SUDDIKSHANA KANNADA NEWS/ DAVANAGERE/ DATE:08-12-2024
ದಾವಣಗೆರೆ: ಪ್ರಕಾಶ್ ಪಡುಕೋಣೆ, ದ್ರಾವಿಡ್ ಕ್ರೀಡಾ ಅಕಾಡೆಮಿಯಂತೆಯೇ ದಾವಣಗೆರೆಯಲ್ಲಿಯೂ ಒಲಂಪಿಯನ್ಸ್ ನ ಸೃಷ್ಟಿ ಮಾಡುವಂಥ ಕ್ರೀಡಾ ಅಕಾಡೆಮಿ ಸ್ಥಾಪನೆಯಾಗಬೇಕಾದ ಅವಶ್ಯಕತೆ ಇದೆ ಎಂದು ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ, ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಪ್ರತಿಪಾದಿಸಿದರು.
ನಗರದ ನೇತಾಜಿ ಸುಭಾಷ್ ಚಂದ್ರ ಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 5ನೇ ರಾಷ್ಟ್ರಮಟ್ಟದ ಮುಕ್ತ ಕರಾಟೆ ಸ್ಪರ್ಧೆ-2024 ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರು, ಸಂಸದರು ಕ್ರೀಡಾ ಅಕಾಡೆಮಿ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಎಂದು ಭಾವಿಸುತ್ತೇನೆ ಎಂದರು.
ದಾವಣಗೆರೆಯಲ್ಲಿ ಕ್ರೀಡಾ ಅಕಾಡೆಮಿ ಆಗಬೇಕಾದ ಅವಶ್ಯಕತೆ ತುಂಬಾ ಇದೆ. ಇಲ್ಲಿರುವ ಮಕ್ಕಳನ್ನು ನೋಡಿದರೆ ಖುಷಿಯಾಗುತ್ತದೆ. ರಾಷ್ಟ್ರೀಯ ಮಟ್ಟದಲ್ಲಿ ಸ್ಟೆರಾಯ್ಡ್ ಸೇರಿದಂತೆ ಇನ್ನಿತರ ಉದ್ದೀಪನ ವಸ್ತುಗಳನ್ನು ಸೇವಿಸಿ ಕ್ರೀಡಾಪಟುಗಳು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವುದನ್ನು ನೋಡಿದ್ದೇವೆ. ಸಹಜವಾಗಿ ಸ್ಪರ್ಧಾಳುಗಳ ಪಾಲ್ಗೊಳ್ಳುವಿಕೆ ಉತ್ತಮ ಬೆಳವಣಿಗೆ. ದೇಹರಾರ್ಢ್ಯ ಹಾಗೂ ಕರಾಟೆಯಂಥ ಸ್ಪರ್ಧೆಗಳು ಹೆಚ್ಚಾಗಿ ನಡೆಯಬೇಕು. ಕ್ರೀಡಾಪಟುಗಳು
ಪ್ರತಿಯೊಂದು ಮನೆಯಿಂದಲೂ ಹೊರ ಬರಬೇಕಿದೆ ಎಂದು ಆಶಿಸಿದರು.
ಸಾವಿರಾರು, ಲಕ್ಷಾಂತರ ವಿದ್ಯಾರ್ಥಿಗಳು ಕರಾಟೆ ಅಭ್ಯಸಿಸಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡು ದಾವಣಗೆರೆಯಲ್ಲಿ ರಾಷ್ಟ್ರಮಟ್ಟದ ಮುಕ್ತ ಕರಾಟೆ ಸ್ಪರ್ಧೆ ನಡೆಸಲಾಗುತ್ತಿದೆ. ಇದು ದೇಶದ ಮೂಲೆ ಮೂಲೆಯನ್ನೂ ತಲುಪುವಂತಾಗಲಿ
ಎಂದು ಜಿ. ಬಿ. ವಿನಯ್ ಕುಮಾರ್ ಹಾರೈಸಿದರು.
ಪೋಷಕರು ಮಕ್ಕಳಿಗೆ ಕೇವಲ ಓದಿನಲ್ಲಿ ಮುಳುಗಬೇಕು, ನೀಟ್, ಸಿಇಟಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮಕ್ಕಳು ಹೆಚ್ಚು ತೊಡಗಿಸಿಕೊಳ್ಳಬೇಕು ಎಂಬ ಉದ್ದೇಶದ ಜೊತೆಗೆ ಕರಾಟೆ, ದೇಹದಾರ್ಢ್ಯ, ಕಬಡ್ಡಿ, ಸಂಗೀತ ಸೇರಿದಂತೆ ಕ್ರೀಡಾ ಚಟುವಟಿಕೆಗಳಲ್ಲಿಯೂ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಿ. ಇದು ಜೀವನದ ಅವಿಭಾಜ್ಯ ಅಂಗ. ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಿ. ಕೇವಲ ಪುಸ್ತಕ ಓದುವಿನ ಹುಳುಗಳಂತೆ ಮಾಡಬೇಡಿ ಎಂದು ಕಿವಿಮಾತು ಹೇಳಿದರು.
ಒಲಂಪಿಕ್ಸ್ ನಲ್ಲಿ ಕರಾಟೆ ಇಲ್ಲ. ಇನ್ನೂ ಪರಿಚಯಿಸಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಕ್ರೀಡೆಯನ್ನೂ ಸೇರಿಸಬೇಕೆಂಬ ಚರ್ಚೆ ನಡೆಯುತ್ತಿದೆ. ಉತ್ತಮ ಕೋಚ್ ಗಳ ಅವಶ್ಯಕತೆ ಇದೆ. ಅದೇ ರೀತಿಯಲ್ಲಿ ನೀಡಿದ ಸಲಹೆ, ಸೂಚನೆಗಳನ್ನು ಪಾಲಿಸಿ.
ಫಿಟ್ ಇಂಡಿಯಾ ಮಾಡುತ್ತಿರುವ ನಿಮಗೆಲ್ಲರಿಗೂ ಒಳ್ಳೆಯದಾಗಲಿ ಎಂದು ವಿನಯ್ ಕುಮಾರ್ ಅವರು ಹೇಳಿದರು.
ದಾವಣಗೆರೆಯ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಈ ಕ್ರೀಡಾ ಸಂಸ್ಕೃತಿ ಹುಟ್ಟುಹಾಕಿದೆ. ಕ್ರೀಡೆ ಸಂಸ್ಕೃತಿ ಇರಬೇಕು. ಹೊಸ ಯುಗಕ್ಕೆ ನಾಂದಿ ಹಾಡುತ್ತಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಕರಾಟೆ ಸ್ಪರ್ಧೆ ಆಯೋಜಕ ರೆನ್ಸಿ ಹೆಚ್. ಮಲ್ಲಿಕಾರ್ಜುನ್, ಹೆಚ್. ಎಂ. ಕಾರ್ತಿಕ್, ಚನ್ನಕೇಶವ, ಲೋಹಿತ್ ಕುಮಾರ್, ಸಿದ್ದೇಶ್, ರಘು, ಸುಭಾಷ್ ಹೆಚ್. ಪಿ., ಕರಾಟೆ ತರಬೇತುದಾರರು ಹಾಜರಿದ್ದರು.