Site icon Kannada News-suddikshana

BIG EXCLUSIVE: ಆರ್ ಎಸ್ಎಸ್ ಕಟ್ಟಾಳು, ಮಾಜಿ ಶಾಸಕ – ಪುತ್ರ ಸದ್ಯದಲ್ಲಿಯೇ ಕಾಂಗ್ರೆಸ್ ತೆಕ್ಕೆಗೆ? ದಾವಣಗೆರೆಯಲ್ಲಿ ಹಸ್ತ ಆಪರೇಷನ್ ಜೋರು..! ಬಿಜೆಪಿಗೆ ಆಗುತ್ತಾ ಮರ್ಮಾಘಾತ…?

SUDDIKSHANA KANNADA NEWS/DAVANAGERE/DATE:12-04-2024

ದಾವಣಗೆರೆ (Davanagere): ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲಲು ಬಿಜೆಪಿ ಹಾಗೂ ಕಾಂಗ್ರೆಸ್ ರಣಕಹಳೆ ಮೊಳಗಿಸಿವೆ. ಎರಡೂ ಪಕ್ಷಗಳ ಮುಖಂಡರ ಸೆಳೆಯಲು ತಂತ್ರಗಾರಿಕೆ ರೂಪಿಸಲಾಗಿದೆ. ಈ ಬೆಳವಣಿಗೆ ನಡುವೆ ಬಿಜೆಪಿಗೆ ಆಘಾತ ನೀಡಲು ಕಾಂಗ್ರೆಸ್ ರಣತಂತ್ರ ಹೆಣೆದಿದೆ.

ಈ ಸುದ್ದಿಯನ್ನೂ ಓದಿ: BIG NEWS: ಕೈಕೊಟ್ಟು ಕಮಲ ಮುಡಿದ ಶಿವನಹಳ್ಳಿ ರಮೇಶ್ ಹೇಳಿದ್ದೇನು..? ಬಿಜೆಪಿ ಸೇರಲು ಕೊಟ್ಟ ಕಾರಣವೇನು… ಎಸ್. ಎಸ್. ಮಲ್ಲಿಕಾರ್ಜುನ್ ಪ್ರತಿಕ್ರಿಯೆ ಏನು?

ಈಗಾಗಲೇ ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಹಳ್ಳಿ ರಮೇಶ್ ಕೈಕೊಟ್ಟು ಬಿಜೆಪಿ ಸೇರಿದ್ದರೆ, ಮಾಯಕೊಂಡ ಬಿಜೆಪಿ ಮುಖಂಡ ವಾಗೀಶ್ ಸ್ವಾಮಿ ಕಾಂಗ್ರೆಸ್ ಸೇರಿದ್ದಾರೆ. ಆಪರೇಷನ್ ಕಮಲ, ಆಪರೇಷನ್ ಹಸ್ತ ಜೋರಾಗಿದ್ದು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ತೋಟಗಾರಿಕೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಬಿಜೆಪಿಗೆ ಮರ್ಮಾಘಾತ ನೀಡಲು ಸ್ಕೆಚ್ ಹಾಕಿದ್ದಾರೆ.

ಸದ್ಯದಲ್ಲಿಯೇ ಆರ್ ಎಸ್ ಎಸ್ ಕಟ್ಟಾಳು, ಕುಟುಂಬವೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ತೊಡಗಿದ್ದ ರಾಜಕೀಯ ಕುಟುಂಬದವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವುದು ಬಹುತೇಕ ಖಚಿತವಾಗಿದೆ. ಇದಕ್ಕೆ ಕಾರಣ ಸಂಸದ ಡಾ. ಜಿ. ಎಂ. ಸಿದ್ದೇಶ್ವರರ ವಿರುದ್ಧ ಮುನಿಸಿಕೊಂಡಿದ್ದವರು.

ಯಾರು ಗೊತ್ತಾ…?

ಗಾಯತ್ರಿ ಸಿದ್ದೇಶ್ವರ ಅವರಿಗೆ ಬಿಜೆಪಿ ಟಿಕೆಟ್ ನೀಡಿದ ಬಳಿಕ ದಾವಣಗೆರೆಯಲ್ಲಿ ಭಿನ್ನಮತೀಯರ ಗುಂಪು ರೊಚ್ಚಿಗೆದ್ದಿತ್ತು. ಮಾಜಿ ಸಚಿವರಾದ ಎಸ್. ಎ. ರವೀಂದ್ರನಾಥ್, ಎಂ. ಪಿ. ರೇಣುಕಾಚಾರ್ಯ, ಲೋಕಿಕೆರೆ ನಾಗರಾಜ್, ಅಜಯ್ ಕುಮಾರ್,
ಬಸವರಾಜ್ ನಾಯ್ಕ್, ದೂಡಾ ಮಾಜಿ ಅಧ್ಯಕ್ಷ ಕೆ. ಎಂ. ಸುರೇಶ್ ಸೇರಿದಂತೆ ಹನ್ನೊಂದು ಮಂದಿಯ ಲಗಾನ್ ಟೀಂ ಸಭೆ ಮೇಲೆ ಸಭೆ ನಡೆಸಿ ಕೊನೆಗೆ ಹೈಕಮಾಂಡ್ ಸಂಧಾನಕ್ಕೆ ಮಣಿದಿತ್ತು.

ಆದ್ರೆ, ಈಗ ಆರ್ ಎಸ್ ಎಸ್ ಅನ್ನೇ ಸರ್ವಸ್ವ, ಉಸಿರು ಎಂದುಕೊಂಡಿದ್ದ ಜಗಳೂರಿನ ಮಾಜಿ ಶಾಸಕ ಗುರುಸಿದ್ದನಗೌಡರು, ಅವರ ಪುತ್ರ, ಆರೈಕೆ ಆಸ್ಪತ್ರೆಯ ಮುಖ್ಯಸ್ಥರೂ ಆದ ಡಾ. ಟಿ. ಜಿ. ರವಿಕುಮಾರ್ ಅವರು ಸದ್ಯದಲ್ಲಿಯೇ ಕಾಂಗ್ರೆಸ್
ಸೇರ್ಪಡೆಯಾಗಲಿದ್ದಾರೆ ಎಂದು ಕೆಪಿಸಿಸಿ ಮೂಲಗಳು ಖಚಿತಪಡಿಸಿವೆ. ಮಾತ್ರವಲ್ಲ, ಈಗಾಗಲೇ ಎರಡು ಸುತ್ತಿಮ ಮಾತುಕತೆ ನಡೆದಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ ಇನ್ನು ಎರಡು ಅಥವಾ ಮೂರು ದಿನಗಳಲ್ಲಿ ಅಧಿಕೃತವಾಗಿ ಗುರುಸಿದ್ದನಗೌಡರು, ರವಿಕುಮಾರ್ ಅವರು ಸಾವಿರಾರು ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ಖಚಿತವಾದ ಮಾಹಿತಿ ಸಿಕ್ಕಿದೆ.

ಬಿಜೆಪಿ ಕಟ್ಟಿ ಬೆಳೆಸಿದ ಧುರೀಣ:

ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಡಾ. ರವಿಕುಮಾರ್ ಅವರು ಟಿಕೆಟ್ ಪಡೆಯಲು ಸಾಕಷ್ಟು ಪ್ರಯತ್ನ ಪಟ್ಟಿದ್ದರು. ಮಾತ್ರವಲ್ಲ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಗಳೂರಿನಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಹೆಚ್. ಪಿ. ರಾಜೇಶ್ ಪರ ಗುರುಸಿದ್ದನಗೌಡರು ಹಾಗೂ ಡಾ. ರವಿಕುಮಾರ್ ಅವರು ಪ್ರಚಾರ ನಡೆಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಮಾತ್ರವಲ್ಲ, ಎಸ್. ವಿ. ರಾಮಚಂದ್ರಪ್ಪ ಅವರು ಬಹಿರಂಗವಾಗಿಯೇ ನನ್ನ ಸೋಲಿಗೆ ಗುರುಸಿದ್ದನಗೌಡರು ಹಾಗೂ ರವಿಕುಮಾರ್ ಕಾರಣ ಎಂದು ಆರೋಪಿಸಿದ್ದರು. ಬಿಜೆಪಿ ಪಕ್ಷದಿಂದ ಗುರುಸಿದ್ದನಗೌಡರನ್ನು ಉಚ್ಚಾಟಿಸಿತ್ತು. ಆ ಬಳಿಕ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು.

ರಾಷ್ಟ್ರಪ್ರೇಮದ ಫ್ಯಾಮಿಲಿ:

ಇನ್ನು ಡಾ. ರವಿಕುಮಾರ್ ಅವರ ಕುಟುಂಬಕ್ಕೆ ರಾಜಕೀಯವೇನೂ ಹೊಸತಲ್ಲ. ಜಿ.ಎಸ್. ಸಿದ್ದನಗೌಡ ಪಾಟೀಲ್ ಗಡಿಗುಡಾಳ್ ಅವರದ್ದು ದೊಡ್ಡ ಹೆಸರು. ಇಡೀ ಕುಟುಂಬವೇ ರಾಷ್ಟ್ರಪ್ರೇಮದ ಜಾಗೃತಿ ಮೂಡಿಸಿಕೊಂಡಿತ್ತು.

ಆರ್ ಎಸ್ ಎಸ್ ಕಟ್ಟಾಳು: 

ಹರಪನಹಳ್ಳಿಯ ಗಡಿಗುಡಾಳ್ ಸಿದ್ದನಗೌಡರು, ಎಂಎ, ಎಲ್‌ಎಲ್‌ಬಿ ಪದವಿಧರರು. ಸದಾ ಪರಿಶ್ರಮಶೀಲ ವ್ಯಕ್ತಿತ್ವ. ಕರ್ನಾಟಕದ ನಾಲ್ಕನೇ ಪ್ರಾಂತ ಸಂಘಚಾಲಕರಾಗಿ 1992ರಲ್ಲಿ ಜವಾಬ್ದಾರಿ ಸ್ವೀಕರಿಸಿ, 1996ರವರೆಗೂ ಜವಾಬ್ದಾರಿ ನಿರ್ವಹಿಸಿದರು. ನಂತರ 1996ರಲ್ಲಿ ಕರ್ನಾಟಕ ಉತ್ತರ ಮತ್ತು ಕರ್ನಾಟಕ ದಕ್ಷಿಣ ಪ್ರಾಂತಗಳ ಪ್ರತ್ಯೇಕ ರಚನೆ ಆದಾಗ ಕರ್ನಾಟಕ ಉತ್ತರ ಪ್ರಾಂತದ ಸಂಘಚಾಲಕರಾಗಿ ಜವಾಬ್ದಾರಿ ಸ್ವೀಕರಿಸಿದರು. ಒಟ್ಟು 12 ವರ್ಷ ಪ್ರಾಂತ ಸಂಘಚಾಲಕರಾಗಿದ್ದ ಸಿದ್ದನಗೌಡರು 2004ರ ತನಕ ಜವಾಬ್ದಾರಿ ನಿರ್ವಹಿಸಿದ್ದರು. ಭಾರತೀಯ ಕಿಸಾನ್ ಸಂಘದ ಕರ್ನಾಟಕ ರಾಜ್ಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ದಾವಣಗೆರೆ ವಾಜಪೇಯಿ ಎಂಬ ಬಿರುದು: 

ಗುರುಸಿದ್ದನಗೌಡರು ಬಿಎಸ್ಸಿ ಅಗ್ರಿ ಓದಿದವರು. ದಾವಣಗೆರೆಯ ವಾಜಪೇಯಿ ಎಂದೇ ಹೆಸರಾಗಿದ್ದು, ಮೂರು ಬಾರಿ ಚಿತ್ರದುರ್ಗ-ದಾವಣಗೆರೆ ಜಂಟಿ ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದರು. 2004ರಿಂದ 2007ರವರೆಗೆ ಜಗಳೂರು ಕ್ಷೇತ್ರದ ಶಾಸಕರಾಗಿದ್ದರು. 1955ರಿಂದಲೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಸಕ್ರಿಯ ಕಾರ್ಯಕರ್ತರು. ಎಮರ್ಜೆನ್ಸಿ ಕಾಲದಲ್ಲಿ 5 ತಿಂಗಳು ಜೈಲುವಾಸ ಅನುಭವಿಸಿದ್ದರು. ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ, ಪಕ್ಷವನ್ನು ತಳಮಟ್ಟದಿಂದ ಕಟ್ಟಿ ಬೆಳೆಸಿದ್ದಾರೆ.

ಬಿಜೆಪಿಗೆ ಆಗುತ್ತಾ ಮರ್ಮಾಘಾತ…?

ಆದ್ರೆ, ಈಗ ಬಿಜೆಪಿಯಲ್ಲಿ ಬೆಳವಣಿಗೆ, ಸಿದ್ದೇಶ್ವರರ ವಿರುದ್ಧ ಮುನಿಸಿಕೊಂಡಿರುವ ಗುರುಸಿದ್ದನಗೌಡರು ಹಾಗೂ ರವಿಕುಮಾರ್ ಅವರು, ಜಗಳೂರು ಮಾತ್ರವಲ್ಲದೇ, ಜಿಲ್ಲೆಯ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರೊಂದಿಗೆ ಕಾಂಗ್ರೆಸ್ ಸೇರ್ಪಡೆಯಾಗುವುದು ಬಹುತೇಕ ಕನ್ಫರ್ಮ್. ಈ ಮೂಲಕ ಬಿಜೆಪಿಗೆ ಮರ್ಮಾಘಾತ ನೀಡಲು ಎಸ್. ಎಸ್. ಮಲ್ಲಿಕಾರ್ಜುನ್ ಸಿದ್ಧತೆ ನಡೆಸಿದ್ದಾರೆ.

ರಾಜ್ಯ ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಸದಸ್ಯರಾದ ಡಾ. ಟಿ.ಜಿ. ರವಿಕುಮಾರ್ ಅವರು, ಜಗಳೂರು ಕ್ಷೇತ್ರದ ಯಶಸ್ವಿ, ಜನಪ್ರಿಯ, ಜನಾನುರಾಗಿ ಶಾಸಕರೆಂದೇ ಹೆಸರಾಗಿರುವ ಗುರುಸಿದ್ದನಗೌಡರ ಹಿರಿಯ ಪುತ್ರ. ಮಾಜಿ ಶಾಸಕನ ಪುತ್ರ ಎಂಬ ಹಮ್ಮು ಬಿಮ್ಮು ಇಲ್ಲದೆಯೇ, ಕೇವಲ ತಮ್ಮ ತಂದೆಯ ಜ್ಞಾನ, ಅನುಭವವನ್ನಷ್ಟೇ ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ಡಾ. ರವಿಕುಮಾರ್ ಅವರ ಹೆಗ್ಗಳಿಕೆಗಳಲ್ಲಿ ಒಂದಾಗಿತ್ತು.

ರಾಷ್ಟ್ರಪ್ರೇಮಿಗಳಾದ ದಿ. ಜಿ. ಎಸ್. ಸಿದ್ದಣ್ಣಗೌಡ ಜಿ, ದಿ. ಬಲರಾಮ್ ಶೆಟ್ಟಿ ಜಿ, ದಿ. ರುದ್ರಯ್ಯ ಜಿ ಅವರ ನೇತೃತ್ವದ ಶಾಖೆಯು ನಡೆಯುತಿತ್ತು. 1984ರಲ್ಲಿ ದಾವಣಗೆರೆಯಲ್ಲಿ ನಡೆದ ಐಟಿಸಿ ಕ್ಯಾಂಪ್‌ನಲ್ಲಿ ಭಾಗವಹಿಸಿದ್ದರು. ರವಿಕುಮಾರ್ ಅವರು ಸಹ ಆರ್ ಎಸ್ ಎಸ್ ಹಾಗೂ ಎಬಿವಿಪಿಯಲ್ಲಿ ಕೆಲಸ ಮಾಡಿದವರೇ. ಜಗಳೂರು ತಾಲೂಕು ಎಬಿವಿಪಿ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ (1987-89) ಜವಾಬ್ದಾರಿ, ಕರ್ತವ್ಯ ನಿಭಾಯಿಸಿದ್ದಾರೆ. ಇದೇ ಅವಧಿಯಲ್ಲಿ ವಿವೇಕಾನಂದ ಜಯಂತಿ, ಪರೀಕ್ಷಾ ಪೇ ಚರ್ಚಾದಂತಹ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ.

1990ರ ಅಯೋಧ್ಯ ರಾಮ ಮಂದಿರ ಅಭಿಯಾನದಲ್ಲಿ ಸಕ್ರಿಯವಾಗಿ ಗುರುಸಿದ್ದನಗೌಡರು ಹಾಗೂ ರವಿಕುಮಾರ್ ಭಾಗವಹಿಸಿದ್ದರು. ಈಗ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾಗಲು ನಿರ್ಧರಿಸಿರುವ ಆರ್ ಎಸ್ ಎಸ್ ಕಟ್ಟಾಳು ಕುಟುಂಬದ ಈ ನಿರ್ಧಾರಕ್ಕೆ ಸಿದ್ದೇಶ್ವರರ ಮೇಲಿನ ಸಿಟ್ಟೇ ಕಾರಣ ಎನ್ನಲಾಗಿದೆ.

ಜಗಳೂರು ಭಾಗದಲ್ಲಿ ತನ್ನದೇ ಮತ ಬ್ಯಾಂಕ್ ಹೊಂದಿರುವ ಗುರುಸಿದ್ದನಗೌಡರು, ರವಿಕುಮಾರ್ ಅವರು ಕ್ಷೇತ್ರಾದ್ಯಂತವೂ ಓಡಾಡಿದ್ದಾರೆ. ಬಿಜೆಪಿಗೆ ಈ ಮೂಲಕ ಠಕ್ಕರ್ ಕೊಡಲು ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಎಲ್ಲಾ ರೀತಿಯಲ್ಲಿಯೂ ರಣತಂತ್ರ ರೂಪಿಸಿದ್ದು, ಆರ್ ಎಸ್ ಎಸ್ ನ ಅನೇಕ ಕಾರ್ಯಕರ್ತರೂ ಈ ಬಾರಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಪಕ್ಕಾ ಮಾಹಿತಿ ಲಭಿಸಿದೆ. ಒಟ್ಟಿನಲ್ಲಿ ಈ ಬಾರಿ ಬಿಜೆಪಿ ಸೋಲಿಸಲು ಫೀಲ್ಡ್ ಗೆ ಇಳಿದಿರುವ ಮಲ್ಲಿಕಾರ್ಜುನ್ ಅವರು ರಣತಂತ್ರ ಹೆಣೆಯುತ್ತಿದ್ದು, ಯಾರೆಲ್ಲಾ ಕಾಂಗ್ರೆಸ್ ಹೋಗ್ತಾರೆ ಎಂಬ ಲೆಕ್ಕಾಚಾರವೂ ಶುರುವಾಗಿದೆ.

Exit mobile version