SUDDIKSHANA KANNADA NEWS/DAVANAGERE/DATE:13_12_2025
ದಾವಣಗೆರೆ/ನವದೆಹಲಿ; ಅನಾಥ ಮಕ್ಕಳಿಗಾಗಿ ಕೈಗೊಂಡ ವಿಶೇಷ ವ್ಯವಸ್ಥೆಗಳ ಕುರಿತು ಕೇಂದ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಿಗೆ ದಾವಣಗೆರೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಚುಕ್ಕಿರಹಿತ ಪ್ರಶ್ನೆ ಕೇಳಿದ್ದಾರೆ ಹಾಗೂ ಸಚಿವಾಲಯದಿಂದ ಉತ್ತರ ಲಭಿಸಿದೆ.
ಅನಾಥ ಹಾಗೂ ದುರ್ಬಲ ಮಕ್ಕಳಿಗೆ, ವಿಶೇಷವಾಗಿ ಪಾಲಕತ್ವ ಅಥವಾ ಪೋಷಕರ ದಾಖಲೆಗಳು ಲಭ್ಯವಿಲ್ಲದ ಸಂದರ್ಭಗಳಲ್ಲಿ, ಆಧಾರ್ ಸೇರಿದಂತೆ ಅಗತ್ಯ ಗುರುತು ದಾಖಲೆಗಳನ್ನು ಪಡೆಯುವಲ್ಲಿ ಎದುರಾಗುತ್ತಿರುವ ಸವಾಲುಗಳನ್ನು ಸರ್ಕಾರ ಗುರುತಿಸಿದ್ದರೆ, ಅದರ ವಿವರಗಳ ಮಾಹಿತಿ ನೀಡುವಂತೆ ಸಂಸದರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೆ ಪ್ರಶ್ನಿಸಿದ್ದಾರೆ ಹಾಗೂ ಇದರೊಂದಿಗೆ ಈ ಸಮಸ್ಯೆ ನಿವಾರಣೆಗೆ ದಾಖಲೆ ಪ್ರಕ್ರಿಯೆಯನ್ನು ಸರಳಗೊಳಿಸುವುದು, ಸಂಸ್ಥಾತ್ಮಕ ಪ್ರಮಾಣೀಕರಣಕ್ಕೆ ಅವಕಾಶ ಕಲ್ಪಿಸುವುದು ಹಾಗೂ ಗುರುತು, ಶಿಕ್ಷಣ ಮತ್ತು ಕಲ್ಯಾಣಕ್ಕೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ನಿರ್ದೇಶನಗಳ ಪಾಲನೆಯನ್ನು ಖಚಿತಪಡಿಸಲು UIDAI ಮತ್ತು ರಾಜ್ಯ ಸರ್ಕಾರಗಳೊಂದಿಗೆ ಸಂಯೋಜನೆಯ ಮೂಲಕ ಯಾವ ಕ್ರಮಗಳನ್ನು ಕೈಗೊಂಡಿದೆ.
ರಾಷ್ಟ್ರೀಯ ಮಟ್ಟದಲ್ಲಿ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ ಯೋಜನೆಗಳಡಿ ಅನಾಥ ಮಕ್ಕಳಿಗೆ ವಿಶೇಷ ವ್ಯವಸ್ಥೆಗಳನ್ನು ರೂಪಿಸುವ ಕುರಿತು ಸರ್ಕಾರದ ಮುಂದೆ ಯಾವುದೇ ಪ್ರಸ್ತಾವನೆಗಳಿವೆಯೇ. ಹೌದಾದರೆ, ಅವುಗಳ ಪ್ರಮುಖ ಅಂಶಗಳು ಮತ್ತು ಜಾರಿಗೆ ನಿರೀಕ್ಷಿತ ಕಾಲಾವಧಿಯ ವಿವರಗಳನ್ನು ತಿಳಿಸಬೇಕೆಂದು ಕೇಳಿದ್ದಾರೆ. ಆಧಾರ್ ಇಲ್ಲದ ಅನಾಥ ಮಕ್ಕಳಿಗೆ ಶಾಲಾ ಪ್ರವೇಶ, ಪೌಷ್ಟಿಕ ಆಹಾರ ಯೋಜನೆಗಳು, ಮಕ್ಕಳ ಆರೈಕೆ ಸಂಸ್ಥೆಗಳು (CCIs) ಹಾಗೂ ಇತರೆ ಕಲ್ಯಾಣ ಸೌಲಭ್ಯಗಳನ್ನು ನಿರಾಕರಿಸದಂತೆ ಖಚಿತಪಡಿಸಲು ಸರ್ಕಾರ ಯಾವ ಕ್ರಮಗಳನ್ನು ಕೈಗೊಂಡಿದೆ? ಪರ್ಯಾಯ ಪರಿಶೀಲನಾ ವ್ಯವಸ್ಥೆಗಳ ಬಳಕೆಯ ವಿವರಗಳ ಮಾಹಿತಿ ಒದಗಿಸಬೇಕೆಂದು ಕೋರಿದ್ದಾರೆ.ಅದಕ್ಕೆ
ಕೇಂದ್ರ ಸಚಿವಾಲಯವು ಉತ್ತರಿಸಿದ್ದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಕಿಶೋರ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ, 2015ರ ನೋಡಲ್ ಸಚಿವಾಲಯವಾಗಿದ್ದು, ಅದರ ಜಾರಿಗೆ ಪ್ರಧಾನ ಜವಾಬ್ದಾರಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮೇಲಿದೆ.ಸಚಿವಾಲಯವು ‘ಮಿಷನ್ ವಾತ್ಸಲ್ಯ’ ಕೇಂದ್ರ ಪ್ರಾಯೋಜಿತ ಯೋಜನೆಯಡಿ ಅನಾಥ ಮಕ್ಕಳು ಸೇರಿದಂತೆ ಆರೈಕೆ ಮತ್ತು ರಕ್ಷಣೆಯ ಅಗತ್ಯವಿರುವ ಮಕ್ಕಳಿಗೆ ಸಂಸ್ಥಾತ್ಮಕ ಹಾಗೂ ಅಸಂಸ್ಥಾತ್ಮಕ ಆರೈಕೆ ಸೇವೆಗಳನ್ನು ಒದಗಿಸುತ್ತಿದೆ. ಮಕ್ಕಳ ಆರೈಕೆ ಸಂಸ್ಥೆಗಳ (CCIs) ಮೂಲಕ ಶಿಕ್ಷಣ, ವೃತ್ತಿಪರ ಹಾಗೂ ಕೌಶಲ್ಯ ತರಬೇತಿ, ಆರೋಗ್ಯ ಸೇವೆ, ಸಮಾಲೋಚನೆ ಮತ್ತು ಮನರಂಜನಾ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಅಸಂಸ್ಥಾತ್ಮಕ ಆರೈಕೆಯಡಿ ಪ್ರಾಯೋಜಕತ್ವ, ಫೋಸ್ಟರ್ ಕೇರ್, ದತ್ತಕ ಸ್ವೀಕಾರ ಮತ್ತು ಆಫ್ಟರ್ ಕೇರ್ ವ್ಯವಸ್ಥೆಗಳಿವೆ.
ಯೋಜನಾ ಮಾರ್ಗಸೂಚಿಗಳ ಪ್ರಕಾರ, ಮಕ್ಕಳಿಗೆ ಜನನ ಪ್ರಮಾಣಪತ್ರ, ಆಧಾರ್, ಶಾಲಾ ಹಾಗೂ ಲಸಿಕಾ ಪ್ರಮಾಣಪತ್ರಗಳು ಮತ್ತು ಆರೋಗ್ಯ ಕಾರ್ಡ್ಗಳು ಲಭ್ಯವಾಗುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಖಚಿತಪಡಿಸಬೇಕು. 14–18 ವರ್ಷ ವಯೋಮಾನದ ಮಕ್ಕಳಿಗೆ ಪ್ರಮಾಣಪತ್ರ ಹಾಗೂ ಕೌಶಲ್ಯ ತರಬೇತಿ ಕೋರ್ಸ್ಗಳನ್ನು ಒದಗಿಸಲಾಗುತ್ತಿದೆ.
ಇದಲ್ಲದೆ, UIDAI ಜೊತೆಗೂಡಿ ಕಠಿಣ ಪರಿಸ್ಥಿತಿಗಳಲ್ಲಿರುವ ಮಕ್ಕಳಿಗೆ ಆಧಾರ್ ನೋಂದಣಿಗಾಗಿ ಪ್ರಮಾಣಿತ ಕಾರ್ಯವಿಧಾನ (SOP)ವನ್ನು 25.06.2025 ರಂದು ಜಾರಿಗೊಳಿಸಲಾಗಿದೆ. JJ Act, 2015 ರ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಾಲಕಾಲಕ್ಕೆ ಮಾರ್ಗಸೂಚಿಗಳು ಹಾಗೂ ಸಲಹೆಗಳನ್ನು ಸಚಿವಾಲಯವು ನೀಡುತ್ತಿದೆ ಎಂದು ಸಂಪೂರ್ಣ ವಿವರಗಳನ್ನು ನೀಡಿದೆ.





Leave a comment