SUDDIKSHANA KANNADA NEWS/ DAVANAGERE/ DATE:29-01-2024
ದಾವಣಗೆರೆ: ಪ್ರೀತಿಸಿ ಮದುವೆಯಾಗಿದ್ದ ಪತ್ನಿಗೆ ಕಿರುಕುಳ ನೀಡಿ ಆಕೆ ಸಾವಿಗೆ ಕಾರಣನಾದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆಕೆಯ ಪತಿಗೆ ಇಲ್ಲಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರು ವರ್ಷ ಜೈಲು ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.
ದಾವಣಗೆರೆಯ ನಿಟುವಳ್ಳಿಯ ಮಂಜುನಾಥ್ ಎಂಬಾತನೇ ಶಿಕ್ಷೆಗೊಳಪಟ್ಟ ಅಪರಾಧಿ. ಶಿಲ್ಪಾ ಎಂಬುವವರ ಜೊತೆ ಮಂಜುನಾಥ್ ಪ್ರೀತಿಸಿ ಮದುವೆಯಾಗಿದ್ದ. ಗಂಡ ಹೆಂಡತಿ ನಡುವೆ ಆಗಾಗ್ಗೆ ಜಗಳ ಆಗುತಿತ್ತು. ಮಂಜುನಾಥನು
2019ರ ಮೇ 5ರಂದು ಮನೆ ಬಿಟ್ಟು ಹೋಗಿದ್ದ. ಯಾರಿಗೂ ಹೇಳದೇ ಕೇಳದೇ ಹೋಗಿದ್ದ ಮಂಜುನಾಥ್ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಇದರಿಂದ ಮನನೊಂದ ಶಿಲ್ಪಾ ಮನೆಯ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.
ತನ್ನ ಸಾವಿಗೆ ಪತಿ ಮಂಜು, ಕಲ್ಲೇಶ, ಸಂತೋಷ, ಬಸಪ್ಪ ಕಾರಣ ಎಂದು ಶಿಲ್ಪಾ ಅವರ ಎಡಗೈನಲ್ಲಿ ಬರೆದಿದ್ದು ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಅಂದಿನ ತನಿಖಾಧಿಕಾರಿ ವೈ. ಎಸ್. ಶಿಲ್ಪಾ ಅವರು ನ್ಯಾಯಾಲಯಕ್ಕೆ
ಚಾರ್ಜ್ ಶೀಟ್ ಸಲ್ಲಿಸಿದ್ದರು. ವಾದ – ಪ್ರತಿವಾದ ಆಲಿಸಿದ ನ್ಯಾಯಧೀಶರಾದ ಜಿ. ವಿ. ವಿಜಯಾನಂದ ಅವರು, ಪ್ರಕರಣದ ಒಂದೇ ಆರೋಪಿಯಾಗಿದ್ದ ಮಂಜುನಾಥನಿಗೆ ಶಿಕ್ಷೆ ಪ್ರಕಟ ಮಾಡಿದರು.
ಪಿರ್ಯಾದುದಾರರ ಪರವಾಗಿ ಸರ್ಕಾರಿ ಅಭಿಯೋಜಕ ಸತೀಶ್ ವಾದ ಮಂಡನೆ ಮಾಡಿದ್ದರು. ತನಿಖಾಧಿಕಾರಿ ಶಿಲ್ಪಾ ಹಾಗೂ ವಕೀಲರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಅಭಿನಂದಿಸಿದ್ದಾರೆ.