SUDDIKSHANA KANNADA NEWS/DAVANAGERE/DATE:19_12_2025
ಗುರುವಿನ ಮಹಿಮೆ ಅಪಾರ. ‘ಗುರುವಿಗಿಂತಲೂ ಅಧಿಕವಾದ ತತ್ತ್ವವಿಲ್ಲ; ಗುರುವಿಗಿಂತಲೂ ಅಧಿಕವಾದ ತಪಸ್ಸಿಲ್ಲ;ಗುರುವಾಣಿಯ ತತ್ವಜ್ಞಾನಕ್ಕಿಂತಲೂ ಶ್ರೇಷ್ಠವಾದದ್ದು ಯಾವುದೂ ಇಲ್ಲ. ‘ಅಂತರಂಗಕ್ಕಿಂತ ನ್ಯಾಯಾಲಯವಿಲ್ಲ; ಆತ್ಮಸಾಕ್ಷಿಗಿಂತ ತೀರ್ಪು ಮತ್ತೊಂದಿಲ್ಲ’ ಎಂಬ ಸತ್ಯವನ್ನು ಶಿಷ್ಯರ ಆಂತರ್ಯದಲ್ಲಿ ಪ್ರತಿಷ್ಠಾಪಿಸುತ್ತಾ, ‘ನಿನಗೆ ನೀನೇ ಬೆಳಕಾಗು’ ಎಂಬ ಸಂದೇಶವನ್ನು ತಮ್ಮ ಕಾಯಕದಲ್ಲಿಯೇ ಅಭಿವ್ಯಕ್ತಿಗೊಳಿಸುವ ಅಪರೂಪದ ವ್ಯಕ್ತಿತ್ವದ ಸಂತ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಶಾಖಾ ಮಠವಾದ ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಹರಳಕಟ್ಟ ಶ್ರೀ ಮಠದ ಪಟ್ಟಾಧ್ಯಕ್ಷರಾದ ಶ್ರೀ ಶಿವಪ್ರಕಾಶ ಶಿವಾಚಾರ್ಯ ಸ್ವಾಮಿಗಳವರದು.
READ ALSO THIS STORY: ಐಷಾರಾಮಿ ಕಾರುಗಳ ನೋಂದಣಿಗೆ ಖೊಟ್ಟಿ ದಾಖಲೆ ಸೃಷ್ಟಿಸಿ ನಿಜವಾದ ಮೌಲ್ಯ ಮರೆಮಾಚಿ ನೋಂದಣಿ ಮಾಡಿದ್ದರೆ ಮುಲಾಜಿಲ್ಲದೇ ಕ್ರಮದ ಎಚ್ಚರಿಕೆ!
‘ಗುರು’ ಎಂದರೆ ‘ಲಘು’ ಅಲ್ಲ. ಗುರುವೇ ತತ್ತ್ವ, ಆತನೇ ತಪಸ್ಸು! ತರಗತಿಯಲ್ಲಿ ಮಕ್ಕಳ ಮುಂದಿರುವ ಶಿಕ್ಷಣವೇ ಶ್ರೇಷ್ಠ ಗ್ರಂಥ! ಗುರುವನ್ನು ಲಘುವಾಗಿ ಭಾವಿಸುವುದರೊಂದಿಗೆ ಮಾನವನ ಸಂತತಿ ಅವನತಿಯತ್ತ ಸಾಗುತ್ತದೆ. ‘ಹರಿ ಮುನಿದರೆ ಗುರು ಕಾಯ್ವನು, ಗುರು ಮುನಿದರೆ ಕಾಯುವರಾರು?’ ಎಂದಿದ್ದಾರೆ ಸಾಧಕರು.
ಸರ್ವತ್ರ ಪೂಜನೀಯ ಶ್ರೀ ತರಳಬಾಳು ಜಗದ್ಗುರು ಶ್ರೀ ೧೧೦೮ ಡಾ॥ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಕೃಪಾಶೀರ್ವಾದದಿಂದ 19-12-2002 ರಂದು ಸನ್ಯಾಸ ಸ್ವೀಕರಿಸಿ ಸದ್ದುಗದ್ದಲವಿಲ್ಲದೆ,ನಿಜ ಅಕ್ಷರದಾಸೋಹಿತ್ವದ ಕಾಯಕ ಯೋಗಿಯಾಗಿ, ಎಲೆಯ ಮರೆಯ ಕಾಯಿಯಂತೆ ಸ್ಮರಣೀಯ ಸೇವೆಯ ಶ್ರೀ ಶಿವಪ್ರಕಾಶ ಶಿವಾಚಾರ್ಯ ಸ್ವಾಮಿಗಳವರು ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯನ್ನು ಮಾಹೇಶ್ವರ ನಿಷ್ಠೆಯಿಂದ ಮುನ್ನಡೆಸುತ್ತಿದ್ದಾರೆ. ಪೂಜ್ಯರ ಶೈಕ್ಷಣಿಕ ಕನಸಿನಂತೆ ಸಾಗಿದ ಸಹಸ್ರ ಸಹಸ್ರ ವಿದ್ಯಾರ್ಥಿಗಳು ಇಂದು ದೇಶ ವಿದೇಶಗಳಲ್ಲಿ ವಿಜ್ಞಾನಿಗಳಾಗಿ, ವೈದ್ಯರಾಗಿ, ಐಎಎಸ್, ಐಪಿಎಸ್ ಅಧಿಕಾರಿಗಳಾಗಿ, ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಗಳಲ್ಲಿ ಮುನ್ನಡೆದಿದ್ದಾರೆ.
ಕಾಯಕದಲ್ಲಿ ನಿರತನಾದಡೆ, ಗುರುದರ್ಶನವಾದಡೂ ಮರೆಯಬೇಕು,ಲಿಂಗಪೂಜೆಯಾದಡೂ ಮರೆಯಬೇಕು, ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು. ಕಾಯಕವೇ ಕೈಲಾಸವಾದ ಕಾರಣ.ಅಮರೇಶ್ವರಲಿಂಗವಾಯಿತ್ತಾದಡೂ ಕಾಯಕದೊಳಗು.ವಚನದಂತೆ, ಕಾಯಕವೇ ಕೈಲಾಸವಾದ ಕಾರಣ ದೇವರು ಕಾಯಕದೊಳಗೇ ಇರುತ್ತಾನೆ ಎಂಬ ಮಾತನ್ನು ಅಕ್ಷರಶಃ ಸಾಕ್ಷಾತ್ಕಾರವಾಗಿಸಿಕೊಂಡಿರುವ ಶ್ರೀ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿಯವರ ತ್ರೀಕಾಲ ಕರ್ತವ್ಯ ಪ್ರಜ್ಞೆಗೆ ಬೆಕ್ಕಸ ಬೆರಗಾಗಲೇಬೇಕು.ಅವರಿಗಿರುವ ಕಾಯಕದ ಬಗೆಗಿನ ಶ್ರದ್ಧೆ ಶರಣರಿಗೆ ನೀಡಿರುವ ಗೌರವದ ಪ್ರತೀಕವಾಗಿದೆ.
ಸಾಧುಗಳು, ಸನ್ಯಾಸಿಗಳು, ಸ್ವಾಮಿಗಳು, ಯೋಗಿಗಳು ಮತ್ತು ಯತಿಗಳು ಆಗುವುದೆಂದರೆ ಕಾಯಕದಿಂದ ದೂರಾಗುವುದು ಎಂದೇ ಅರ್ಥ. ಜ್ಞಾನವನ್ನು ಕ್ರಿಯೆಗೆ ಇಳಿಸಿ ಗೆದ್ದು. ಕಾಯಕವನ್ನೇ ಕೃತಿಯಾಗಿಸುವ ಶ್ರೀ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿಯವರು ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಸಂಕಲ್ಪಕ್ಕೆ ಹೆಗಲಾಗಿ ಸಮಾಜದ ಉನ್ನತಿಗೆ ಶ್ರಮಿಸುತ್ತಿರುವ ಕಾಯಕ ಯೋಗಿಗಳು.
ವೇದಿಕೆ ಮತ್ತು ಭಾಷಣದಿಂದ ದೂರ ಉಳಿದು ನಿಷ್ಠೆ ನಿಷ್ಠುರ, ಸರಳತೆಯ ಶ್ರೀ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿಯವರ ಈ ಮುಂದಿನ ಮಾತುಗಳು ಸದಾ ದಾರಿದೀಪವಾಗಿದೆ: “ಎಲ್ಲಕ್ಕಿಂತ ಕಾಯಕ, ಕರ್ತವ್ಯ ಬಹಳ ಮುಖ್ಯವಾದದ್ದು. ಯಾಕೆಂದರೆ ಕಾಯಕವೇ ಕೈಲಾಸ. ಅದು ಯತ್ನವಿಲ್ಲದೆ ಸಾಧ್ಯವಾಗಲಾರದು. ಆದ್ದರಿಂದ ಪ್ರಯತ್ನ ಅವಶ್ಯಮಾತ್ರವಲ್ಲ, ಅದು ನಮ್ಮ ಕರ್ತವ್ಯ. ಕರ್ತವ್ಯದಿಂದಲೇ ನಮಗೆ ತಿಳುವಳಿಕೆ, ಜ್ಞಾನ ಬರುವುದು. “ನೀನು ಸದಾ ಕರ್ಮವನ್ನು ಮಾಡುತ್ತಲೇ ಇರಬೇಕು. “ಕರ್ಮವಿಲ್ಲದೆ ಮುಕ್ತಿಯಿಲ್ಲ” ಎನ್ನುತ್ತದೆ ಭಗವದ್ಗೀತೆ. ಸತತವಾಗಿ ಪ್ರಯತ್ನ ಮಾಡುತ್ತಲೇ ಇರುವಾಗ ಯಶಸ್ಸು ಬರಬಹುದು, ಸೋಲೂ ಆಗಬಹುದು. ಈ ಯಶಸ್ಸು, ಸೋಲುಗಳು ಜೀವನದ ಪಾಠಗಳು. ಯಾವುದು ನನಗೆ ಹಿತವಾದದ್ದು, ಯಾವುದು ಅಹಿತವಾದದ್ದು ಎಂಬುದು ತಿಳಿಯುವುದು ಈ ಕರ್ಮ ಮಾಡುವಾಗಲೇ. ಮನುಷ್ಯ ಸತತ ಪ್ರಯತ್ನ ಮಾಡುವಾಗ ಅವನ ಕೈ ಮನಸ್ಸು ಬುದ್ಧಿಗಳೆಲ್ಲ ಸಂಲಗ್ನಗೊಳ್ಳಬೇಕು. ಆಗಲೇ ಮನುಷ್ಯ ದೈವತ್ವಕ್ಕೇರುವುದು. ಹೀಗೆ ಮೈಮರೆತು ಪ್ರಯತ್ನ ಮಾಡಿದಾಗಲೇ ಜಗತ್ತು ತನ್ನ ಹೃದಯವನ್ನು ತೆರೆಯುತ್ತದೆ”.
ತರಳಬಾಳು ತತ್ವವೇ ಪೀಠ, ಪೀಠದ ಶ್ರೀ ಜಗದ್ಗುರುಗಳವರೇ ಮಾರ್ಗ ಪ್ರವರ್ತಕರೆಂಬ ಸತ್ಯಾರ್ಥದ ತಪೋ ಭಾವ ತಾಳಿ ಸಮಾಜದ ನಿಜ ಸುಧಾರಕರಾದ ಶ್ರೀ ಶಿವಪ್ರಕಾಶ ಶಿವಾಚಾರ್ಯ ಸ್ವಾಮಿಗಳವರ ಸೇವೆ ಮತ್ತು ತ್ಯಾಗ ಸದಾ ಪೂಜನೀಯವಾದುದು.
ಪೂಜ್ಯರ ಪಟ್ಟಾಭಿಷೇಕವಾಗಿ ಇಂದಿಗೆ 24 ವರ್ಷಗಳು ಸಂದಿವೆ. ಅವರ ಮಾರ್ಗದರ್ಶನ ಆಶೀರ್ವಾದ ಸದಾ ನಮ್ಮೆಲ್ಲರ ಮೇಲಿರಲಿ.






Leave a comment