SUDDIKSHANA KANNADA NEWS/ DAVANAGERE/ DATE:13-04-2023
ದಾವಣಗೆರೆ: ದಾವಣಗೆರೆ ಉತ್ತರ (DAVANAGERE NORTH) ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ (CONGRESS) ಅಭ್ಯರ್ಥಿಯಾಗಿ ಎಸ್. ಎಸ್. ಮಲ್ಲಿಕಾರ್ಜುನ್ (S. S. MALLIKARJUN)ಇಂದು ಸಾಂಕೇತಿಕವಾಗಿ ನಾಮಪತ್ರ (NOMINATION) ಸಲ್ಲಿಸಿದರು.
ಮಹಾನಗರ ಪಾಲಿಕೆಯ ಮೇಯರ್ ಕಚೇರಿಯಲ್ಲಿ ಉತ್ತರ ಕ್ಷೇತ್ರದ ಚುನಾವಣಾಧಿಕಾರಿ ಶ್ರೀನಿವಾಸ್ ಅವರಿಗೆ ಉಮೇದುವಾರಿಕೆ ಸಲ್ಲಿಕೆ ಮಾಡಿದರು. ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಜೊತೆ ಆಗಮಿಸಿದ ಮಲ್ಲಿಕಾರ್ಜುನ್ ಅವರು, ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಕೆ ಮಾಡುವ ಮೂಲಕ ಅಧಿಕೃತವಾಗಿ ಕಣಕ್ಕಿಳಿದಿದ್ದಾರೆ.
ಬಿಜೆಪಿಯಿಂದ ಲೋಕಿಕೆರೆ ನಾಗರಾಜ್ ಕಣಕ್ಕಿಳಿದಿದ್ದು, ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪೈಪೋಟಿ ಏರ್ಪಡಲಿದೆ. ಆಮ್ ಆದ್ಮಿ ಪಕ್ಷದಿಂದ ಶ್ರೀಧರ್ ಪಾಟೀಲ್ ಗೆ ಟಿಕೆಟ್ ಘೋಷಿಸಲಾಗಿದೆ. ಜೆಡಿಎಸ್ ಅಭ್ಯರ್ಥಿ ಇನ್ನು ಘೋಷಣೆ ಆಗಿಲ್ಲ.
ಏಪ್ರಿಲ್ 17ರ ಸೋಮವಾರದಂದು ಅಪಾರ ಬೆಂಲಿಗರೊಂದಿಗೆ ಮತ್ತೊಮ್ಮೆ ಅಧಿಕೃತವಾಗಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. 2018ರ ಚುನಾವಣೆಯಲ್ಲಿ ಬಿಜೆಪಿಯ ಎಸ್. ಎ. ರವೀಂದ್ರನಾಥ್ ವಿರುದ್ಧ ಸ್ಪರ್ಧಿಸಿದ್ದ ಮಲ್ಲಿಕಾರ್ಜುನ್ ಕೇವಲ ನಾಲ್ಕೂವರೆ ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದರು.
ಇಂದು ಒಳ್ಳೆಯ ದಿನ ಎಂಬ ಕಾರಣಕ್ಕೆ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ರ ಜೊತೆ ಆಗಮಿಸಿದ ಮಲ್ಲಿಕಾರ್ಜುನ್ ಅವರು ಉಮೇದುವಾರಿಕೆಸಲ್ಲಿಸುವ ಮೂಲಕ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈಗಾಗಲೇ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ವಾರ್ಡ್ ಗಳಿಗೆ ತೆರಳಿ ಮತಯಾಚಿಸುತ್ತಿರುವ ಮಲ್ಲಿಕಾರ್ಜುನ್ ಅವರು ಈ ಬಾರಿಯ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ಪತಿ ಗೆಲುವಿಗೆ ಪತ್ನಿ ಪ್ರಭಾ ಮಲ್ಲಿಕಾರ್ಜುನ್, ಪುತ್ರ ಸಮರ್ಥ್ ಶಾಮನೂರು ಸಹ ಪ್ರಚಾರ ನಡೆಸಿದ್ದು, ಮನೆ ಮನೆಗೆ ಭೇಟಿ ನೀಡಿ ಮತಯಾಚಿಸುತ್ತಿದ್ದಾರೆ. ಮತ್ತೊಂದೆಡೆ ಎಲ್ಲಾ ವಾರ್ಡ್ ಗಳ ಜನರನ್ನು ಸೇರಿಸಿ ಸಭೆ ನಡೆಸಿ ಅಭಿವೃದ್ಧಿಗೆ ಮತ್ತೊಮ್ಮೆ ಮತ ನೀಡಿ, ಮಲ್ಲಿಕಾರ್ಜುನ್ ಗೆಲ್ಲಿಸಿ ಎಂದು ಮತಯಾಚಿಸುತ್ತಿದ್ದಾರೆ.
ಲೋಕಿಕೆರೆ ನಾಗರಾಜ್ ಹೊಸಮುಖವಾಗಿದ್ದರೂ ಬಿಜೆಪಿ ಬಲಿಷ್ಠವಾಗಿರುವ ಕ್ಷೇತ್ರವಿದು. ಕ್ಷೇತ್ರ ಪುನರ್ವಿಂಗಡಣೆಯಾದ ಬಳಿಕ ಅಂದರೆ 2008ರಲ್ಲಿ ದಾವಣಗೆರೆ ಉತ್ತರ ಕ್ಷೇತ್ರ ಆಗಿತ್ತು. ಆಗ ಎಸ್. ಎ. ರವೀಂದ್ರನಾಥ್ ಕಣಕ್ಕಿಳಿದು ಜಯ ಗಳಿಸಿದ್ದರು. 2013ರಲ್ಲಿ ಮಲ್ಲಿಕಾರ್ಜುನ್ ಅವರು ಭಾರೀ ಅಂತರದಲ್ಲಿ ರವೀಂದ್ರನಾಥ್ ಅವರನ್ನು ಮಣಿಸಿದ್ದರು. 2018ರಲ್ಲಿ ಗೆಲ್ಲುವ ಅತ್ಯುತ್ಸಾಹ ಹೊಂದಿದ್ದರೂ ಮಲ್ಲಿಕಾರ್ಜುನ್ ಸೋಲು ಅನುಭವಿಸಿದ್ದರು. ಈ ಬಾರಿ ಗೆಲುವಿಗೆ ಕಸರತ್ತು ನಡೆಸುತ್ತಿರುವ ಮಲ್ಲಿಕಾರ್ಜುನ್ ಅವರು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಜೊತೆ ತೆರಳಿ ಮತ ಕೇಳುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಪೈಪೋಟಿ. ಉಳಿದ ಪಕ್ಷಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿವೆ.