SUDDIKSHANA KANNADA NEWS/ DAVANAGERE/ DATE_03-07_2025
ದಾವಣಗೆರೆ: ರಾಜ್ಯ ಸರ್ಕಾರವು ಕೂಡಲೇ ಭೂಸ್ವಾಧೀನ ಕಾನೂನು ಹಿಂಪಡೆಯಬೇಕು ಎಂದು ಸಾಣೇಹಳ್ಳಿಯ ಶ್ರೀ ತರಳಬಾಳು ಜಗದ್ಗುರು ಶಾಖಾಮಠದ ಪಟ್ಟಾಧ್ಯಕ್ಷರಾದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿಗಳು ಒತ್ತಾಯಿಸಿದ್ದಾರೆ.
READ ALSO THIS STORY: EXCLUSIVE: ದಾವಣಗೆರೆಯಲ್ಲಿ ಹೃದಯಾಘಾತಕ್ಕೆ 2ನೇ ಬಲಿ: ಎದೆನೋವೆಂದು ಆಸ್ಪತ್ರೆಗೆ ಹೋದ ಬಳಿಕ ಸಾವು!
ಪ್ರಗತಿಯೋ, ಪರಿಸರ ಜಾಗೃತಿಯೋ, ಬಂಡವಾಳ ಶಾಹಿಗಳ ದಾಳವೋ, ಕೃಷಿಕರ ಬದುಕು ಕಟ್ಟುವುದೋ? ಇದು ಮುಖ್ಯ ಪ್ರಶ್ನೆ. ದೇವನೂರು ತಾಲ್ಲೂಕಿನ ಚನ್ನರಾಯ ಪಟ್ಟಣದ ಸುಮಾರು 13 ಹಳ್ಳಿಗಳ ಎಲ್ಲ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಕಾನೂನು ಜಾರಿಯಲ್ಲಿ ಬಂದಿದೆ. ಇದು ಬಂದು ನಾಲ್ಕು ವರ್ಷಗಳಾಗಿವೆ. ಅಂದಿನಿಂದ ಇಂದಿನವರೆಗೂ ಆ ಎಲ್ಲ ಹಳ್ಳಿಗಳ ಕೃಷಿಕರು ನಮ್ಮ ಬದುಕಿಗೆ ಈ ಭೂಮಿಯೇ ಆಧಾರ. ನಮ್ಮ ಪ್ರಾಣ ಹೋದರೂ ಭೂಮಿಯನ್ನು ಬಿಡೆವು ಎಂದು ಹೋರಾಟ ಮಾಡುತ್ತಲೇ ಬಂದಿದ್ದಾರೆ ಎಂದು ತಿಳಿಸಿದ್ದಾರೆ.
ಜಾಣ, ಕಿವುಡು ಸರ್ಕಾರಗಳು ರೈತರ ಕಿವಿಗೆ ಹೂ ಮುಡಿಸುವ ಕಾರ್ಯವನ್ನು ವ್ಯವಸ್ಥಿತವಾಗಿ ಮಾಡುತ್ತ ಬಂದಿವೆ. ರೈತರು ಅದಕ್ಕೆ ಸೊಪ್ಪು ಹಾಕದೆ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿಕೊಂಡೇ ಬಂದಿದ್ದಾರೆ. ಕಳೆದ ತಿಂಗಳು ೨೫ ರಂದು ದೇವನಳ್ಳಿ ಚಲೋ ಎನ್ನುವ ಹೋರಾಟ ನಡೆಯಿತು. ಇದರಲ್ಲಿ ನೊಂದ ರೈತರು ಮಾತ್ರವಲ್ಲದೆ ರೈತಸಂಘದವರು, ಪ್ರಗತಿಪರರು, ಪರಿಸರಪ್ರೇಮಿಗಳು ಹೀಗೆ ಸಾವಿರಾರು ಜನರು ಸೇರಿ ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿ ತಕ್ಷಣ ಸರ್ಕಾರ ರೈತರ ಜಮೀನು ಪಡೆಯುವ ಸಾಹಸದಿಂದ ಹಿಂದೆ ಸರಿದು ಅವರು ನೆಮ್ಮದಿಯಿಂದ ಬಾಳಲು ಅವಕಾಶ ಮಾಡಿಕೊಡಬೇಕೆಂದು ಸಾತ್ವಿಕವಾಗಿಯೇ ಪ್ರತಿಭಟನೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಬೆಂಗಳೂರಲ್ಲಿ ಬೃಹತ್ ಪ್ರಮಾಣದಲ್ಲಿ ಎಲ್ಲ ರೈತಪರ ಸಂಘಟನೆಗಳು, ಚಲನಚಿತ್ರ ಕ್ಷೇತ್ರದವರು, ಪ್ರಗತಿಪರರು, ರೈತಪರ ಕಾಳಜಿ ಇರುವವರು ಸೇರಿ ಸರ್ಕಾರದ ಧೋರಣೆಯನ್ನು ಪ್ರತಿಭಟಿಸಲಿದ್ದು,ಜೂನ್ 4ರಂದು ಮುಖ್ಯಮಂತ್ರಿಗಳ ಜೊತೆ ಸಭೆ ನಡೆಯುವ ಭರವಸೆ ಇದೆ. ಆಗ ಮುಖ್ಯಮಂತ್ರಿಗಳು ರೈತರ ಪರವಾಗಿ ತಮ್ಮ ನಿರ್ಧಾರವನ್ನು ಪ್ರಕಟಿಸುತ್ತಾರೆ ಎಂದು ನಂಬಿದ್ದೇವೆ. ಯಾರೇನು ಮಣ್ಣು ತಿಂದು ಬದುಕಲು ಸಾಧ್ಯವಿಲ್ಲ. ಎಲ್ಲರಿಗೂ ಬೇಕಾದ ಅನ್ನವನ್ನು ಬೆಳೆದುಕೊಡುವ ಭೂಮಿಯನ್ನೇ ಕಬಳಿಸಿದರೆ ಮುಂದೆ ಆ ರೈತರ ಮತ್ತು ಅನ್ನ ತಿನ್ನುವವರ ಗತಿ ಏನು? ಎಂದು ಪ್ರಶ್ನಿಸಿದ್ದಾರೆ.
ಪ್ರಾಣವನ್ನು ಬೇಕಾದರೆ ಕೊಟ್ಟೇವು, ನಮ್ಮ ಕೃಷಿ ಭೂಮಿಯನ್ನು ಕೊಡುವುದಿಲ್ಲ ಎನ್ನುವ ನಿರ್ಧಾರ ಎಲ್ಲ ಕೃಷಿಕರದಾಗಿದೆ. ಪ್ರಗತಿ ಮತ್ತು ಪರಿಸರ ಇವುಗಳಲ್ಲಿ ಯಾವುದು ಮುಖ್ಯ? ಮೊದಲು ಪರಿಸರ ಸಂರಕ್ಷಣೆ ನಂತರ ಪ್ರಗತಿ. ಕೃಷಿಭೂಮಿಯನ್ನು ಕಸಿಯುವುದೆಂದರೆ ನಮ್ಮ ಅನ್ನವನ್ನು ನಾವೇ ಕಳೆದುಕೊಂಡಂತೆ. ಹಾಗಾಗಿ ನಾವು ಕೂಡ ಆ ರೈತರ ಪರಿವಾಗಿಯೇ ಸರಕಾರಕ್ಕೆ ಈ ಮೂಲಕ ಮನವಿ ಮಾಡುವುದು; ಬಂಡವಾಳಶಾಹಿಗಳ ದಾಳಕ್ಕೆ ಬಲಿಯಾಗದೆ ಕೃಷಿಕರ ಬದುಕನ್ನು ಕಟ್ಟುವ ಕಾರ್ಯವನ್ನು ಸರ್ಕಾರ ಮತ್ತು ಮುಖ್ಯಮಂತ್ರಿಗಳು ಮಾಡಬೇಕೆಂದು ಒತ್ತಾಯಿಸುತ್ತೇವೆ. ತಕ್ಷಣ
ಭೂಸ್ವಾಧೀನ ಕಾನೂನನ್ನು ಹಿಂಪಡೆದು ಅಲ್ಲಿಯ ರೈತಸಮೂಹ ನೆಮ್ಮದಿಯ ನಿಟ್ಟಿಸಿರಿಟ್ಟು ನಾಡಿಗೆ ಬೇಕಾದ ಆಹಾರ ಪದಾರ್ಥಗಳನ್ನು ಬೆಳೆಯಲು ಅವಕಾಶ ಮಾಡಿಕೊಡಬೇಕೆಂದು ಕಳಕಳಿಯಿಂದ ಕೇಳಿಕೊಳ್ಳುತ್ತೇವೆ ಎಂದಿದ್ದಾರೆ.
ಆ ರೈತರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ. ಪ್ರಗತಿ ಮತ್ತು ಪರಿಸರ ಇವುಗಳಲ್ಲಿ ಯಾವುದು ಮುಖ್ಯ. ಜನರ ಬದುಕು ಮತ್ತು ಪರಿಸರ ಕಾಳಜಿ ಮುಖ್ಯವೋ, ಪ್ರಗತಿ ಮುಖ್ಯವೋ. ಈ ಬಗ್ಗೆ ನಿರಂತರ ಸಂಘರ್ಷ, ಹೋರಾಟ ನಡೆಯುತ್ತಲೇ ಬಂದಿದೆ. ಕಳೆದ ನಾಲ್ಕು ವರ್ಷಗಳಿಂದ ಇಂತಹ ಪ್ರಯತ್ನ ನಡೀತಾ ಇರುವುದರಿಂದ ಸರಕಾರ ಸೂಕ್ತ ತೀರ್ಮಾನವನ್ನು ತೆಗೆದುಕೊಂಡು ರೈತರಿಗೆ ನ್ಯಾಯವನ್ನು ಒದಗಿಸುತ್ತೆ ಅಂತ ಭಾವಿಸಿ ಸರಕಾರಕ್ಕೆ ಈ ಮನವಿಯನ್ನು ಮಾಡುತ್ತೇವೆ ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.