ದಾವಣಗೆರೆ: ಕನ್ನಡ ಕೇವಲ ಭಾಷೆಯಲ್ಲ, ಅದು ನಮ್ಮ ಬದುಕಿನ ಭಾಗ. ಆಡಳಿತದಲ್ಲಿ ಕನ್ನಡವನ್ನು ಸಂಪೂರ್ಣವಾಗಿ ಅನುಷ್ಠಾನಕ್ಕೆ ತರುವ ಮೂಲಕ ದಾವಣಗೆರೆ ಜಿಲ್ಲೆ ರಾಜ್ಯಕ್ಕೆ ಮಾದರಿಯಾಗಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರಾಧಿಕಾರದ ಅಧ್ಯಕ್ಷ ಡಾ:ಪುರುಷೊತ್ತಮ ಬಿಳೆಮಲೆ ಕರೆ ತಿಳಿಸಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯ ನಂತರ ಪತ್ರಿಕಾ ಗೋಷ್ಠಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಕನ್ನಡ ಅನುಷ್ಠಾನ ವಿಧೇಯಕ-2022 ರಡಿ ಕನ್ನಡ ಅನುಷ್ಠಾನದಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ಮೇಲೆ ನೇರ ಶಿಸ್ತು ಕ್ರಮ ಕೈಗೊಳ್ಳುವ ಶಕ್ತಿಯುತ ಅಧಿಕಾರವನ್ನು ಈ ಹೊಸ ಕಾನೂನುನಲ್ಲಿದೆ, ಈಗಾಗಲೇ ಕನ್ನಡ ಅನುಷ್ಠಾನದಲ್ಲಿ ನಿರ್ಲಕ್ಷ್ಯ ತೋರಿದ ಕೆಲವು ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲಾಗಿದೆ ಮತ್ತು ವರ್ಗಾವಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕನ್ನಡ ಕಾಯ್ದೆ ಇನ್ನಷ್ಟು ಬಲಿಷ್ಠಗೊಳ್ಳಲಿದ್ದು, ಆದೇಶ ಉಲ್ಲಂಘಿಸುವವರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದರು.
ಜಾಗತೀಕರಣದ ನಂತರ ಇಂಗ್ಲಿಷ್ ಕೇವಲ ಜಾಹೀರಾತಿನ ಭಾಷೆಯಾಗಿ ಬೆಳೆದಿದೆ. ಆದರೆ ಕನ್ನಡವು ಕುವೆಂಪು, ಬಸವಣ್ಣ, ಪಂಪ, ಬೇಂದ್ರೆಯವರಂತಹ ಮಹಾನ್ ವ್ಯಕ್ತಿಗಳನ್ನು ನೀಡಿದ ಸೃಜನಶೀಲ ಭಾಷೆ. ಈ ಭವ್ಯ ಪರಂಪರೆಯನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಫ್ರೆಂಚ್, ಜರ್ಮನ್ ಅಥವಾ ಹಿಂದಿ ಸೇರಿದಂತೆ ಯಾವುದೇ ಭಾಷೆ ಕಲಿಯಲು ಅಭ್ಯಂತರವಿಲ್ಲ. ಆದರೆ ನಮ್ಮ ನೆಲದಲ್ಲಿ ಕನ್ನಡವೇ ಸಾರ್ವಭೌಮವಾಗಿರಬೇಕು. ನಾವು ಎಲ್ಲೇ ಹೋದರೂ ಕನ್ನಡವನ್ನು ಉಳಿಸಿಕೊಳ್ಳಬೇಕು ಎಂದರು.
ವಿದೇಶಿ ಹೂಡಿಕೆ ಅಥವಾ ಬೇರೆ ರಾಜ್ಯದವರೇ ಕೈಗಾರಿಕೆ ನಡೆಸುತ್ತಿದ್ದರೂ ಸಹ, ಅಲ್ಲಿ ಕನ್ನಡದ ವಾತಾವರಣ ಇರಬೇಕು. ರಸ್ತೆಗಳಿಗೆ ಮತ್ತು ಬಡಾವಣೆಗಳಿಗೆ ನಾಡಿನ ಸಾಹಿತಿಗಳ, ಗಣ್ಯರ ಹೆಸರಿಡುವ ಮೂಲಕ ಕನ್ನಡದ ಅಸ್ಮಿತೆಯನ್ನು ಎತ್ತಿ ಹಿಡಿಯಬೇಕು, ದಾವಣಗೆರೆ ಜಿಲ್ಲಾಧಿಕಾರಿಗಳ ಕನ್ನಡ ಪರ ಕಾಳಜಿಯನ್ನು ಶ್ಲಾಘಿಸಿದ ಅಧ್ಯಕ್ಷರು, ಜಿಲ್ಲೆಯಲ್ಲಿ ಆಗುತ್ತಿರುವ ಕನ್ನಡ ಪರ ಕೆಲಸಗಳನ್ನು ತಾವು ರಾಜ್ಯದ ಮುಖ್ಯಮಂತ್ರಿಗಳಿಗೆ ಮತ್ತು ಇತರ ಜಿಲ್ಲೆಗಳ ಸಭೆಗಳಲ್ಲಿ ಉದಾಹರಣೆಯಾಗಿ ನೀಡಲಿದ್ದೇವೆ ಎಂದು ತಿಳಿಸಿದರು.
ಜಿಲ್ಲಾ ಮಟ್ಟದ ಕೆಡಿಪಿ ಸಭೆಗಳಲ್ಲಿ ಕನ್ನಡ ಭಾಷಾ ಅನುಷ್ಠಾನದ ಕುರಿತು ಗಂಭೀರ ಚರ್ಚೆ ನಡೆಯಬೇಕು ಮತ್ತು ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು. ಪ್ರತಿಯೊಂದು ವಾಣಿಜ್ಯ ಮಳಿಗೆ ಮತ್ತು ಕೈಗಾರಿಕೆಗಳ ನಾಮಫಲಕದಲ್ಲಿ ಶೇ. 60 ರಷ್ಟು ಭಾಗ ಕನ್ನಡ ಕಡ್ಡಾಯವಾಗಿರಬೇಕು. ನಾಮಫಲಕಗಳಲ್ಲಿ ಶೇ. 60:40 ರಷ್ಟು ಕನ್ನಡ ಇರಬೇಕು ಎಂಬ ನಿಯಮವನ್ನು ದಾವಣಗೆರೆಯಲ್ಲಿ ಅತ್ಯುತ್ತಮವಾಗಿ ಜಾರಿಗೆ ತರಲಾಗಿದೆ. ಕಳೆದ ಒಂದು ವರ್ಷದಲ್ಲಿ ಈ ನಿಯಮ ಉಲ್ಲಂಘಿಸಿದವರಿಂದ ಸುಮಾರು 80,000 ರೂ.ಗಳಷ್ಟು ದಂಡವನ್ನು ಮಹಾನಗರ ಪಾಲಿಕೆ ಸಂಗ್ರಹಿಸಿದೆ. ಇದು ರಾಜ್ಯಕ್ಕೆ ಮಾದರಿಯಾದ ಕೆಲಸ ಎಂದು ಅಧ್ಯಕ್ಷರು ಶ್ಲಾಘಿಸಿದರು.
ವೈದ್ಯಕೀಯ ಚೀಟಿಯಲ್ಲಿ ವೈದ್ಯರು ರೋಗಿಗಳ ಹೆಸರನ್ನು ಕಡ್ಡಾಯವಾಗಿ ಕನ್ನಡದಲ್ಲಿ ಬರೆಯಬೇಕು. ಖಾಸಗಿ ಆಸ್ಪತ್ರೆಗಳಲ್ಲೂ ಹಂತ ಹಂತವಾಗಿ ಕನ್ನಡ ಬಳಕೆಯನ್ನು ಜಾರಿಗೆ ತರಲು ಸೂಚಿಸಲಾಗಿದೆ. ಮರಣ ಪ್ರಮಾಣ ಪತ್ರ ಹಾಗೂ ಪೋಸ್ಟ್ಮಾರ್ಟಂ ವರದಿಯು ಸಹ ಜನಸಾಮಾನ್ಯರಿಗೆ ಅರ್ಥವಾಗುವಂತೆ ಇವುಗಳು ಕನ್ನಡದಲ್ಲೇ ಇರಬೇಕು ಎಂಬ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗಳು ಒಪ್ಪಿಕೊಂಡಿದ್ದು ಇದನ್ನು ಜಾರಿಗೆ ತರುವಂತೆ ತಿಳಿಸಿದರು.
ಶಾಲೆಗಳಲ್ಲಿ ನಲಿ-ಕಲಿ ಕಲಿಕಾ ಪರಿಕಲ್ಪನೆ ಯಶಸ್ವಿಗೊಳಿಸಲು ಪರಿಶೀಲನೆ ಮಾಡಲಾಗುವುದು, ಈ ಕುರಿತು ವರದಿಯನ್ನು ಮಾನ್ಯ ಮುಖ್ಯಮಂತ್ರಿಯವರಿಗೆ ಸಲ್ಲಿಸಲು ಕ್ರಮವಹಿಸಲಾಗಿದೆ, ಜಿಲ್ಲೆಯ ಖಾಸಗಿ ಶಾಲೆಗಳಲ್ಲಿ ನಾಡಗೀತೆಯನ್ನು ಹಾಡುತ್ತಿಲ್ಲವೆಂಬ ದೂರುಗಳು ಬಂದಿದೆ. ಆದುದರಿಂದ ಖಾಸಗಿ ಶಾಲೆಗಳಲ್ಲಿ ನಾಡಗೀತೆಯನ್ನು ಕಡ್ಡಾಯಗೊಳಿಸಲು ಜಿಲ್ಲಾಡಳಿತ ಕ್ರಮವಹಿಸುವಂತೆ ತಿಳಿಸಿದರು, ಈಗಾಗಲೇ 180 ಮದರಸಾಗಳಲ್ಲಿ ಪ್ರಾಥಮಿಕ ಕನ್ನಡ ಕಲಿಕಾ ಕೇಂದ್ರಗಳನ್ನು ಆರಂಭಿಸಲಾಗಿದ್ದು, 2026 ರ ಮಾರ್ಚ್ ವೇಳೆಗೆ ಈ ಯೋಜನೆಯನ್ನು ಒಟ್ಟು 1,200 ಮದರಸಾಗಳಿಗೆ ವಿಸ್ತರಿಸುವ ಗುರಿ ಹೊಂದಲಾಗಿದೆ. ಇದು ಉರ್ದು ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಕನ್ನಡ ಕಲಿಕೆ ಸುಲಭವಾಗಲಿದೆ ಎಂದರು.
ರಾಜ್ಯದಲ್ಲಿರುವ 3900 ಶಾಲೆಗಳು ಶತಮಾನ ಕಂಡ ಶಾಲೆಗಳಿವೆ, ಅಂತಹ ಅನೇಕ ಶಾಲೆಗಳು ಇಂದು ಮುಚ್ಚುವ ಸ್ಥಿತಿಯಲ್ಲಿವೆ. ಹರಪನಹಳ್ಳಿ ಶಾಲೆಗೆ ಮಹಾತ್ಮ ಗಾಂಧೀಜಿ ಭೇಟಿ ನೀಡಿದ್ದರು, ರಾಜ್ಯದಲ್ಲಿರುವ ಶಾಲೆಗಳ ಮೇಲೆ ಗಾಂಧಿ ಮತ್ತು ರವೀಂದ್ರನಾಥ್ ಠ್ಯಾಗೂರ್ ಅವರ ಪ್ರಭಾವ ಬೀರಿದೆ, ಇದು ಸಂತೋಷದ ವಿಷಯವಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರವು ರಾಜ್ಯದ 19700 ಶಾಲೆಗಳಿಗೆ ಹಕ್ಕುಪತ್ರಗಳನ್ನು ನೀಡಲು ಸಹಕರಿಸಿದೆ. ಈಗ ಹೊಸದಾಗಿ ಕೆಪಿಎಸ್ ಶಾಲೆಗಳನ್ನು ತೆರೆಯಲಾಗಿದ್ದು ಪೋಷಕರು ಮಕ್ಕಳನ್ನು ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಿಸಲು ಇಚ್ಚೆ ಪಡುತ್ತಾರೆ ಎಂದರು.
ಈ ವೇಳೆ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ್ ಹಾನಗಲ್, ಸದಸ್ಯರಾದ ಡಾ:ಎ.ಬಿ. ರಾಮಚಂದ್ರಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ವಾಮದೇವಪ್ಪ ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು.
- District Kannada Sahitya Parishat
- Dr. A.B. Ramachandrappa
- Dr. Santosh Hanagal
- Kannada Literature Meeting
- Kannada Sahitya Parishat President
- Pradhikara
- Secretary Dr. Santosh Hanagal.
- Vamadevappa
- ಕನ್ನಡ ಮತ್ತು ಸಂಸ್ಕೃತಿ ಇಲಾಖೆ.
- ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು
- ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್
- ಡಾ. ಎ.ಬಿ. ರಾಮಚಂದ್ರಪ್ಪ
- ಡಾ. ಸಂತೋಷ್ ಹಾನಗಲ್
- ಪ್ರಾಧಿಕಾರ
- ವಾಮದೇವಪ್ಪ
- ಸಾಹಿತ್ಯ ಸಭೆ





Leave a comment