Site icon Kannada News-suddikshana

Sirigere Shree: ಕೈಗಾರಿಕಾ ಕಾರಿಡಾರ್ ಗೆ ದಾವಣಗೆರೆಯಲ್ಲಿನ 1,156 ಎಕರೆ ಭೂ ಸ್ವಾಧೀನ ಬೇಡ: ಸಚಿವ ಎಂ. ಬಿ. ಪಾಟೀಲ್ ರಿಗೆ ಸಿರಿಗೆರೆ ಶ್ರೀಗಳ ಸೂಚನೆ

SUDDIKSHANA KANNADA NEWS/ DAVANAGERE/ DATE:04-09-2023

ದಾವಣಗೆರೆ: 1,156 ಎಕರೆ ಕೃಷಿ ಜಮೀನನ್ನು ದಾವಣಗೆರೆ ಸಮೀಪದ ಕೈಗಾರಿಕಾ ಕಾರಿಡಾರ್ ಉದ್ದೇಶಕ್ಕಾಗಿ ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿರುವ ಕೆ ಐಎಡಿಬಿ ನಿರ್ಧಾರ ಕೈಬಿಡುವಂತೆ ಸಿರಿಗೆರೆ (Sirigere) ತರಳಬಾಳು ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅವರು, ಭಾರೀ ಮತ್ತು ಮಧ್ಯಮ ಕೈಗಾರಿಕೆ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ್ ಅವರಿಗೆ ಸೂಚಿಸಿದರು.

SIRIGERE SHREE MEET MINISTER M. B. PATIL

ಬೆಂಗಳೂರಿನ ಆರ್. ಟಿ. ನಗರದಲ್ಲಿರುವ ತರಳಬಾಳು ಕೇಂದ್ರಕ್ಕೆ ಭೇಟಿ ನೀಡಿದ್ದ ಸಚಿವ ಎಂ. ಬಿ. ಪಾಟೀಲ್ ಅವರಿಗೆ ಸಿರಿಗೆರೆ ಶ್ರೀಗಳು ಈ ಸೂಚನೆ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ: 

Davanagere: ಹೂತಿದ್ದ ಶವ ತೆಗೆದು ಅಗ್ನಿಸ್ಪರ್ಶ ಕೇಸ್, 28 ಮಂದಿ ಬಂಧನ : ಶವ ಮೇಲಕ್ಕೆತ್ತುವ ವಿಚಾರಕ್ಕೆ ಉದ್ವಿಗ್ನಗೊಂಡಿದ್ದ ನಲ್ಕುಂದ ಶಾಂತ

 

ದಾವಣಗೆರೆ ತಾಲೂಕಿನ ಮೆಳ್ಳೆಕಟ್ಟೆ, ಅಣಜಿ, ಲಿಂಗಾಪುರ ಸೇರಿದಂತೆ ಇತರೆ ಗ್ರಾಮಗಳ ರೈತರು ಯಾವುದೇ ಕಾರಣಕ್ಕೂ ಭೂ ಸ್ವಾಧೀನ ಪಡಿಸಿಕೊಳ್ಳಬಾರದು. ಅಡಿಕೆ, ತೆಂಗು, ಮಾವು ಸೇರಿದಂತೆ ಇತರೆ ತೋಟಗಾರಿಕೆ ಬೆಳೆ ಬೆಳೆಯಲಾಗುತ್ತಿದೆ. ಫಲವತ್ತಾದ ಭೂಮಿ ಕಸಿದುಕೊಂಡು ಬದುಕು ಬರಡು ಮಾಡುವುದು ಬೇಡ. ಸ್ವಾಧೀನ ವಿರೋಧಿಸಿ ಈಗಾಗಲೇ ಸಂಸದರು, ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ರ ಗಮನಕ್ಕೆ ತಂದಿದ್ದೇವೆ. ಆದ್ದರಿಂದ ತಾವು ನ್ಯಾಯ ಒದಗಿಸಿಕೊಡಬೇಕು ಎಂದು ರೈತರು ಮಠದ ನ್ಯಾಯಪೀಠದಲ್ಲಿ ಮನವಿ ಸಲ್ಲಿಸಿದ್ದಾರೆ ಎಂದು ಸಚಿವರಿಗೆ ಶ್ರೀಗಳು ತಿಳಿಸಿದರು.

ತಲೆ ತಲಾಂತರದಿಂದ ಉಳುಮೆ ಮಾಡಿಕೊಂಡು ಬಂದಿರುವ ಫಲವತ್ತಾದ ಭೂಮಿಯನ್ನು ಕೈಗಾರಿಕಾ ಕಾರಿಡಾರ್ ಗಳಿಗೆ ಸ್ವಾಧೀನಪಡಿಸಿಕೊಳ್ಳುವುದು ಬೇಡ. ಆರೇಳು ತಲೆಮಾರುಗಳು ನಿರಂತರ ಕೃಷಿ ಮಾಡಿಕೊಂಡು ಬರುತ್ತಿರುವ ರೈತರ ಬದುಕಿಗೆ ಕೊಳ್ಳಿ ಇಡುವುದು ಸರಿಯಲ್ಲ. ಇದರ ಬದಲಿಗೆ ಉಳುಮೆಗೆ ಯೋಗ್ಯವಲ್ಲದ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಅಂಥ ಜಾಗದಲ್ಲಿ ಕೈಗಾರಿಕಾ ಕಾರಿಡಾರ್ ನಿರ್ಮಾಣ ಮಾಡುವುದು ಸೂಕ್ತ ಎಂದು ಹೇಳಿದರು.

ರೈತರ ಭೂಮಿಗೆ ಹೊಂದಿಕೊಂಡಿರುವ ಈ ವ್ಯಾಪ್ತಿಯಲ್ಲಿ ನವಿಲು, ಗೂಬೆ, ಮೊಲ, ನರಿ, ಕಾಡುಹಂದಿ, ಪುನುಗು ಬೆಕ್ಕು, ಕಾಡುಬೆಕ್ಕು, ಕಾಡುಕುರಿ, ಕರಡಿ, ಜಿಂಕೆ ಸೇರಿದಂತೆ ವನ್ಯಜೀವಿ ಸಂಕುಲ ಆಶ್ರಯ ಪಡೆದಿದೆ. ಇಂತಹ ಪ್ರದೇಶದಲ್ಲಿ ಕೈಗಾರಿಕಾ ಕಾರಿಡಾರ್ ಮಾಡಿದರೆ ಜೀವವೈವಿಧ್ಯ ನಾಶವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಈಗಾಗಲೇ ಕೆಲ ರೈತರಿಗೆ ಭೂಸ್ವಾಧೀನಪಡಿಸಿಕೊಳ್ಳುವ ಸಂಬಂಧ ನೊಟೀಸ್ ಜಾರಿಗೊಳಿಸಲಾಗಿದೆ. ಇಲ್ಲಿ ಫಲವತ್ತಾದ ಭೂಮಿ ಇದೆ. ನೀರಾವರಿ ಸೌಲಭ್ಯ ಚನ್ನಾಗಿದ್ದು, ರೈತರು ಅದರಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ ಕೈಗಾರಿಕಾ ಕಾರಿಡಾರ್ ಸ್ಥಾಪನೆ ಮಾಡಿದರೆ ಪರಿಸರ ಹಾಳಾಗಲಿದೆ. ನೀರಾವರಿ ಜಮೀನು ವಶಪಡಿಸಿಕೊಳ್ಳುವ ಬದಲು ಬರಡು ಭೂಮಿಯಲ್ಲಿ ಕೈಗಾರಿಕಾ ಕಾರಿಡಾರ್ ಮಾಡಲಿ. ರೈತರನ್ನು ಒಕ್ಕಲೆಬ್ಬಿಸುವುದು ಸಾಧುವಲ್ಲವೆಂದು ಸಚಿವರಿಗೆ ಶ್ರೀ ಜಗದ್ಗುರುಗಳವರು ಮನವರಿಕೆ ಮಾಡಿಕೊಟ್ಟರು.

ಪೂಜ್ಯರ ಸಲಹೆ ಮತ್ತು ಮಾರ್ಗದರ್ಶನವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಸಚಿವರು ಈ ರೈತರ ಹಿತವೇ ವೈಯಕ್ತಿಕವಾಗಿ ನನ್ನ ಆದ್ಯತೆಯಾಗಿದೆ. ರೈತರ ಒಕ್ಕಲೆಬ್ಬಿಸುವ ಯಾವುದೇ ಕ್ರಮ ಕೈಗೊಳ್ಳದೇ ತಮ್ಮ ಮಾರ್ಗದರ್ಶನದಲ್ಲಿ ಮುನ್ನಡೆಯುವುದಾಗಿ ತಿಳಿಸಿದರು.

ಶ್ರೀ ಜಗದ್ಗುರುಗಳವರು ಕರ್ತೃತ್ವದಲ್ಲಿ ಹೊರತಂದಿರುವ, ವಿವಿಧ ಭಾಷೆಗಳಲ್ಲಿ ತರ್ಜುಮೆಯಾಗಿ ಲಕ್ಷಾಂತರ ಅನುಯಾಯಿಗಳಿಂದ ಮೆಚ್ಚುಗೆಗೆ ಕಾರಣವಾಗಿರುವ 20 ಸಾವಿರಕ್ಕೂ ಹೆಚ್ಚು ಬಸವಾದಿ ಶರಣರ ವಚನಗಳು ಮೊಬೈಲ್ ಆಫ್ ಬಗ್ಗೆ ಸಚಿವರು ಆಸಕ್ತಿಯಿಂದ ಪೂಜ್ಯರ ಬಳಿ ತಿಳಿದುಕೊಂಡರು.

ಸಚಿವ ಎಂ.ಬಿ.ಪಾಟೀಲರು ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದಗ ಭರಮಸಾಗರ, ಜಗಳೂರು ಸೇರಿದಂತೆ ಅನೇಕ ಪೂಜ್ಯರ ಸಂಕಲ್ಪದ ಏತ ನೀರಾವರಿ ಯೋಜನೆಗಳಿಗೆ ಸಹಕಾರಿಯಾಗಿದ್ದನ್ನು ಶ್ರೀ ಜಗದ್ಗುರುಗಳವರು ಸ್ಮರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಂ. ಬಿ. ಪಾಟೀಲ್ ಅವರು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ರೈತರ ಹಿತ ಕಾಯುತ್ತದೆ. ಶ್ರೀಗಳ ಆದೇಶ ಪಾಲಿಸುತ್ತೇವೆ. ರೈತರ ಜಮೀನನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು.

Exit mobile version