Home ದಾವಣಗೆರೆ ಶಾಮನೂರು ಶಿವಶಂಕರಪ್ಪ ಸಮಾಜದ ಆಸ್ತಿ, ಸಮರ್ಥ್ ಅವರನ್ನು ಗೆಲ್ಲಿಸಿ ಋಣ ತೀರಿಸಿ: ಈಶ್ವರ ಖಂಡ್ರೆ
ದಾವಣಗೆರೆಬೆಂಗಳೂರು

ಶಾಮನೂರು ಶಿವಶಂಕರಪ್ಪ ಸಮಾಜದ ಆಸ್ತಿ, ಸಮರ್ಥ್ ಅವರನ್ನು ಗೆಲ್ಲಿಸಿ ಋಣ ತೀರಿಸಿ: ಈಶ್ವರ ಖಂಡ್ರೆ

Share
ಶಾಮನೂರು ಶಿವಶಂಕರಪ್ಪ
Share

ದಾವಣಗೆರೆ: ರಾಜ್ಯ ಸರ್ಕಾರ ಯಶಸ್ವಿಯಾಗಿ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳಿಂದ 1 ಕೋಟಿಗೂ ಹೆಚ್ಚು ಕುಟುಂಬಗಳು ಬಡತನ ರೇಖೆಯಿಂದ ಮೇಲೆ ಬಂದಿವೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.

ದಾವಣಗೆರೆಯಲ್ಲಿ ವೀರಶೈವ ಲಿಂಗಾಯತ ಸಮಾಜ ಬಾಂಧವರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಯಿಂದಾಗಿ ಬಡ ಕುಟುಂಬಗಳ ಕೊಳ್ಳುವ ಶಕ್ತಿ ಹೆಚ್ಚಿದೆ. ಆರ್ಥಿಕವಾಗಿ ಸಬಲವಾಗುತ್ತಿವೆ. ಹೀಗಾಗಿ ಬಡವರ, ರೈತರ ಪರವಾಗಿರುವ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.

ಶಾಮನೂರು ಶಿವಶಂಕರಪ್ಪರು ಸಮಾಜದ ಆಸ್ತಿ. ಅವರ ಮೊಮ್ಮಗ ಸಮರ್ಥ್ ಶಾಮನೂರು ಅವರನ್ನು ಭಾರೀ ಅಂತರದಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.

ಮತದಾರರು ಶಾಮನೂರು ಋಣ ತೀರಿಸುತ್ತಾರೆ- ಈಶ್ವರ ಖಂಡ್ರೆ ವಿಶ್ವಾಸ

ಹತ್ತಿ ಗಿರಣಿಗಳ ಯುಗ ಮುಗಿದು ದಾವಣಗೆರೆ ಕಳಾಹೀನವಾಗಿದ್ದಾಗ, ಜಿಲ್ಲೆಯನ್ನು ಔದ್ಯೋಗಿಕವಾಗಿ ಮತ್ತು ಶೈಕ್ಷಣಿಕವಾಗಿ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡುವಂತೆ ಮಾಡಿದ ಕೀರ್ತಿ ಶಾಮನೂರು ಶಿವಶಂಕರಪ್ಪ ಅವರಿಗೆ ಸಲ್ಲುತ್ತದೆ. ಎ.ವಿ.ಕೆ. ಮಹಿಳಾ ಕಾಲೇಜು ಮೂಲಕ ಸಾವಿರಾರು ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣ ನೀಡಿದ, ಬಾಪೂಜಿ ಶಿಕ್ಷಣ ಸಂಸ್ಥೆಯಿಂದ ಸಾವಿರಾರು ಜನರು ವೈದ್ಯಕೀಯ, ಎಂಜಿನಿಯರ್ ಪದವಿ ಪಡೆಯಲು ನೆರವಾದ ಶಾಮನೂರು ಶಿವಶಂಕರಪ್ಪ ಅವರನ್ನು ಜನ ಮರೆಯುವುದಿಲ್ಲ ಎಂದು ಈಶ್ವರ ಖಂಡ್ರೆ ಹೇಳಿದರು.

ಸಕ್ಕರೆ, ಅಕ್ಕಿ ಗಿರಣಿ, ಡಿಸ್ಟಲರಿಗಳನ್ನು ಸ್ಥಾಪಿಸಿ ಸಾವಿರಾರು ಜನರಿಗೆ ಉದ್ಯೋಗ ನೀಡಿದ, ದಾವಣಗೆರೆ ನಗರದ ಮೂಲಸೌಕರ್ಯ ಅಭಿವೃದ್ಧಿ ಮಾಡಿ, ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ ಶಾಮನೂರು ಅವರ ಋಣವನ್ನು ಜನ ತೀರಿಸುತ್ತಾರೆ. ಸಮರ್ಥ್ ರನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಸರ್ವರಿಗೂ ಲೇಸನ್ನೇ ಬಯಸುವ, ಸರ್ವರಿಗೂ ಸಾಮಾಜಿಕ ನ್ಯಾಯ ನೀಡಿದ್ದು ವೀರಶೈವಲಿಂಗಾಯತ ಸಮುದಾಯ. ಆದರೆ ನಾವೇ ನ್ಯಾಯ ಕೇಳುವ ಸ್ಥಿತಿ ನಿರ್ಮಾಣವಾದಾಗ ಸಮಾಜದ ಹಿತಕ್ಕಾಗಿ ಗಟ್ಟಿಯಾಗಿ ನಿಂತು ನ್ಯಾಯಕೊಡಿಸುತ್ತಿದ್ದವರು ಶಾಮನೂರು ಶಿವಶಂಕರಪ್ಪ ಎಂದು ಈಶ್ವರ ಖಂಡ್ರೆ ಹೇಳಿದರು.

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ 34 ವೀರಶೈವ ಲಿಂಗಾಯತ ಶಾಸಕರು ಆಯ್ಕೆಯಾಗಿದ್ದರು, ಶಾಮನೂರು ಅಣ್ಣ ಅವರ ಅಕಾಲಿಕ ನಿಧನದಿಂದ ಒಂದು ಸ್ಥಾನ ಕಡಿಮೆ ಆಗಿದೆ. ಸಮರ್ಥ್ ಅವರನ್ನು ಗೆಲ್ಲಿಸಿ, ಆ ಸ್ಥಾನ ಉಳಿಸಿಕೊಳ್ಳಬೇಕು, ಅದಕ್ಕೆ ನೀವೆಲ್ಲರೂ ಶ್ರಮಿಸಬೇಕು ಎಂದರು.

ವಿಘಟನೆಯಲ್ಲಿ ವೈಫಲ್ಯವಿದೆ. ಸಂಘಟನೆಯಲ್ಲಿ ಬಲವಿದೆ ಎಂದು ಪ್ರತಿಪಾದಿಸುತ್ತಿದ್ದ ಶಾಮನೂರು ಶಿವಶಂಕರಪ್ಪ ಅವರು, ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ ಬಂದಾಗ, ವೀರಶೈವರು- ಲಿಂಗಾಯತರು ಬೇರೆ ಅಲ್ಲ. ಇಬ್ಬರೂ ಒಂದೇ ನಾಣ್ಯದ ಎರಡು ಮುಖವಿದ್ದಂತೆ ಎಂದು ಒಕ್ಕೊರಲಿನಿಂದ ಹೇಳಿದರು ಎಂದು ಸ್ಮರಿಸಿದರು.

ತಮ್ಮ ಸ್ವಂತ ರಾಜಕೀಯಕ್ಕಿಂತ ಸಮುದಾಯ ದೊಡ್ಡದು. ಜನರ ಹಿತವೇ ಮುಖ್ಯ ಎಂದು ಶಾಮನೂರು ಶಿವಶಂಕರಪ್ಪನವರು ಸದಾ ಸಮಾಜದ ಪರವಾಗಿ ನಿಲ್ಲುತ್ತಿದ್ದರು. ಎಲ್ಲ ಜಾತಿ, ಧರ್ಮದವರಿಗೂ ದಾವಣಗೆರೆಯಲ್ಲಿ ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ಉನ್ನತ ಶಿಕ್ಷಣ ದೊರೆಯುವಂತೆ ಮಾಡಿದ್ದಾರೆ. ಸಾವಿರಾರು ವೈದ್ಯರು, ಎಂಜಿನಿಯರುಗಳು ಮತ್ತು ಪದವೀಧರರು ಇಂದು ವಿಶ್ವಾದ್ಯಂತ ಉನ್ನತ ಹುದ್ದೆಗಳಲ್ಲಿದ್ದಾರೆ ಇದೆಲ್ಲದರ ಹಿಂದಿದ್ದ ಶಕ್ತಿ ಶಾಮನೂರು ಎಂದರು.

ಬಸವಣ್ಣನವರು ಕಾಯಕವೇ ಕೈಲಾಸ ಎಂದು ಹೇಳಿದರು. ನೀವು ಕಾಯಕ ಮಾಡಿ ಗಳಿಸಿ, ಗಳಿಸಿದ್ದನ್ನು ಉಳಿಸಿ, ಉಳಿಸಿದ್ದನ್ನು ಸಮಾಜಕ್ಕೆ ವಿನಿಯೋಗಿಸಿ ಎಂದು ಪ್ರತಿಪಾದಿಸಿದ್ದರು. ಅದನ್ನು ಶಾಮನೂರು ಅವರು ತಮ್ಮ ಬದುಕಿನುದ್ದಕ್ಕೂ ಪಾಲಿಸಿದರು.
ಶಾಮನೂರು ಅವರು ಕೇವಲ ಹಣ ಗಳಿಸಲಿಲ್ಲ. ಅದನ್ನು ಸಮಾಜಕ್ಕೆ ವಿನಿಯೋಗಿಸಿದರು. ಡಾ. ಶಾಮನೂರು ಶಿವಶಂಕರಪ್ಪ ಜನ ಕಲ್ಯಾಣ ಟ್ರಸ್ಟ್ ಮೂಲಕ ಬಡ ವಿದ್ಯಾರ್ಥಿಗಳ ಸ್ಕಾಲರ್ ಶಿಪ್ ಗಾಗಿ 5 ಕೋಟಿ ಠೇವಣಿ ಇಟ್ಟರು. ಪತ್ರಕರ್ತರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ 1 ಕೋಟಿ ರೂಪಾಯಿ ಮೀಸಲಿಟ್ಟಾರೆ. ಜಾತಿ, ಮತ, ಧರ್ಮ ನೋಡದೆ ಪ್ರತಿಭಾವಂತ ಮಕ್ಕಳ ಶಿಕ್ಷಣಕ್ಕೆ ನೆರವಾಗಿದ್ದಾರೆ ಎಂದು ನೆನಪಿಸಿಕೊಂಡರು.

ಕೊರೊನಾ ಕಾಲದಲ್ಲಿ ಜನ ಭಯಭೀತರಾಗಿದ್ದಾಗ, ಲಸಿಕೆ ಸಿಗದೆ ಪರದಾಡುತ್ತಿದ್ದಾಗ, ಕೋಟ್ಯಂತರ ರೂಪಾಯಿ ನೀಡಿ ಲಸಿಕೆ ತರಿಸಿ ಇಡೀ ದಾವಣಗೆರೆ ಜಿಲ್ಲೆಯ ಜನರಿಗೆ ಉಚಿತವಾಗಿ ಲಸಿಕೆ ಯಾರಾದರೂ ಕೊಡಿಸಿದ್ದರೆ ಅದು ಶಾಮನೂರು ಶಿವಶಂಕರಪ್ಪ ಅವರು ಮಾತ್ರ. ಅವರ ಋಣ ತೀರಿಸಲು ಇಂದು ಒಂದು ಸದವಕಾಶ ಸಿಕ್ಕಿದೆ. ಅವರ ಮೊಮ್ಮಗ ಸಮರ್ಥ್ ಅವರಿಗೆ ಮತ ನೀಡಿ, ಭಾರೀ ಬಹುಮತದಿಂದ ಗೆಲ್ಲಿಸಿ ಎಂದು ನಾನು ಮನವಿ ಮಾಡಿದರು.

ಸಭೆಯಲ್ಲಿ ಸಚಿವರುಗಳಾದ ಲಕ್ಷ್ಮೀ ಹೆಬ್ಬಾಳ್ಕರ್, ಡಾ. ಶರಣಪ್ರಕಾಶ್ ಪಾಟೀಲ್, ಶಾಸಕ ತಮ್ಮಣ್ಣ ಮತ್ತಿತರರು ಪಾಲ್ಗೊಂಡಿದ್ದರು.

Share

Leave a comment

Leave a Reply

Your email address will not be published. Required fields are marked *