Site icon Kannada News-suddikshana

ಶ್ರೀ ರಾಘವೇಂದ್ರ ಸ್ವಾಮಿ ಸಪ್ತಾಹ ಮಹೋತ್ಸವ: ಮಾರ್ಚ್ 11 ರಿಂದ 17ರವರೆಗೆ ದಾವಣಗೆರೆಯಲ್ಲಿ ಆಯೋಜನೆ.. ಏನೆಲ್ಲಾ ಕಾರ್ಯಕ್ರಮಗಳಿವೆ ಗೊತ್ತಾ…?

SUDDIKSHANA KANNADA NEWS/ DAVANAGERE/ DATE:08-03-2024

ದಾವಣಗೆರೆ: ರಾಯರ ಪಟ್ಟಾಭಿಷೇಕ ಮತ್ತು ವರ್ಧಂತಿಯ ಸಂಸ್ಮರಣೆಗಾಗಿ 31ನೇ ಶ್ರೀ ರಾಘವೇಂದ್ರ ಸಪ್ತಾಹ ಮಹೋತ್ಸವ ಮಾರ್ಚ್ 11 ರಿಂದ 17ರ ವರೆಗೆ ನಗರದ ಶಾಮನೂರು ರಸ್ತೆಯ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಮಹೋತ್ಸವ ಸಮಿತಿಯ ಕಾರ್ಯದರ್ಶಿ ಕಂಪ್ಲಿ ಗುರುರಾಜಾಚಾರ್ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 7 ದಿನಗಳ ಕಾಲ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು, ಉಪನ್ಯಾಸ, ವಿಶೇಷ ಪೂಜೆ, ಅಭಿಷೇಕ, ಸುಪ್ರಭಾತ, ಹೋಮ, ಲಕ್ಷ ಪುಷ್ಪಾರ್ಚನೆ ಇನ್ನಿತರ ವೈವಿಧ್ಯಮಯ ಕಾರ್ಯಕ್ರಮಗಳು
ನೆರವೇರಲಿವೆ ಎಂದು ತಿಳಿಸಿದರು.

ಇದುವರೆಗೆ ಮುಂಬೈ, ಕೋಲ್ಕತ್ತ, ತಮಿಳುನಾಡು, ಆಂಧ್ರಪ್ರದೇಶ ಮುಂತಾದ ಕಡೆಗಳಲ್ಲಿ ರಾಘವೇಂದ್ರ ಸಪ್ತಾಹ ನಡೆದಿವೆ. ಈ ಬಾರಿ ದಾವಣಗೆರೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಅನೇಕ ವಿದ್ವಾಂಸರು, ಕಲಾವಿದರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ನಾಡಿನ ವಿವಿಧ ಭಜನಾ ಮಂಡಳಿಯವರು ಮಹೋತ್ಸವದಲ್ಲಿ ಭಾಗವಹಿಸುವರು. ರಸಪ್ರಶ್ನೆ ಸ್ಪರ್ಧೆ, ದಾಸವಾಣಿ, ಶ್ರೀ ಜಗನ್ನಾಥ ದಾಸರು ರಚಿಸಿದ ‘ಕನ್ನಡ ರಾಘವೇಂದ್ರ ವಿಜಯ’ ಸಾಮೂಹಿಕ ಪಾರಾಯಣ, ದೀಪೋತ್ಸವ ಸಹಿತ ಶ್ರೀ ರಾಘವೇಂದ್ರ ಸರ್ವಾಭಯ ಪ್ರಾರ್ಥನೆ, ಸಾಮೂಹಿಕ ಲಕ್ಷ್ಮೀ ಶೋಭಾನ ಪಾರಾಯಣ ನಡೆಯಲಿವೆ ಎಂದರು.

ಮಾರ್ಚ್ 11 ರಂದು ಸಂಜೆ 5 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಮಂತ್ರಾಲಯ ಮಠದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು, ಉಡುಪಿ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದಂಗಳವರು, ಕಿರಿಯ ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದಂಗಳವರು ಉಪಸ್ಥಿತರಿರುವರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಸೇರಿ ಅನೇಕ ಗಣ್ಯರು ಪಾಲ್ಗೊಳ್ಳುವರು ಎಂದು ತಿಳಿಸಿದರು.

ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಪಂಡಿತಕೇಸರಿ ಮಂತ್ರಾಲಯದ ಡಾ. ಶ್ರೀ ರಾಜಾ ಎಸ್. ಗಿರಿಯಾಚಾರ್ಯರು, ಮಂತ್ರಾಲಯದ ಶ್ರೀ ಗುರುಸಾರ್ವಭೌಮ ದಾಸಸಾಹಿತ್ಯ ಪ್ರಾಜೆಕ್ಟ್‌ನ ನಿರ್ದೇಶಕರಾದ ಕೆ. ಅಪ್ಪಣ್ಣಾಚಾರ್ಯರು, ಡಾ. ಶ್ರೀ ಕೊರ್ಲಹಳ್ಳಿ ವೆಂಕಟೇಶಾಚಾರ್, ಅಷ್ಟಾವಧಾನಿ ಡಾ. ಶ್ರೀ ಸದಾನಂದ ಶಾಸ್ತ್ರಿಗಳು ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು. ಮೇಯರ್ ಬಿ.ಎಚ್. ವಿನಾಯಕ, ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಪಾಲ್ಗೊಳ್ಳುವರು ಎಂದರು.

ಮಹೋತ್ಸವದಲ್ಲಿ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು, ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದಂಗಳವರು, ಮುಳುಬಾಗಿಲು ಶ್ರೀಪಾದರಾಜ ಮಠದ ಶ್ರೀ ಸುಜಯನಿಧಿ ತೀರ್ಥ ಶ್ರೀಪಾದಂಗಳವರು ಸೇರಿ ನಾಡಿನ ವಿವಿಧ ಮಠಾಧೀಶರು ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.

12 ರಂದು ಸಂಜೆ 5 ಗಂಟೆಗೆ ನಗರದ ಲಕ್ಷ್ಮೀ ಫ್ಲೋರ್ ಮಿಲ್‌ನಿಂದ ಬಾಪೂಜಿ ಬ್ಯಾಂಕ್ ಸಮುದಾಯ ಭವನದ ವರೆಗೆ ಶ್ರೀ ಗುರುರಾಜರ ಶೋಭಾಯಾತ್ರೆ ನೆರವೇರಲಿದೆ. 17 ರಂದು ಸಮಾರೋಪ ಸಮಾರಂಭ ನಡೆಯಲಿದ್ದು ಸಂಜೆ 6 ಗಂಟೆಯಿಂದ ಶ್ರೀ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಸದ ಜಿ.ಎಂ. ಸಿದ್ದೇಶ್ವರ, ಹರಿಹರ ಶಾಸಕ ಬಿ.ಪಿ. ಹರೀಶ್ ಪಾಲ್ಗೊಳ್ಳುವರು ಎಂದರು.

ಬೈಕ್ ರ್ಯಾಲಿ

ಮಹೋತ್ಸವದ ಅಂಗವಾಗಿ ನಗರದಲ್ಲಿ ಬೈಕ್ ರ‌್ಯಾಲಿ ಹಮ್ಮಿಕೊಳ್ಳಲಾಗಿದೆ. ಶನಿವಾರ ಸಂಜೆ 4.30ಕ್ಕೆ ರಾಂ ಆ್ಯಂಡ್ ಕೋ ವೃತ್ತದಲ್ಲಿ ರ್ಯಾಲಿಗೆ ಚಾಲನೆ ನೀಡಲಾಗುವುದು. ಅಲ್ಲಿಂದ ಹೊರಡುವ ರ್ಯಾಲಿಯು ನಿಜಲಿಂಗಪ್ಪ ಬಡಾವಣೆ, ರಿಂಗ್ ರಸ್ತೆ ಮೂಲಕ ಪಿಬಿ ರಸ್ತೆಯನ್ನು ತಲುಪಿ, ಅಲ್ಲಿಂದ ಮಹಾತ್ಮ ಗಾಂಧಿ ಸರ್ಕಲ್ ಮೂಲಕ ಕೆಬಿ ಬಡಾವಣೆಯ ರಾಘವೇಂದ್ರ ಸ್ವಾಮಿ ಮಠ ತಲುಪಲಿದೆ.

ಸಮಿತಿಯ ಕೋಶಾಧ್ಯಕ್ಷ ಡಾ. ಶಶಿಕಾಂತ್, ಸಹ ಕಾರ್ಯದರ್ಶಿ ಸತ್ಯಬೋಧ ಕುಲಕರ್ಣಿ, ಸದಸ್ಯರಾದ ಪಲ್ಲಕ್ಕಿ ವಾಸುದೇವಾಚಾರ್, ಗುರುರಾಜ ಕಡ್ಲೇಬಾಳ್, ಕೆ. ರಘುನಾಥರಾವ್, ಶೇಷಾಚಲ, ರಮೇಶ ಜಹಗೀರದಾರ್ ಗೋಷ್ಠಿಯಲ್ಲಿದ್ದರು.

 

Exit mobile version