Site icon Kannada News-suddikshana

ಆಗ್ನೇಯ ಪದವೀಧರರ ಕ್ಷೇತ್ರ ಮತದಾರರ ಪಟ್ಟಿ ಪರಿಷ್ಕರಣೆ, 2022 ನವೆಂಬರ್ ಪೂರ್ವ ಪದವೀಧರರು ಅರ್ಹ!

ಪದವೀಧರರು

SUDDIKSHANA KANNADA NEWS/DAVANAGERE/DATE:04_10_2025

ದಾವಣಗೆರೆ: ಆಗ್ನೇಯ ಪದವೀಧರರ ಕ್ಷೇತ್ರದ ಮತದಾರರ ಪಟ್ಟಿ ಸಿದ್ದಪಡಿಸುವ ಕೆಲಸ ಆರಂಭವಾಗಿದ್ದು 2025 ರ ನವೆಂಬರ್ 1 ಕ್ಕೆ ಮೂರು ವರ್ಷಗಳ ಹಿಂದೆ ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಪಡೆದ ಪದವಿ ಅಂಕಪಟ್ಟಿ ಅಥವಾ ಪದವಿ ಉತ್ತೀರ್ಣ ಪ್ರಮಾಣ ಪತ್ರವನ್ನು ನಿಗದಿತ ನಮೂನೆಯೊಂದಿಗೆ ಮತದಾರರ ನೊಂದಣಿ ಅಧಿಕಾರಿಗಳಿಗೆ ಸಲ್ಲಿಸಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಕೊಳ್ಳಿ. ಆಗ್ನೇಯ ಪದವೀಧರರ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಿಸಲಾಗಿದೆ. 2022 ನವೆಂಬರ್ ಪೂರ್ವ ಪದವೀಧರರು ಅರ್ಹ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.

READ ALSO THIS STORY: ಅಡಿಕೆಗೆ ಬಂಪರ್ ಬೆಲೆ: ರೂ. 61,000 ಗಡಿ ದಾಟಿದ ಕ್ವಿಂಟಲ್ ಧಾರಣೆ, ಬೆಳೆಗಾರರಿಗೆ ಮಹತ್ವದ ಮಾಹಿತಿ!

ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕುರಿತಂತೆ ಮಾತನಾಡಿದರು.

ಆಗ್ನೇಯ ಪದವೀಧರರ ಕ್ಷೇತ್ರದ ವ್ಯಾಪ್ತಿಗೆ ದಾವಣಗೆರೆ, ಹರಿಹರ ಹಾಗೂ ಜಗಳೂರು ತಾಲ್ಲೂಕುಗಳು ಒಳಪಡುತ್ತವೆ. ಈ ತಾಲ್ಲೂಕು ವ್ಯಾಪ್ತಿಯಲ್ಲಿ ಕನಿಷ್ಠ 6 ತಿಂಗಳಿಗಿಂತಲೂ ಹೆಚ್ಚಿನ ಅವಧಿಯಲ್ಲಿ ಖಾಯಂ ನಿವಾಸಿಯಾಗಿದ್ದಲ್ಲಿ ಆಗ್ನೇಯ ಪದವೀಧರರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನಮೂನೆ-18 ರಲ್ಲಿ ಭರ್ತಿ ಮಾಡಿ ನಿವಾಸಿ ಸ್ಥಾನದ 11 ದಾಖಲೆಗಳಲ್ಲಿ ಒಂದನ್ನು ಹಾಗೂ ಪದವಿ ಉತ್ರ್ತೀಣ ದಾಖಲೆಗಳೊಂದಿಗೆ ತಮ್ಮ ಹೆಸರನ್ನು ತಹಶೀಲ್ದಾರರ ಕಚೇರಿ, ಪಾಲಿಕೆ ವ್ಯಾಪ್ತಿಯಲ್ಲಿ ಬರುವವರು ಮಹಾನಗರಪಾಲಿಕೆ ಆಯುಕ್ತರ ಚುನಾವಣಾ ಶಾಖೆಗೆ ಮತ್ತು ದಾವಣೆಗೆರೆ ತಾಲ್ಲೂಕು ಗ್ರಾಮೀಣ ಪ್ರದೇಶಕ್ಕೆ ಸೇರಿದವರು ದಾವಣಗೆರೆ ತಾಲ್ಲೂಕು ಕಚೇರಿಗೆ ಸಲ್ಲಿಸಬೇಕು.

ಚುನಾವಣಾ ಆಯೋಗವು ಆಗ್ನೇಯ ಪದವೀಧರರ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆಗೆ ಸೆಪ್ಟೆಂಬರ್ 30 ರಂದು ಅಧಿಸೂಚನೆ ಹೊರಡಿಸಿದ್ದು ನಮೂನೆ 18 ರೊಂದಿಗೆ ನೊಂದಣಿಗೆ ನವೆಂಬರ್ 6 ರೊಳಗಾಗಿ ಸಲ್ಲಿಸಬೇಕು. ನವೆಂಬರ್ 25 ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ. ಕರಡು ಮತದಾರರ ಪಟ್ಟಿಗೆ ಆಕ್ಷೇಪಣೆಗಳಿದ್ದಲ್ಲಿ ಡಿಸೆಂಬರ್ 10 ರೊಳಗಾಗಿ ಸಲ್ಲಿಸಬೇಕು. ನಂತರ ಡಿಸೆಂಬರ್ 30 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ.

ಪದವೀಧರ ಕ್ಷೇತ್ರದ ಮತದಾರರಾಗಲು 2022 ರ ನವೆಂಬರ್ 1 ಕ್ಕೂ ಪೂರ್ವ ಅಥವಾ 2025 ರ ನವೆಂಬರ್ 1 ಕ್ಕೆ 3 ವರ್ಷಗಳ ಹಿಂದೆ ಪದವಿ ಉತ್ತೀರ್ಣರಾಗಿರಬೇಕು. ಇವರು ಮಾತ್ರ ಮತದಾರರಾಗಲು ಅರ್ಹತೆ ಪಡೆಯುತ್ತಾರೆ.

ಮತದಾರರ ಪಟ್ಟಿ ಸಿದ್ದತೆಗಾಗಿ ಸಹಾಯಕ ನೊಂದಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಜಿಲ್ಲಾಧಿಕಾರಿಗಳು ಸಹಾಯಕ ಮತದಾರರ ನೊಂದಣಾಧಿಕಾರಿಯಾಗಿದ್ದು ದಾವಣಗೆರೆ, ಹರಿಹರ, ಜಗಳೂರು ತಾಲ್ಲೂಕುಗಳಿಗೆ ಸಂಬಂಧಿಸಿದಂತೆ 08192-234640, 7259700555, ದಾವಣಗೆರೆ ಗ್ರಾಮಾಂತರಕ್ಕೆ ಉಪವಿಭಾಗಾಧಿಕಾರಿ ಸಂತೋಷ ಕುಮಾರ್ 08192-272955, 9845482973, ದಾವಣಗೆರೆ ನಗರ ಉತ್ತರ ಮತ್ತು ಕಸಬಾ ಹೋಬಳಿ ವ್ಯಾಪ್ತಿಗೆ ಮಮತಾ ಹೊಸಗೌಡರ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ 99480863001, ಮಹಾನಗರ ಪಾಲಿಕೆ ವ್ಯಾಪ್ತಿಗೆ ಆಯುಕ್ತರಾದ ರೇಣುಕಾ ಇವರ ಮೊಬೈಲ್ 9902982111, ಹರಿಹರ ತಾಲ್ಲೂಕಿಗೆ ದೂಡಾ ಆಯುಕ್ತರಾದ ಹುಲಿಮನಿ ತಿಮ್ಮಣ್ಣ 9538302836, ಜಗಳೂರು ತಾಲ್ಲೂಕಿಗೆ ಸಹಕಾರ ಸಂಘಗಳ ಉಪನಿಬಂಧಕ ಮಧು ಶ್ರೀನಿವಾಸ್.ಟಿ ಇವರು ಸಹಾಯಕ ನೊಂದಣಾಧಿಕಾರಿಯಾಗಿದ್ದು ಹೆಚ್ಚಿನ ಮಾಹಿತಿಗೆ ಇವರ ಮೊಬೈಲ್ 9945979177 ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದರು.

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಶೇ 75 ರಷ್ಟು ಪ್ರಗತಿ; ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸಲಾಗುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಜಿಲ್ಲೆಯಲ್ಲಿ ಶೇ 75 ರಷ್ಟು ಪ್ರಗತಿಯಾಗಿದ್ದು ರಾಜ್ಯದಲ್ಲಿ 5 ನೇ ಸ್ಥಾನದಲ್ಲಿದೆ. ಸಮೀಕ್ಷೆದಾರರಿಗೆ ಉಂಟಾದ ಕೆಲವು ತಾಂತ್ರಿಕ ಅನುಮಾನಗಳಿಂದ ಕಳೆದೆರಡು ದಿನಗಳಲ್ಲಿ ಸಮೀಕ್ಷೆ ಕುಂಟಿತವಾಗಿದ್ದು ಅವೆಲ್ಲಾ ಅಡೆತಡೆಗಳನ್ನು ನಿವಾರಿಸಲಾಗಿದೆ. ಅಕ್ಟೋಬರ್ 6 ರೊಳಗಾಗಿ ಗುರಿಯಂತೆ ಸಮೀಕ್ಷೆ ಮುಗಿಸಲಾಗುತ್ತದೆ. ಬಿಟ್ಟು ಹೋಗಿದ್ದ ಮನೆಗಳ ಯುಹೆಚ್‍ಐಡಿ ಸುಮಾರು 20 ಸಾವಿರ ಹೊಸದಾಗಿ ನೀಡಲಾಗಿದೆ, ಈ ಮನೆಗಳ ಸಮೀಕ್ಷೆಯನ್ನು ಕೈಗೊಳ್ಳಲಾಗುತ್ತದೆ ಎಂದರು.

ಸಮೀಕ್ಷೆಗಾಗಿ 4462 ಗಣತಿದಾರರನ್ನು ನೇಮಕ ಮಾಡಿದ್ದು 500 ಕ್ಕೂ ಹೆಚ್ಚು ಮೇಲ್ವಿಚಾರಕರು ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ 4.76 ಲಕ್ಷ ಮನೆಗಳಿದ್ದು ಈಗಾಗಲೇ 3.51 ಲಕ್ಷ ಮನೆಗಳ ಸಮೀಕ್ಷೆ ಮುಗಿದೆ. ನಗರ ವ್ಯಾಪ್ತಿಯಲ್ಲಿ ಮಾತ್ರ ಸಮೀಕ್ಷೆ ನಿಧಾನವಾಗುತ್ತಿದ್ದು ಗ್ರಾಮೀಣ ಭಾಗದಲ್ಲಿ ವೇಗವಾಗಿ ಸಮೀಕ್ಷೆ ನಡೆಯುತ್ತಿದೆ. ನಗರ, ಪಟ್ಟಣ ವ್ಯಾಪ್ತಿಯಲ್ಲಿ ಮನೆಗಳನ್ನು ಗುರುತಿಸಲು ಪೌರಕಾರ್ಮಿಕರು, ಆರೋಗ್ಯ ನಿರೀಕ್ಷಕರು ಮತ್ತು ಕಂದಾಯ ನಿರೀಕ್ಷಕರನ್ನು ನೆರವಿಗಾಗಿ ನೇಮಿಸಲಾಗಿದೆ. ಮತ್ತು ಯುಹೆಚ್‍ಐಡಿಯಲ್ಲಿ ಮ್ಯಾಪ್‍ನ್ನು ಸಹ ಅಳವಡಿಸಲಾಗಿದೆ ಎಂದರು.

ಸ್ವಯಂ ಸಮೀಕ್ಷೆಗೆ ಸಿಟಿಜನ್ ಆಪ್ ಬಳಸಿ; ಆಯೋಗವು ನಾಗರಿಕರು ಸ್ವಯಂ ಘೋಷಣೆಯ ಮೂಲಕವೂ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾಡಬಹುದಾಗಿದ್ದು ಇದಕ್ಕಾಗಿ ಆಪ್ ಬಳಕೆ ಮಾಡಿ ಮಾಹಿತಿ ನೀಡಲು ಅವಕಾಶ ಕಲ್ಪಿಸಲಾಗಿದೆ. ಸಮೀಕ್ಷೆಯ ಮಾಹಿತಿಯು ನೇರವಾಗಿ ಆಯೋಗಕ್ಕೆ ಹೋಗುತ್ತದೆ, ಆದರೆ ಇದರ ಮಾಹಿತಿಯು ಯಾರಿಗೂ ಸಿಗುವುದಿಲ್ಲ, ಗೌಪ್ಯವಾಗಿರುತ್ತದೆ. ನಾಗರಿಕರು ಸ್ವ ಇಚ್ಚೆಯಿಂದ ಮಾಹಿತಿ ನೀಡಬಹುದಾಗಿದೆ ಎಂದರು.

ಚುರುಕಿನ ಸಮೀಕ್ಷೆಗ ಪ್ರಶಂಸೆ; ಚನ್ನಗಿರಿ ತಾಲ್ಲೂಕಿನಲ್ಲಿ ಒಬ್ಬರು ಒಂದೇ ದಿನದಲ್ಲಿ 76 ಮನೆಗಳ ಸಮೀಕ್ಷೆ ನಡೆಸಿದ್ದಾರೆ. ಈಗೆ ಚುರುಕಾಗಿ ಸಮೀಕ್ಷೆ ನಡೆಸಿದ ಟಾಪ್ 10 ಒಳಗಿನ ಗಣತಿದಾರರಿಗೆ ಪ್ರಶಂಸನಾ ಪತ್ರ ನೀಡಲಾಗಿದೆ ಎಂದು ಡಿಸಿ ಮಾಹಿತಿ ನೀಡಿದರು.

Exit mobile version