Home ತಾತ ಶಾಮನೂರು ಶಿವಶಂಕರಪ್ಪರಂತೆ ಜನಸೇವೆ ಮಾಡಲು ಜನರೇ ಆದೇಶ ನೀಡಿದ್ದಾರೆ: ಸಮರ್ಥ್ ಶಾಮನೂರು
Home

ತಾತ ಶಾಮನೂರು ಶಿವಶಂಕರಪ್ಪರಂತೆ ಜನಸೇವೆ ಮಾಡಲು ಜನರೇ ಆದೇಶ ನೀಡಿದ್ದಾರೆ: ಸಮರ್ಥ್ ಶಾಮನೂರು

Share
ಶಾಮನೂರು ಶಿವಶಂಕರಪ್ಪ
Share

ದಾವಣಗೆರೆ: “ನಮ್ಮ ತಾತ ಶಾಮನೂರು ಶಿವಶಂಕರಪ್ಪರ ಹಾದಿಯಲ್ಲೇ ಜನಸೇವೆ ಮಾಡಲು ದಾವಣಗೆರೆಯ ಜನತೆ ನನಗೆ ಆದೇಶ ನೀಡಿದ್ದಾರೆ. ಅವರ ಆಶೀರ್ವಾದದೊಂದಿಗೆ ಇಂದು ನಾಮಪತ್ರ ಸಲ್ಲಿಸುತ್ತಿದ್ದೇನೆ,” ಎಂದು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಪುತ್ರ ಸಮರ್ಥ್ ಶಾಮನೂರು ಹೇಳಿದ್ದಾರೆ.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಬಾರಿಯ ಚುನಾವಣೆ ತಾತನವರ ಅನುಪಸ್ಥಿತಿಯಲ್ಲಿ ನಡೆಯುತ್ತಿರುವುದು ಭಾವುಕ ಕ್ಷಣ ಎಂದರು. “ಅಪ್ಪಾಜಿ (ಶಾಮನೂರು ಶಿವಶಂಕರಪ್ಪ) ಕೇವಲ ಜಿಲ್ಲೆಗೆ ಮಾತ್ರವಲ್ಲ, ಇಡೀ ರಾಜ್ಯಕ್ಕೆ ಮಾದರಿ. ಅವರು ಎಲ್ಲಾ ಜಾತಿ, ಸಮುದಾಯಗಳೊಂದಿಗೆ ಹೊಂದಿದ್ದ ಬಾಂಧವ್ಯವೇ ನಮಗೆ ಶ್ರೀರಕ್ಷೆ,” ಎಂದು ಸ್ಮರಿಸಿದರು.

ಪಕ್ಷೇತರ ಸ್ಪರ್ಧೆ ಪ್ರಶ್ನೆಗೆ ಗರಂ:

“ನೀವು ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದೀರಾ?” ಎಂಬ ಮಾಧ್ಯಮದವರ ಪ್ರಶ್ನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಮರ್ಥ್, “ಶಾಮನೂರು ಕುಟುಂಬದ ಹಿನ್ನೆಲೆ ನಿಮಗೆ ಗೊತ್ತಿಲ್ಲವೇ? ಇಂತಹ ಪ್ರಶ್ನೆಗಳನ್ನು ಕೇಳುವ ಮೊದಲು ಸ್ವಲ್ಪ ಓದಿಕೊಳ್ಳಿ,” ಎಂದು ಖಾರವಾಗಿ ಪ್ರತಿಕ್ರಿಯಿಸಿದರು. ತಮಗೆ ಕಾಂಗ್ರೆಸ್ ಬಿ-ಫಾರಂ ಸಿಗುವ ಸಂಪೂರ್ಣ ವಿಶ್ವಾಸವಿದ್ದು, ಪಕ್ಷದ ಅಧಿಕೃತ ಅಭ್ಯರ್ಥಿಯಾಗಿಯೇ ಕಣಕ್ಕಿಳಿಯುವುದಾಗಿ ಸ್ಪಷ್ಟಪಡಿಸಿದರು.

ಕ್ಷೇತ್ರದ ಜನರೊಂದಿಗೆ ತಮಗೆ ಮೊದಲಿನಿಂದಲೂ ನಿಕಟ ಸಂಪರ್ಕವಿದೆ. ತಾತ, ತಂದೆ ಮತ್ತು ತಾಯಿಯ ಚುನಾವಣಾ ಪ್ರಚಾರದ ಸಮಯದಲ್ಲಿ ಓಡಾಡಿರುವ ಅನುಭವವಿದ್ದು, ಕ್ಷೇತ್ರದ ಮತದಾರರು ತಮ್ಮನ್ನು ಅತಿ ಹೆಚ್ಚಿನ ಪ್ರೀತಿಯಿಂದ ಬರಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.

Share

Leave a comment

Leave a Reply

Your email address will not be published. Required fields are marked *