SUDDIKSHANA KANNADA NEWS/DAVANAGERE/DATE:31_12_2025
ದಾವಣಗೆರೆ: ನಗರದ ಮಿಲ್ಲತ್ ಕ್ಯಾಂಪಸ್ನ ಎಲೈಟ್ ಪಬ್ಲಿಕ್ ಶಾಲೆಯಲ್ಲಿ ಕ್ರೀಡಾ ದಿನಾಚರಣೆ ಹಾಗೂ ವಾರ್ಷಿಕ ಫಿಯೆಸ್ಟ್ ವೀಕ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಮಿಲ್ಲತ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಜನಾಬ್ ಸೈಯದ್ ಸೈಫುಲ್ಲಾ ಸಾಬ್ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು, ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನದ ಜೊತೆಗೆ ಪ್ರತಿಭೆ ಅನಾವರಣಗೊಳ್ಳಲು ಸಹಾಯವಾಗುತ್ತದೆ. ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ, ಭಾಗವಹಿಸುವಿಕೆ ಮುಖ್ಯವಾದದ್ದು ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಪೋಷಕರು ಮಕ್ಕಳಿಗೆ ಕೇವಲ ಪಠ್ಯ ಚಟುವಟಿಕೆಗಳಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಅಂಕ ಗಳಿಕೆಗಷ್ಟೇ ಜಾಸ್ತಿ ಮುತುವರ್ಜಿ ವಹಿಸುತ್ತಾರೆ. ಮಕ್ಕಳ ಮೇಲೆ ಒತ್ತಡ ಹಾಕುತ್ತಾರೆ. ಇಂದಿನ ಆಧುನಿಕ ದಿನಗಳಲ್ಲಿ ಕ್ರೀಡಾ ಚಟುವಟಿಕೆಗಳು ನಿಧಾನವಾಗಿ ನಶಿಸುತ್ತಾ ಹೋಗುತ್ತಿವೆ. ಎಷ್ಟೋ ಕ್ರೀಡಾಪಟುಗಳು ಸೂಕ್ತ ವೇದಿಕೆ ಸಿಗದೇ ಎಲೆಮರೆಯ ಕಾಯಿಯಂತೆ ಉಳಿದುಕೊಂಡು ಬಿಡುತ್ತಾರೆ. ಹಾಗಾಗಿ, ಕ್ರೀಡೆಗಳಲ್ಲಿ ಮಕ್ಕಳಲ್ಲಿನ ಆಸಕ್ತಿ ಗುರುತಿಸಿ ಪ್ರೋತ್ಸಾಹಿಸಬೇಕಾದ ಅಗತ್ಯತೆ ಇದೆ ಎಂದು ಪ್ರತಿಪಾದಿಸಿದರು.
ಮಕ್ಕಳಲ್ಲಿ ಶೈಕ್ಷಣಿಕ ಬೆಳವಣಿಗೆಗೆ ಕ್ರೀಡೆಗಳು ಸಹಕಾರಿಯಾಗುತ್ತವೆ. ಎಷ್ಟೋ ಮಂದಿ ಓದದೇ ಇದ್ದರೂ ಕ್ರೀಡಾ ಚಟುವಟಿಕೆಗಳಲ್ಲಿ ದೇಶ, ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಸಾಧನೆ ಮಾಡಿ ಕೀರ್ತಿ ತಂದಿದ್ದಾರೆ. ಈಗಿನ ಮಕ್ಕಳು ತಮಗಿಷ್ಟವಾದ ಕ್ರೀಡೆಗಳಲ್ಲಿ ಭಾಗವಹಿಸಿ ಗೆಲ್ಲಲು ಪ್ರಯತ್ನಿಸಿ. ಸೋತರೆ ಕುಗ್ಗಬೇಡಿ, ಗೆದ್ದರೆ ಹಿಗ್ಗಬೇಡಿ. ಕ್ರೀಡಾ ಸ್ಫೂರ್ತಿಯಿಂದ ಪಾಲ್ಗೊಳ್ಳಿ. ಆಗ ನಿಮಗೆ ಭವಿಷ್ಯದಲ್ಲಿ ಉತ್ತಮ ಅವಕಾಶಗಳು ಹುಡುಕಿಕೊಂಡು ಬರುತ್ತವೆ ಎಂದು ಹೇಳಿದರು.
ಕಬಡ್ಡಿ, ಖೋಖೋ, ಮಲ್ಲಕಂಬ, ಕುಸ್ತಿ ಸೇರಿದಂತೆ ಎಷ್ಟೋ ಕ್ರೀಡೆಗಳು ನೇಪಥ್ಯಕ್ಕೆ ಸರಿಯುತ್ತಿದ್ದು, ಈ ಕ್ರೀಡೆಗಳಿಗೆ ಉತ್ತೇಜನ ಸಿಗಬೇಕಿದೆ. ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ, ಅವರಿಗೆ ಪ್ರೋತ್ಸಾಹಿಸಿದರೆ ಅತ್ಯುತ್ತಮ ಕ್ರೀಡಾಪಟುಗಳಾಗುವುದರಲ್ಲಿ ಸಂಶಯ ಇಲ್ಲ. ಈ ನಿಟ್ಟಿನಲ್ಲಿ ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿಗಳು ಗಂಭೀರವಾಗಿ ಆಲೋಚನೆ ಮಾಡಬೇಕಿದೆ ಎಂದು ಸೈಯದ್ ಸೈಫುಲ್ಲಾ ಸಾಬ್ ತಿಳಿಸಿದರು.
ಕ್ರೀಡೆಗಳಲ್ಲಿ ಮಕ್ಕಳು ಉತ್ಸಾಹಭರಿತ, ಸಂತೋಷವಾಗಿ ಆಡುತ್ತಿರುವುದನ್ನು ನೋಡಿದರೆ ಖುಷಿಯಾಗುತ್ತದೆ. ಪಠ್ಯ ಚಟುವಟಿಕೆಗಳಿಗೆ ನೀಡುವಷ್ಟೇ ಮಹತ್ವ, ಪ್ರೋತ್ಸಾಹ ಪಠ್ಯೇತರ ಚಟುವಟಿಕೆಗಳಲ್ಲಿಯೂ ಮಕ್ಕಳಿಗೆ ನೀಡಬೇಕಾಗಿದೆ. ರಾಜ್ಯ
ಸರ್ಕಾರವು ಮರೆಯಾಗುತ್ತಿರುವ ಕ್ರೀಡೆಗಳ ಉಳಿವಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ಅಭಿಪ್ರಾಯಪಟ್ಟರು.
ಮಿಲ್ಲತ್ ಆಡಳಿತ ಮಂಡಳಿಯ ಸೈಯದ್ ಖಾಲಿದ್ ಅಹ್ಮದ್, ಸೈಯದ್ ಆಲಿ, ಆರಿಫ್ ಆಲಿ, ಜೀಶನ್ ಜಾಕಿನ್ ಹುಸೇನ್, ಷಡಕಪ್ಪ, ಸೈಯದ್ ತಾಜ್, ಸೈಯದ್ ಜುಫಿಶನ್, ಫಜ್ಲುರ್ ರೆಹಮಾನ್ ಮತ್ತು ಎಲೈಟ್ ಪಬ್ಲಿಕ್ ಶಾಲೆಯ ಶಿಕ್ಷಕರು, ಸಿಬ್ಬಂದಿ ವರ್ಗದವರು ಹಾಜರಿದ್ದರು.





Leave a comment