Home ಉದ್ಯೋಗ ವಾರ್ತೆ ಜಿಎಂಐಟಿ ಪಾಲಿಟೆಕ್ನಿಕ್‌ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ಪ್ರತಿಷ್ಠಿತ ಕಂಪನಿಗೆ ಟ್ರೈನೀ ಇಂಜಿನಿಯರ್‌ಗಳಾಗಿ ಆಯ್ಕೆ
ಉದ್ಯೋಗ ವಾರ್ತೆದಾವಣಗೆರೆಬೆಂಗಳೂರು

ಜಿಎಂಐಟಿ ಪಾಲಿಟೆಕ್ನಿಕ್‌ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ಪ್ರತಿಷ್ಠಿತ ಕಂಪನಿಗೆ ಟ್ರೈನೀ ಇಂಜಿನಿಯರ್‌ಗಳಾಗಿ ಆಯ್ಕೆ

Share
Share

ದಾವಣಗೆರೆ: ನಗರದ ಜಿಎಂಐಟಿ ಪಾಲಿಟೆಕ್ನಿಕ್‌ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ಬೆಂಗಳೂರಿನ ಪ್ರತಿಷ್ಠಿತ ಸೌತ್ ಕೊರಿಯಾ ಮೂಲದ DN Solutions ಕಂಪನಿಯಲ್ಲಿ ಟ್ರೈನೀ ಇಂಜಿನಿಯರ್‌ಗಳಾಗಿ ಉದ್ಯೋಗವನ್ನು ಪಡೆದಿದ್ದಾರೆ.

ಅಲ್ಲದೇ ಇವರೊಂದಿಗೆ ಇತರೆ ಎರಡು ಸರ್ಕಾರಿ ಮತ್ತು ಒಂದು ಖಾಸಗಿ ಪಾಲಿಟೆಕ್ನಿಕ್‌ ಕಾಲೇಜುಗಳ ನಾಲ್ವರು ವಿದ್ಯಾರ್ಥಿಗಳಿಗೆ ಈ ಅವಕಾಶವನ್ನು ಜಿಎಂಐಟಿ ಪಾಲಿಟೆಕ್ನಿಕ್ ಕಾಲೇಜು ಕಲ್ಪಿಸಿದೆ.

ಜಿಎಂಐಟಿ ಪಾಲಿಟೆಕ್ನಿಕ್ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ಚಿನ್ಮಯ್ ಆರ್.ಜಿ, ಜೀವನ್ ಕುಮಾರ್ ಎಂ.ಎಸ್ ಹಾಗೂ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ಉಮ್ಮೆ ಹಬಿಬಾ, ಐಶ್ವರ್ಯ ಕೆ.ಎಂ ಆಯ್ಕೆಯಾಗಿದ್ದಾರೆ.
ಇವರೊಂದಿಗೆ ಇತರೆ ಕಾಲೇಜುಗಳ ವಿದ್ಯಾರ್ಥಿಗಳಾದ ರಿಹಾನ್ ಜೆ (ಯಾಂತ್ರಿಕ ಇಂಜಿನಿಯರಿಂಗ್) – ಸರ್ಕಾರಿ ಪಾಲಿಟೆಕ್ನಿಕ್ ಹರಿಹರ, ಬಣಕಾರ ರಾಜೇಶ್ ಮತ್ತು ಅಂಬಲಿ ಅಜ್ಜಯ ಕುಮಾರ್ (ಯಾಂತ್ರಿಕ ಇಂಜಿನಿಯರಿಂಗ್) – ಸರ್ಕಾರಿ ಪಾಲಿಟೆಕ್ನಿಕ್ ಹರಪನಹಳ್ಳಿ, ಜಿ. ಕೋಟ್ರೇಶ (ವಿದ್ಯುತ್ ಇಂಜಿನಿಯರಿಂಗ್) – ಎಸ್ಟಿಜೆ ಪಾಲಿಟೆಕ್ನಿಕ್ ಹರಪನಹಳ್ಳಿ ಇವರುಗಳು ಉದ್ಯೋಗ ಪಡೆದಿದ್ದಾರೆ.

ಆಯ್ಕೆಯಾದ ಎಲ್ಲ ವಿದ್ಯಾರ್ಥಿಗಳು ಇಂಟರ್ನ್‌ಶಿಪ್ ನಂತರ ದಕ್ಷಿಣ ಕೊರಿಯಾಕ್ಕೆ ತರಬೇತಿಯ ಅವಕಾಶವನ್ನು ಪಡೆಯುವರು.
ಇತ್ತೀಚಿಗೆ ಜಿಎಂಐಟಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ DN Solutions ಕಂಪನಿಯ ಪೂಲ್ ಕ್ಯಾಂಪಸ್ ನೇಮಕಾತಿ ಡ್ರೈವ್ ಯಶಸ್ವಿಯಾಗಿ ನೆರವೇರಿತು.

ಒಟ್ಟು 110 ವಿದ್ಯಾರ್ಥಿಗಳು ಈ ಡ್ರೈವ್‌ನಲ್ಲಿ ಭಾಗವಹಿಸಿದ್ದರು. ಅವರಲ್ಲಿ 26 ವಿದ್ಯಾರ್ಥಿಗಳು ಎರಡನೇ ಸುತ್ತಿಗೆ ಆಯ್ಕೆಯಾದರು ಹಾಗೂ 8 ವಿದ್ಯಾರ್ಥಿಗಳು ಅಂತಿಮವಾಗಿ ಆಯ್ಕೆಗೊಂಡರು.

ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ಉದ್ಯೋಗದ ಆಫರ್ ಲೆಟರ್‌ಗಳನ್ನು ಜಿಎಂ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಸುನೀಲ್ ಕುಮಾರ್ ಬಿ.ಎಸ್, ಆಡಳಿತಧಿಕಾರಿಗಳಾದ ವೈ.ಯು. ಸುಭಾಷ್, ಕಂಪ್ಯೂಟರ್ ವಿಜ್ಞಾನ ಮತ್ತು ತಂತ್ರಜ್ಞಾನ ಶಾಲೆಯ ನಿರ್ದೇಶಕ ಡಾ. ಸಂಜಯ್ ಪಾಂಡೆ ಎಂ.ಬಿ, ಕೊಂಡಜ್ಜಿ ಜಯಪ್ರಕಾಶ್ ಅವರು ವಿತರಿಸಿ, ಅಭಿನಂದಿಸಿ, ಶುಭ ಹಾರೈಸಿದರು.

ತಮ್ಮ ಪೋಷಕರ ಸಮಕ್ಷಮದಲ್ಲಿ ಉದ್ಯೋಗದ ಆಫರ್ ಲೆಟರ್‌ಗಳನ್ನು ಪಡೆದ ಸಂಭ್ರಮ ಆಯ್ಕೆಗೊಂಡ ವಿದ್ಯಾರ್ಥಿಗಳದ್ದಾಗಿತ್ತು. ತಮ್ಮ ಮಕ್ಕಳಿಗೆ ಉದ್ಯೋಗ ಸಿಕ್ಕ ಖುಷಿ ಪೋಷಕರದ್ದಾಗಿತ್ತು. ಇದರಿಂದ ಗೌರವ ಮತ್ತು ಸಂತೋಷದ ವಾತಾವರಣ ನಿರ್ಮಾಣವಾಗಿತ್ತು. ತಮಗೆ ಉದ್ಯೋಗದ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಕ್ಕೆ ಆಯ್ಕೆಯಾದ ಇತರೆ ಪಾಲಿಟೆಕ್ನಿಕ್ ಕಾಲೇಜುಗಳ ವಿದ್ಯಾರ್ಥಿಗಳು ಜಿಎಂಐಟಿ ಪಾಲಿಟೆಕ್ನಿಕ್ ಕಾಲೇಜಿಗೆ ಧನ್ಯವಾದ ಅರ್ಪಿಸಿದರು.

ಸತತ ಮಾರ್ಗದರ್ಶನಕ್ಕಾಗಿ ಜಿಎಂಐಟಿ ಪಾಲಿಟೆಕ್ನಿಕ್ ಪ್ರಾಂಶುಪಾಲರಾದ ಡಾ. ಬಿ.ಆರ್. ಶ್ರೀಧರ್ ಅವರು ಆಯ್ಕೆಯಾದ ಎಲ್ಲ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಜೊತೆಗೆ DN Solutions ಕಂಪನಿಗೆ ಧನ್ಯವಾದ ಅರ್ಪಿಸಿದ್ದಾರೆ. ವಿದ್ಯಾರ್ಥಿಗಳು ಡಾ. ಬಿ.ಆರ್. ಶ್ರೀಧರ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ಪ್ಲೇಸ್‌ಮೆಂಟ್ ಡ್ರೈವ್ ಅನ್ನು ಯಶಸ್ವಿಯಾಗಿ ನಡೆಸಲು ಶ್ರಮಿಸಿದ ಪಾಲಿಟೆಕ್ನಿಕ್ ಪ್ಲೇಸ್‌ಮೆಂಟ್ ಸಂಯೋಜಕರಾದ ದಯಾನಂದ ಎಸ್.ಪಿ. ಮತ್ತು ರೋಜಾ ಅವರಿಗೆ ವಿಶೇಷ ಧನ್ಯವಾದ ಹೇಳಲಾಯಿತು.

ಈ ಸಂದರ್ಭದಲ್ಲಿ DN Solutions ಕಂಪನಿಯ ಉಪಾಧ್ಯಕ್ಷರಾದ ಸುರೇಶ್ ನಾರಾಯಣ, ಹೆಚ್ಆರ್ ಆಗಿರುವ ಸ್ಮಿತಾ, ಜಿಎಂ ವಿಶ್ವವಿದ್ಯಾಲಯದ ಪ್ಲೇಸ್‌ಮೆಂಟ್ ಅಧಿಕಾರಿಗಳಾದ ವಿಲಾಸ್ ವಾಟ್ವೆ ಮತ್ತು ಸುನಿಲ್ ಕುಮಾರ್ ಎಂ.ಸಿ ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *