Site icon Kannada News-suddikshana

ನಟಿ ಸೋನಾಲ್ ಮಾಂಟೆರೋ ಜೊತೆ ನಿರ್ದೇಶಕ ತರುಣ್ ಸುಧೀರ್ ಮದುವೆ

ಬೆಂಗಳೂರು : ಕನ್ನಡದ ಖ್ಯಾತ ಖಳನಟ ಸುಧೀರ್ ಪುತ್ರ ಕನ್ನಡದ ಖ್ಯಾತ ನಿರ್ದೇಶಕ ತರುಣ್ ಸುಧೀರ್ ಮಂಗಳೂರಿನ ಬೆಡಗಿ ಸೋನಾಲ್ ಮಾಂಟೆರೋ ಜೊತೆ ಹಸೆಮಣೆ ಏರಲಿದ್ದಾರೆ. ಸ್ಪೆಷಲ್ ವಿಡಿಯೋ ಮೂಲಕ ಮದುವೆಯ ಸಿಹಿ ಸುದ್ದಿ ಹಂಚಿಕೊಂಡ ತರುಣ್ ಹಾಗೂ ಸೋನಾಲ್, ‘ನಮ್ಮ ಕಥೆಯ ಶುಭಾರಂಭಕ್ಕೆ ನಿಮ್ಮ ಆಶೀರ್ವಾದವಿರಲಿ‘ ಎಂದು ಬರೆದುಕೊಂಡಿದ್ದಾರೆ.

ಆಗಸ್ಟ್ 11ರಂದು ಬೆಂಗಳೂರಿನ ಕೆಂಗೇರಿ ಬಳಿ ಇರೋ ಪೂರ್ಣಿಮಾ ಕನ್ವೆಷನ್ ಹಾಲ್‌ನಲ್ಲಿ ಮದುವೆ ಸಮಾರಂಭ ನಡೆಯಲಿದೆ.

ಈ ಬಗ್ಗೆ ನಟಿ ಸೋನಾಲ್ ಕೂಡ ಸೋಶಿಯಲ್​ ಮೀಡಿಯಾದಲ್ಲಿ ಅವರೊಂದು ಪೋಸ್ಟರ್​ ಹಂಚಿಕೊಂಡಿದ್ದು, ‘ಕಡೆಗೂ ನಟಿಗೆ ತನ್ನ ಬದುಕಿನ ನಿರ್ದೇಶಕ ಸಿಕ್ಕಾಯ್ತು’ ಎಂಬ ಕ್ಯಾಪ್ಷನ್​ ನೀಡಿದ್ದಾರೆ.
ಮಂಗಳೂರಿನ ಪಡೀಲ್‌ನಲ್ಲಿ ಹುಟ್ಟಿದ ಸೋನಲ್‌ ಮೊಂತೆರೋ 2013ರಲ್ಲಿ ಮಿಸ್‌ ಮಂಗಳೂರು ಸ್ಪರ್ಧೆಯಲ್ಲಿ ‘ಮಿಸ್‌ ಬ್ಯೂಟಿಫುಲ್‌ ಸ್ಮೈಲ್‌’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ನಂತರ ಬಣ್ಣದ ಲೋಕಕ್ಕೆ ಅವರು ಕಾಲಿಟ್ಟರು. ಕೋಸ್ಟಲ್‌ವುಡ್‌ನಲ್ಲಿ ಮಿಂಚಿ ಸ್ಯಾಂಡಲ್‌ವುಡ್‌ಗೆ ಹೆಜ್ಜೆ ಇಟ್ಟರು. ಸೋನಲ್‌ ನಟನೆಯ ತುಳು ಸಿನಿಮಾ ‘ಎಕ್ಕಸಕ’ ಹಿಟ್‌ ಆಗಿದ್ದೇ ಚಂದನವನದ ಬಾಗಿಲು ತೆರೆದುಕೊಂಡಿತು.

ಯೋಗರಾಜ್‌ ಭಟ್‌ ನಿರ್ದೇಶನದ ‘ಪಂಚತಂತ್ರ’ ಸೋನಲ್‌ ಸಿನಿಗ್ರಾಫ್‌ಗೆ ಕಿಕ್‌ಸ್ಟಾರ್ಟ್‌ ನೀಡಿತು. ನಂತರದಲ್ಲಿ ತರುಣ್‌ ನಿರ್ದೇಶನದ ‘ರಾಬರ್ಟ್‌’ ಸಿನಿಮಾದಲ್ಲಿ ‘ನರ್ಸಮ್ಮ’ ಆಗಿ ಮಿಂಚಿದ್ದರು ಸೋನಲ್‌. ‘ಶುಗರ್‌ ಫ್ಯಾಕ್ಟರಿ’, ‘ಬನಾರಸ್‌’, ‘ಗರಡಿ’ ಸೋನಲ್‌ ನಟಿಸಿರುವ ಸಿನಿಮಾಗಳು. ವಿನೋದ್‌ ಪ್ರಭಾಕರ್‌ ಜೊತೆ ನಟಿಸಿದ ‘ಮಾದೇವ’. ‘ರೋಲೆಕ್ಸ್‌’, ‘ಬುದ್ಧಿವಂತ–2’, ‘ಮಿ.ನಟವರ್‌ಲಾಲ್‌’, ‘ತಲ್ವಾರ್‌ಪೇಟೆ’, ‘ಮಾರ್ಗರೇಟ್‌ ಲವರ್‌ ಆಫ್‌ ರಾಮಾಚಾರಿ’ ಹಾಗೂ ‘ಭಾರತದ ಕೋಗಿಲೆ’ ಎಂದೇ ಜನಪ್ರಿಯರಾಗಿದ್ದ ಸರೋಜಿನಿ ನಾಯ್ಡು ಅವರ ಬಯೋಪಿಕ್‌ನಲ್ಲಿ ಸೋನಲ್‌ ನಟಿಸಿದ್ದು, ಇವುಗಳು ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

Exit mobile version