Site icon Kannada News-suddikshana

ಹಾನಗಲ್ ನಲ್ಲಿ ಸಾಮೂಹಿಕ ಅತ್ಯಾಚಾರ ಆರೋಪ ಹೊತ್ತ ಆರೋಪಿಗಳ ರೋಡ್ ಶೋ: ಕೇಸರಿ ಪಡೆ ನಿಗಿನಿಗಿ!

SUDDIKSHANA KANNADA NEWS/ DAVANAGERE/ DATE-23-05-2025

ದಾವಣಗೆರೆ: ಹಾವೇರಿಯ ಹಾನಗಲ್ ನಲ್ಲಿ ಸಾಮೂಹಿಕ ಅತ್ಯಾಚಾರದ ಆರೋಪ ಹೊತ್ತ ಕ್ರಿಮಿನಲ್ ಹಿನ್ನೆಲೆಯ ದುರುಳರು ನ್ಯಾಯಾಲಯದಿಂದ ಜಾಮೀನಿನ ಮೇಲೆ ಬಿಡುಗಡೆಯಾದ ಸಂದರ್ಭವನ್ನು ರೋಡ್ ಶೋ ಮೂಲಕ ಸಂಭ್ರಮಿಸಿರುವುದು ಹಾಗೂ ಇದಕ್ಕೆ ಅವಕಾಶ ಮಾಡಿಕೊಟ್ಟಿರುವ ಕಾನೂನು ಸುವ್ಯವಸ್ಥೆಯ ಸ್ಥಿತಿಯನ್ನು ಗಮನಿಸಿದರೆ ಈ ರಾಜ್ಯದಲ್ಲಿ ಸಭ್ಯ ನಾಗರೀಕ ಸಮಾಜ ಮರೆಯಾಗುತ್ತಿರುವ ಆತಂಕ ಉಂಟಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಅಪರಾಧ ಎಸಗುವುದು ವಿಜಯದ ಸಂಕೇತ’ ಎಂಬಂತೆ ವರ್ತಿಸಿರುವ ರಕ್ಕಸೀ ಮನಸ್ಥಿತಿಯ ಈ ದುಷ್ಟರ ಅತಿರೇಕದ ವರ್ತನೆಯನ್ನು ಹತ್ತಿಕ್ಕುವಲ್ಲಿ ವಿಫಲವಾಗಿರುವ ಕಾಂಗ್ರೆಸ್ ಸರ್ಕಾರದ ವ್ಯವಸ್ಥೆಯಲ್ಲಿ ಮಾನವಂತ ಹೆಣ್ಣು ಮಕ್ಕಳಿಗೆ, ಸಭ್ಯ ನಾಗರಿಕರಿಗೆ ರಕ್ಷಣೆ ಎನ್ನುವುದು ಮರೀಚಿಕೆ ಎಂಬುದನ್ನು ಸಂಕೇತಿಸಿದೆ. ಸುಸಂಸ್ಕೃತ ನಾಗರೀಕ ಸಮಾಜ ಭಯದಲ್ಲಿ ಬದುಕುವ ದುಸ್ಥಿತಿಗೆ ರಾಜ್ಯದ ಆಡಳಿತ ವ್ಯವಸ್ಥೆ ಸಾಗಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಕಿಡಿಕಾರಿದ್ದಾರೆ.

ಜಾಮೀನು ದೊರೆತದ್ದೇ ತಾವು ಆರೋಪದಿಂದ ಖುಲಾಸೆ ಆಗಿರುವಂತೆ ವರ್ತಿಸಿರುವ 7 ಪ್ರಮುಖ ಆರೋಪಿಗಳ ಅಟ್ಟಹಾಸ ನ್ಯಾಯಾಂಗ ವ್ಯವಸ್ಥೆಯನ್ನು ನಾಚಿಸುವಂತೆ ಹಾಗೂ ಕಾನೂನು ಸುವ್ಯವಸ್ಥೆಯನ್ನು ಅವಮಾನಿಸುವ ದೃಶ್ಯವನ್ನು ಕಂಡು ರಾಜ್ಯದ ಜನತೆ ಆತಂಕಿತರಾಗಿದ್ದಾರೆ. ಈ ರಾಜ್ಯದಲ್ಲಿ ಸರ್ಕಾರವೆಂಬುದೊಂದಿದೆ, ಅದರಲ್ಲಿ ಕಾನೂನು ಸುವ್ಯವಸ್ಥೆ ಇದೆ, ಪೋಲಿ ಪುಂಡರ ಕಪಿಮುಷ್ಠಿಯಲ್ಲಿ ಸಮಾಜವನ್ನು ಸಿಲುಕಿಸಿಲ್ಲ ಎಂಬ ಸಂದೇಶ ರವಾನಿಸುವ ಕನಿಷ್ಠ ಕಾಳಜಿ ಇದ್ದರೆ ಈ ಕೂಡಲೇ ರಾಜ್ಯ ಸರ್ಕಾರ ಸದರಿ ಪ್ರಕರಣದಲ್ಲಿ ಕಠಿಣ ಕ್ರಮ ಜರುಗಿಸಲಿ ಎಂದು ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.

Exit mobile version