಾಪಟುಗಳು ಆಗಮಿಸಲಿದ್ದಾರೆ. ಬಾಲಕರ ತಂಡದಿಂದ ಒಂದು ಜಿಲ್ಲೆಯಿಂದ 13 ಹಾಗೂ ಬಾಲಕಿಯರ ತಂಡದಿಂದ 11
ಕ್ರೀಡಾಪಟುಗಳು ಹಾಗೂ ಎರಡೂ ತಂಡಗಳಿಂದ ಇಬ್ಬರು ತಂಡದ ವ್ಯವಸ್ಥಾಪಕರು ಬರಲಿದ್ದಾರೆ ಎಂದು ತಿಳಿಸಿದರು.
ಒಟ್ಟು363 ಬಾಲಕಿಯರು, 420 ಬಾಲಕರು ಸೇರಿದಂತೆ ಒಟ್ಟು 793 ಕ್ರೀಡಾಪಟುಗಳು ಹಾಗೂ ತಂಡಗಳ 66 ವ್ಯವಸ್ಥಾಪಕರು ಸೇರಿ ಒಟ್ಟು 859 ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ನ. 13 ಮತ್ತು 14ರಂದು ಆಯಾ ಸ್ಪರ್ಧೆಗಳು ಮುಗಿದ ನಂತರ ಬಹುಮಾನ ವಿತರಿಸಲಾಗುವುದು. ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾದವರ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ನ. 12 ರಂದು ಸಂಜೆ 5 ಗಂಟೆಗೆ ಕ್ರೀಡಾಕೂಟಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಚಾಲನೆ ನೀಡಲಿದ್ದು, ಶಾಮನೂರು ಶಿವಶಂಕರಪ್ಪ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಕ್ರೀಡಾ ಜ್ಯೋತಿ ಸ್ವೀಕಾರ ಮಾಡಲಿದ್ದಾರೆಂದರು.
ಮುಖ್ಯ ಅತಿಥಿಗಳಾಗಿ ಪರಿಷತ್ ಸದಸ್ಯರಾದ ಎಸ್ ಎಲ್ ಭೋಜೇಗೌಡ, ಚಿದಾನಂದ ಎಂ. ಗೌಡ, ಡಿ. ಎಸ್. ಅರುಣ್, ಕೆ. ಎಸ್ ನವೀನ್, ಕೆ. ಅಬ್ದುಲ್ ಜಬ್ಬಾರ್, ಶಾಸಕರಾದ ಕೆ.ಎಸ್ ಬಸವಂತಪ್ಪ,ಬಸವರಾಜು ವಿ ಶಿವಗಂಗಾ ಸೇರಿದಂತೆ ಗಣ್ಯರು ಆಗಮಿಸಲಿದ್ದಾರೆಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ರಾಘವೇಂದ್ರ ಹೈಟೆಕ್ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ. ಅನಿಲ್ ಕುಮಾರ್ ಶ್ಯಾಗಲೆ, ಎಸ್. ಪ್ರದೀಪ್ ಕುಮಾರ್, ಎಂ. ಗಣೇಶ್, ನಾಗರಾಜ್, ರಾಘವೇಂದ್ರ ಹಾಜರಿದ್ದರು.