Site icon Kannada News-suddikshana

ಎಸ್ ಎಸ್ ಎಲ್ ಸಿ ಎಕ್ಸಾಂ ಮಾರ್ಚ್ 25 ರಿಂದ ಶುರು: ಯಾವ್ಯಾವಾಗ ಯಾವ ವಿಷಯದ ಪರೀಕ್ಷೆ ಇದೆ ಗೊತ್ತಾ…?

SUDDIKSHANA KANNADA NEWS/ DAVANAGERE/ DATE:16-03-2024

ದಾವಣಗೆರೆ: ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯು ಮಾರ್ಚ್ 25 ರಿಂದ ಆರಂಭವಾಗುತ್ತಿದ್ದು ಜಿಲ್ಲೆಯಲ್ಲಿ 82 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. ಕೇಂದ್ರಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸುವುದರೊಂದಿಗೆ ಪರೀಕ್ಷೆಯನ್ನು ಸುಗಮವಾಗಿ ನಡೆಸಿಕೊಡಲು ಎಲ್ಲಾ ಸಿದ್ದತೆ ಕೈಗೊಳ್ಳಲು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ತಿಳಿಸಿದರು.

ಅವರು ನಗರದ ಗುರುಭವನದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷಾ ಪೂರ್ವ ಸಿದ್ದತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ 166 ಸರ್ಕಾರಿ, 172 ಅನುದಾನಿತ, 134 ಅನುದಾನ ರಹಿತ ಸೇರಿ 472 ಪ್ರೌಢಶಾಲೆಗಳಿಂದ 11131 ಗಂಡು, 11130 ಹೆಣ್ಣು ಸೇರಿ 22261 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯಲಿದ್ದಾರೆ. ಜಿಲ್ಲೆಯಲ್ಲಿ 41 ಕೇಂದ್ರಗಳು ಸರ್ಕಾರಿ ಪ್ರೌಢಶಾಲೆ, 35 ಅನುದಾನಿತ, 6 ಅನುದಾನ ರಹಿತ ಪ್ರೌಢಶಾಲೆಗಳು ಸೇರಿ 82 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ತಾಲ್ಲೂಕುವಾರು ವಿವರದನ್ವಯ ಚನ್ನಗಿರಿ 16, ದಾವಣಗೆರೆ ಉತ್ತರ 14, ದಾವಣಗೆರೆ ದಕ್ಷಿಣ 17, ಹರಿಹರ 12, ಹೊನ್ನಾಳಿ 11 ಹಾಗೂ ಜಗಳೂರು ತಾಲ್ಲೂಕಿನ 12 ಕೇಂದ್ರಗಳಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಯಲಿದೆ ಎಂದರು.

ಒಟ್ಟು ಪರೀಕ್ಷಾ ಕೇಂದ್ರಗಳಲ್ಲಿ 40 ಗ್ರಾಮೀಣ, 42 ನಗರ, ಪಟ್ಟಣದ ಕೇಂದ್ರಗಳಾಗಿವೆ. ಪರೀಕ್ಷೆ ನಡೆಯುತ್ತಿರುವ ಎಲ್ಲಾ ಕೇಂದ್ರಗಳಿಗೆ ಸಿಸಿಟಿವಿ ಅಳವಡಿಸಲಾಗುತ್ತಿದ್ದು ಇದರಲ್ಲಿ 10 ಕೇಂದ್ರಗಳನ್ನು ಸೂಕ್ಷ್ಮ, ಅತೀಸೂಕ್ಷ್ಮ ಎಂದು ಗುರುತಿಸಿದ್ದು ಇಲ್ಲಿ ವಿಶೇಷ ಭದ್ರತೆ ಮತ್ತು ನಿಗಾವಹಿಸಲು ಸೂಚನೆ ನೀಡಿದರು.

ಸಕಾಲದಲ್ಲಿ ಪ್ರಶ್ನೆಪತ್ರಿಕೆ:

ಪ್ರಶ್ನೆ ಪತ್ರಿಕೆಗಳನ್ನು ಖಜಾನೆಯಿಂದ ಸಕಾಲದಲ್ಲಿ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆಗಳನ್ನು ತಲುಪಿಸಲು ಒಟ್ಟು 30 ಮಾರ್ಗಗಳನ್ನು ಗುರುತಿಸಲಾಗಿದೆ. ಮಾರ್ಗದ ಅಧಿಕಾರಿಗಳು ಯಾವುದೇ ವಿಳಂಬಕ್ಕೆ ಅವಕಾಶ ನೀಡದೆ ಸಕಾಲದಲ್ಲಿ ತಲುಪಿಸಬೇಕೆಂದು ಸೂಚನೆ ನೀಡಿದರು.

ಸುಗಮ ಪರೀಕ್ಷೆ ನಡೆಸಲು ಸೂಚನೆ; ಪರೀಕ್ಷೆಯಲ್ಲಿ ಯಾವುದೇ ಗೊಂದಲಕ್ಕೆ ಅವಕಾಶ ಮಾಡದೆ ವಿದ್ಯಾರ್ಥಿಗಳು ಯಾವುದೇ ಭಯದ ವಾತಾವರಣದಲ್ಲಿ ಪರೀಕ್ಷೆ ಬರೆಯದಂತೆ ಪ್ರಶಾಂತ ವಾತಾವರಣ ಕಲ್ಪಿಸಲು ಪರೀಕ್ಷಾ ಕೇಂದ್ರದ ಅಧೀಕ್ಷಕರು ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳಿಗೆ ಪರೀಕ್ಷಾ ಮಾರ್ಗಸೂಚಿಗಳ ಬಗ್ಗೆ ಮಾಹಿತಿ ನೀಡಿ ಇಲ್ಲಿ ಯಾವುದೇ ಪರೀಕ್ಷಾ ಅವ್ಯವಹಾರ ನಡೆಯದಂತೆ ನೋಡಿಕೊಂಡು ಸುಗಮವಾಗಿ ಪರೀಕ್ಷೆ ನಡೆಸಬೇಕೆಂದು ಸೂಚನೆ ನೀಡಿ ಕೇಂದ್ರದ ಸುತ್ತಮುತ್ತ 144 ಸೆಕ್ಷನ್ ಜಾರಿಗೊಳಿಸುವ ಮೂಲಕ ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತದೆ ಎಂದರು.

ಮಾರ್ಚ್ 25 ರಂದು ಬೆಳಗ್ಗೆ 10.15 ರಿಂದ ಮ.1.30 ರ ವರೆಗೆ ಪ್ರಥಮ ಭಾಷೆ ಪರೀಕ್ಷೆ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲೀಷ್, ಇಂಗ್ಲೀಷ್ ಎನ್.ಸಿ.ಇ.ಆರ್.ಟಿ, ಸಂಸ್ಕೃತ, ಮಾ.27 ರಂದು ಸಮಾಜ ವಿಜ್ಞಾನ, ಮಾ.30 ರಂದು ವಿಜ್ಞಾನ, ರಾಜ್ಯಶಾಸ್ತ್ರ, ಮಧ್ಯಾಹ್ನ 2 ರಿಂದ ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಏ.2 ರಂದು ಗಣಿತ, ಸಮಾಜಶಾಸ್ತ್ರ, ಎಲಿಮೆಂಟ್ಸ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್, ಮೆಕಾನಿಕಲ್ ಮತ್ತು ಎಲೆಕ್ಟ್ರಿಕಲ್ ಇಂಜಿನಿಯರಿಂಗ್, ಏ.3 ರಂದು ಎಲಿಮೆಂಟ್ಸ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್, ಮೆಕಾನಿಕಲ್ ಮತ್ತು ಎಲೆಕ್ಟ್ರಿಕಲ್ ಇಂಜಿನಿಯರಿಂಗ್, ಏ.4 ರಂದು ತೃತೀಯ ಭಾಷೆ ಹಿಂದಿ, ಕನ್ನಡ, ಇಂಗ್ಲೀಷ್, ಉರ್ದು, ತುಳು, ಅರೆಬಿಕ್, ಸಂಸ್ಕೃತ, ಏಪ್ರಿಲ್ 6 ರಂದು ದ್ವಿತೀಯ ಭಾಷೆ ಇಂಗ್ಲೀಷ್, ಕನ್ನಡ ವಿಷಯಗಳ ಪರೀಕ್ಷೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಹೆಚ್ಚುವರಿ ರಕ್ಷಣಾಧಿಕಾರಿ ವಿಜಯಕುಮಾರ್ ಎಂ.ಸಂತೋಷ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರಾದ ಕೊಟ್ರೇಶ್, ಡಯಟ್ ಪ್ರಾಂಶುಪಾಲರಾದ ಗೀತಾ ಹಾಗೂ ಎಲ್ಲಾ ತಾಲ್ಲೂಕಿನ
ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕೇಂದ್ರ ಅಧೀಕ್ಷಕರು ಉಪಸ್ಥಿತರಿದ್ದರು.

Exit mobile version