Site icon Kannada News-suddikshana

ನಾನು ಬಿಎಸ್ಸಿ ಓದುವಾಗ ಹೊಟೇಲ್ ನಿಂದ ಸಾರು ತಂದು ಅನ್ನ ಮಾಡ್ಕೊಂಡು ಉಣ್ಣಬೇಕಿತ್ತು: ವಿದ್ಯಾಸಿರಿ ಯೋಜನೆ ಜಾರಿಗೊಳಿಸಲು ಕಾರಣ ಹೇಳಿದ ಸಿದ್ದರಾಮಯ್ಯ

SUDDIKSHANA KANNADA NEWS/ DAVANAGERE/ DATE:29-10-2023

ಬೆಂಗಳೂರು: ವಿದ್ಯಾಸಿರಿ ಯೋಜನೆ ಜಾರಿಗೊಳಿಸಲು ಕಾರಣವನ್ನು ಸಿಎಂ ಸಿದ್ದರಾಮಯ್ಯ ಬಿಚ್ಚಿಟ್ಟಿದ್ದಾರೆ. ಈ ಬಗ್ಗೆ ತಾವು ಓದುತ್ತಿದ್ದ ದಿನಗಳ ಬಗ್ಗೆಯೂ ಮೆಲುಕು ಹಾಕಿದ್ದಾರೆ.

ಕಾಳಿದಾಸ ಹೆಲ್ತ್ ಆಂಡ್ ಎಜುಕೇಷನ್ ಟ್ರಸ್ಟ್ ಮತ್ತು ಅಹಿಲ್ಯಾ ಫೌಂಡೇಷನ್ ಹಮ್ಮಿಕೊಂಡಿದ್ದ “ಪ್ರೇರಣಾ ಸಮಾರಂಭ” ವದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ನಾನು ಬಿಎಸ್ಸಿ ಓದುವಾಗ ಹೋಟೆಲ್ ನಿಂದ ಸಾರು ತಂದು
ರೂಮಲ್ಲಿ ಅನ್ನ ಮಾಡಿಕೊಂಡು ಊಟ ಮಾಡಬೇಕಿತ್ತು ಎಂದು ನೆನಪು ಮಾಡಿಕೊಂಡರು.

ಹೊಟೇಲ್ ನಿಂದ ಸಾರು ತೆಗೆದುಕೊಂಡು ಬಂದು ರೂಂನಲ್ಲಿ ಅನ್ನ ಮಾಡಿಕೊಂಡು ಇಂದಿಗೂ ಅನೇಕ ವಿದ್ಯಾರ್ಥಿಗಳು ಊಟ ಮಾಡುತ್ತಾರೆ. ಇಂಥಾ ಸ್ಥಿತಿಯಲ್ಲಿ ಸಹಸ್ರಾರು ವಿದ್ಯಾರ್ಥಿಗಳು ಇರುವುದರಿಂದ ನಾನು ವಿದ್ಯಾಸಿರಿ ಕಾರ್ಯಕ್ರಮ
ಜಾರಿಗೆ ತಂದೆ ಎಂದು ತಿಳಿಸಿದರು.

ಹುದ್ದೆಗಳಿಗಿಂತ ವೈದ್ಯರ ಸಂಖ್ಯೆ ಹೆಚ್ಚಾಗಿದೆ:

ಹಿಂದೆ ಗ್ರಾಮೀಣ ಭಾಗಗಳಲ್ಲಿ ವೈದ್ಯ ಹುದ್ದೆಗಳು ಹೆಚ್ಚಿದ್ದು ವೈದ್ಯರ ಸಂಖ್ಯೆ ಕಡಿಮೆ ಇತ್ತು. ಈಗ ಪರಿಸ್ಥಿತಿ ಬದಲಾಗಿ ಖಾಲಿ ಹುದ್ದೆಗಳಿಗಿಂತ ವೈದ್ಯರ ಸಂಖ್ಯೆ ದುಪ್ಪಟ್ಟಾಗಿದೆ. ಆದ್ದರಿಂದ ಖಾಲಿವಿರುವ ಗ್ರಾಮೀಣ ವೈದ್ಯ ಹುದ್ದೆಗಳನ್ನಷ್ಟೆ ಭರ್ತಿ ಮಾಡಲು ಸರ್ಕಾರ ನಿರ್ಧರಿಸಿ ನಿಯಮಾವಳಿಗೆ ತಿದ್ದುಪಡಿ ತರುವಂತಾಯಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದರು.

ಹಿಂದುಳಿದ ವರ್ಗಗಳ ವೈದ್ಯ ವಿದ್ಯಾರ್ಥಿಗಳಿಗೆ ಸನ್ಮಾನಿಸುವ ಹಾಗೂ ವಿದ್ಯಾರ್ಥಿ ವೇತನ ವಿತರಿಸುವ ಕಾರ್ಯಕ್ರಮ ಕನಕ ಗುರುಪೀಠದ ಸಿದ್ದರಾಮಾನಂದ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ನೆರವೇರಿತು. ನಗರಾಭಿವೃದ್ಧಿ ಸಚಿವರಾದ ಬೈರತಿ ಸುರೇಶ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಮಾಜಿ ಕಾರ್ಪೋರೇಟರ್ ಬಿ.ಎನ್.ನಿತೀಶ್ ಪುರುಷೋತ್ತಮ್ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

Exit mobile version