ದಾವಣಗೆರೆ: ಅಂಕಲ್.. ಆಂಟಿ… ಸರ್… ಪ್ಲೀಸ್ ಟ್ರಾಫಿಕ್ಸ್ ರೂಲ್ಸ್ ಬ್ರೇಕ್ ಮಾಡಬೇಡಿ. ಸಂಚಾರಿ ನಿಯಮ ಪಾಲಿಸಿ.
ಇದು ನಗರದಲ್ಲಿ ಶಾಲಾ ಮಕ್ಕಳು ಟ್ರಾಫಿಕ್ ಉಲ್ಲಂಘನೆ ಮಾಡುವವರಿಗೆ ಗುಲಾಬಿ ಹೂ ಕೊಟ್ಟು ಮಾಡಿದ ಮನವಿ. ಮಕ್ಕಳ ಈ ವಿಶೇಷ ಅಭಿಯಾನಕ್ಕೆ ಸಂಚಾರ ಪೊಲೀಸರು ನೆರವಾದರು.
READ ALSO THIS STORY: BIG BREAKING: ‘ಕೊರಳಪಟ್ಟಿ ಹಿಡಿದು ಕೇಳ್ತೇನೆಂದಿದ್ದ” ಹೆಚ್. ಬಿ. ಮಂಜಪ್ಪ ವಿರುದ್ಧ ಪೊಲೀಸ್ ಮಹಾನಿರ್ದೇಶಕರಿಗೆ ಎಂ. ಪಿ. ರೇಣುಕಾಚಾರ್ಯ ದೂರು!
ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅವರ ನಿರ್ದೇಶನ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ ರವರ, ನಗರ ಡಿವೈಎಸ್ಪಿ ಶರಣಬಸವೇಶ್ವರ ಬಿ. ಮತ್ತು ಸಂಚಾರಿ ಸಿಪಿಐ ಮಂಜುನಾಥ ಅವರ ಮಾರ್ಗದರ್ಶನದಲ್ಲಿ ದಾವಣಗೆರೆ ನಗರದ ದಕ್ಷಿಣ ಸಂಚಾರ ಪೊಲೀಸ್ ನಿರೀಕ್ಷಕಿ ಶೈಲಜಾರ ನೇತೃತ್ವದಲ್ಲಿ ಸಂಚಾರ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ತಂಡ ನಗರದ ಎವಿಕೆ ಕಾಲೇಜ್ ರಸ್ತೆಯಲ್ಲಿ ವಿಶೇಷ ರೀತಿಯಲ್ಲಿ ಸಂಚಾರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಸೆಂಟ್ ಪಾಲ್ಸ್ ಕಾನ್ವೆಂಟ್ ಶಾಲೆಯ ಮಕ್ಕಳ ಜೊತೆ ಹೆಲ್ಮೆಟ್ ಧರಿಸದ ವಾಹನ ಸವಾರರಿಗೆ, ಒನ್ ವೇನಲ್ಲಿ ವಿರುದ್ಧ ದಿಕ್ಕಿನಲ್ಲಿ ಸಂಚರಿಸುವ ವಾಹನ ಸವಾರರಿಗೆ ಮಕ್ಕಳಿಂದ ಗುಲಾಬಿ ಹೂವನ್ನು ನೀಡಿ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸುವಂತೆ ಹಾಗೂ ತಾವು ಸುರಕ್ಷಿತವಾಗಿರುವಂತೆ ಸಂಚಾರ ಜಾಗೃತಿ ಮೂಡಿಸಿದರು. ಈ ಜಾಗೃತಿ ಕಾರ್ಯಕ್ರಮಕ್ಕೆ ನೂತನ ಅಕ್ಕಪಡೆಯು ಸಹ ಕೈಜೋಡಿಸಿತು.
ಸಂಚಾರಿ ನಿಯಮ ಪಾಲಿಸಿ, ಜೀವ ಉಳಿಸಿಕೊಳ್ಳಿ: ದಿನೇಶ್ ಕೆ. ಶೆಟ್ಟಿ
ಕೊಂಡಜ್ಜಿ ಬಸಪ್ಪ ಸ್ಕೌಟ್ ಅಂಡ್ ಗೈಡ್ಸ್ ಸ್ಥಳೀಯ ಸಂಸ್ಥೆಯ ವತಿಯಿಂದ ನಗರದ ಎವಿಕೆ ರಸ್ತೆಯಲ್ಲಿ ದೂಡ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಅವರು ಸಂಚಾರಿ ನಿಯಮ ಉಲ್ಲಂಘಿಸಿ ಒನ್ ವೇ ನಲ್ಲಿ ಚಲಿಸುವ ವಾಹನ ಸವಾರರಿಗೆ ಗುಲಾಬಿ ಹೂ ನೀಡಿ ಸಂಚಾರಿ ನಿಯಮ ಪಾಲಿಸಿ ಜೀವ ಉಳಿಸಿಕೊಳ್ಳಿ ಎಂದು ಜಾಗೃತಿ ಮೂಡಿಸಿದರು.
ನಗರದಲ್ಲಿ ಸಂಚಾರಿ ನಿಯಮವನ್ನು ಪಾಲಿಸದೆ ನೂರಾರು ಅವಘಡಗಳು ಸಂಭವಿಸುತ್ತಿದೆ ತಾವುಗಳು ವಿರುದ್ಧ ದಿಕ್ಕಿನಲ್ಲಿ ಚಲಿಸುವಾಗ ಎದುರುಗಡೆ ವಾಹನಗಳು ತಮಗೆ ಡಿಕ್ಕಿ ಹೊಡೆದರೆ ಪ್ರಾಣಪಾಯ ಸಂಭವಿಸುತ್ತದೆ. ತಮ್ಮ ಜೀವ ಹೋಗುವ ಸಂದರ್ಭವಿರುತ್ತದೆ. ಆದ್ದರಿಂದ ಸಂಚಾರಿ ನಿಯಮವನ್ನು ಪಾಲಿಸಿ ತಮ್ಮ ಜೀವವನ್ನು ಉಳಿಸಿಕೊಳ್ಳಿ ಎಂದು ಸೆಂಟ್ ಫಾಲ್ಸ್ ಕಾನ್ವೆಂಟ್ ಶಾಲೆಯ ಸ್ಕೌಟ್ ಅಂಡ್ ಗೈಡ್ಸ್ ನೂರಾರು ಮಕ್ಕಳ ಜೊತೆ ಸಂಚಾರಿ ನಿಯಮದ ಬಗ್ಗೆ ವಾಹನ ಚಾಲಕರಿಗೆ ಗುಲಾಬಿ ವಿತರಿಸಿ ಅರಿವು ಮೂಡಿಸುವ ಪ್ರಯತ್ನ ಮಾಡಿದರು.
ಈ ಸಂದರ್ಭದಲ್ಲಿ ಸ್ಕೌಟ್ ಅಂಡ್ ಗೈಡ್ಸ್ ಕಾರ್ಯದರ್ಶಿ ರವೀಂದ್ರಸ್ವಾಮಿ ಸೂಸಿಮೇರಿ, ಟ್ರಾಫಿಕ್ ಪೊಲೀಸ್ ಇನ್ ಸ್ಪೆಕ್ಟರ್ ಶೈಲಜಾ ದಾದಾಪೀರ್, ಜೆ. ಎಚ್. ಪಟೇಲ್ ಕಾಲೇಜಿನ ಕಾರ್ಯದರ್ಶಿ ಮುಸ್ತಫಾ, ಮುಖಂಡರಾದ ಸತೀಶ್ ಶೆಟ್ಟಿ, ಚೇತನ್, ಯುವರಾಜ್ ಮತ್ತಿತರರು ಹಾಜರಿದ್ದರು.





Leave a comment