Home ದಾವಣಗೆರೆ ದಶಕಗಳ ಭೂ ವಿವಾದಗಳಿಗೆ ಇತಿಶ್ರೀ, ಕಂದಾಯ ಇಲಾಖೆಯಿಂದ ಕ್ರಾಂತಿಕಾರಿ ‘ನನ್ನ ಭೂಮಿ’ ಅಭಿಯಾನ: ಕೃಷ್ಣ ಬೈರೇಗೌಡ ಘೋಷಣೆ
ದಾವಣಗೆರೆನವದೆಹಲಿಬೆಂಗಳೂರು

ದಶಕಗಳ ಭೂ ವಿವಾದಗಳಿಗೆ ಇತಿಶ್ರೀ, ಕಂದಾಯ ಇಲಾಖೆಯಿಂದ ಕ್ರಾಂತಿಕಾರಿ ‘ನನ್ನ ಭೂಮಿ’ ಅಭಿಯಾನ: ಕೃಷ್ಣ ಬೈರೇಗೌಡ ಘೋಷಣೆ

Share
ಕೃಷ್ಣ ಬೈರೇಗೌಡ
Share

ದಾವಣಗೆರೆ: ರೈತರು ಮತ್ತು ಸಾರ್ವಜನಿಕರು ಕಂದಾಯ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಿ, ಸೇವೆಗಳನ್ನು ಅವರ ಮನೆ ಬಾಗಿಲಿಗೇ ತಲುಪಿಸಲು ಕಂದಾಯ ಇಲಾಖೆ ‘ನನ್ನ ಭೂಮಿ’ ಸೇರಿದಂತೆ ಹಲವು ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ದಾವಣಗೆರೆಯಲ್ಲಿ ಕಂದಾಯ ಇಲಾಖೆ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲಾಖೆಯಲ್ಲಿ ಆಗಿರುವ ಪ್ರಮುಖ ಸುಧಾರಣೆಗಳನ್ನು ಹಂಚಿಕೊಂಡರು.

ಪೋಡಿ ಮುಕ್ತ ಅಭಿಯಾನ

‘ನನ್ನ ಭೂಮಿ’ ಮತ್ತು ಪೋಡಿ ಮುಕ್ತ ಅಭಿಯಾನದಡಿ ಕಳೆದ ಒಂದು ವರ್ಷದಲ್ಲಿ ರಾಜ್ಯಾದ್ಯಂತ 1,89,300 ರೈತರ ಜಮೀನುಗಳ ಪೋಡಿ ದುರಸ್ತನ್ನು ಮಾಡಿಕೊಡಲಾಗಿದೆ. ಮುಂದಿನ 3-4 ತಿಂಗಳಲ್ಲಿ ಈ ಸಂಖ್ಯೆಯನ್ನು 2.5 ರಿಂದ 3 ಲಕ್ಷಕ್ಕೆ ಹೆಚ್ಚಿಸುವ ಗುರಿ ಇದೆ. ಜಿಲ್ಲೆಯಲ್ಲಿ ಮೃತಪಟ್ಟವರ ಹೆಸರಿನಲ್ಲಿದ್ದ ಸುಮಾರು 90,000 ಜಮೀನುಗಳ ಪೈಕಿ, ಮಾರ್ಚ್ ಅಂತ್ಯದೊಳಗೆ ಕನಿಷ್ಠ 50% ರಷ್ಟು ಪೌತಿ ಖಾತೆ ಆಂದೋಲನ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ, ಇದಕ್ಕಾಗಿ ರೈತರು ಅರ್ಜಿ ಹಾಕುವಂತಿಲ್ಲ, ಅಧಿಕಾರಿಗಳೇ ರೈತರ ಮನೆ ಬಾಗಿಲಿಗೆ ಹೋಗಿ ಕನಿಷ್ಠ ದಾಖಲಾತಿಗಳನ್ನು ಪಡೆದು ಪೋಡಿ ಖಾತೆ ದುರಸ್ತನ್ನು ಮಾಡಿಕೊಡಲಾಗುತ್ತಿದೆ ಎಂದು
ಹೇಳಿದರು.

ಈ ಹಿಂದೆ 2013 ರಿಂದ 2018 ರವರೆಗೆ 5840 ಪ್ರಕರಣಗಳು ಹಾಗೂ 2018 ರಿಂದ 2022 ರವರೆಗೆ 8500 ಪ್ರಕರಣ ಪೋಡಿ ಖಾತೆ ದುರಸ್ತನ್ನು ಮಾಡಲಾಗಿದೆ, ನನ್ನ ಅವಧಿಯಲ್ಲಿ ಕೇವಲ ಒಂದೇ ವರ್ಷದಲ್ಲಿ 1,89,300 ರೈತರ ಜಮೀನುಗಳ ಪೆÇೀಡಿ ದುರಸ್ತನ್ನು ಮಾಡಲಾಗಿದೆ ಎಂದು ತಿಳಿಸಿದರು.

ತಾಂಡಾ, ಹಟ್ಟಿ ಮತ್ತು ಆಡಿಗಳ ನಿವಾಸಿಗಳು ಸೇರಿದಂತೆ ಕೆಲವು ವಸತಿ ಪ್ರದೇಶಗಳಲ್ಲಿ ಜನರ ಬಳಿ ದಾಖಲೆಗಳು ಇಲ್ಲದೆ ವಾಸಿಸುತ್ತಿದ್ದರು, ಅವುಗಳನ್ನು ಗುರುತಿಸಿ ಹೊಸ ಕಂದಾಯ ಗ್ರಾಮಗಳೆಂದು ಘೋಷಿಸಿ ಅವರಿಗೆಲ್ಲ ಹಕ್ಕುಪತ್ರ ನೀಡಲಾಗುತ್ತಿದೆ. ಕಳೆದ ಎರಡೂವರೆ ವರ್ಷಗಳಲ್ಲಿ ಒಟ್ಟು 2,70,000 ಹಕ್ಕು ಪತ್ರಗಳನ್ನು ಸಿದ್ಧಪಡಿಸಲಾಗಿದೆ. ಹೊಸಪೇಟೆಯಲ್ಲಿ ಸುಮಾರು 1,11,000 ಕಂದಾಯ ಗ್ರಾಮಗಳ ಹಕ್ಕು ಪತ್ರಗಳನ್ನು ವಿತರಿಸಲಾಗಿತ್ತು. ಫೆಬ್ರವರಿ 14 ರಂದು ಹಾವೇರಿಯಲ್ಲಿ ಸುಮಾರು 1,10,000 ಹಕ್ಕುಪತ್ರಗಳನ್ನು ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ 49 ಲಕ್ಷ ಜಮೀನುಗಳು ಮೃತರ ಹೆಸರಿನಲ್ಲಿವೆ, ಅವುಗಳನ್ನು ಗುರುತಿಸಿ ವಾರಸುದಾರ ಖಾತೆಗೆ ವರ್ಗಾವಣೆ ಮಾಡಲು ಕ್ರಮವಹಿಸಲಾಗಿದೆ, ಅದರಲ್ಲಿ 11 ಲಕ್ಷ ಜಮೀನನ್ನು ಇ-ಪೌತಿ ಅಭಿಯಾನದಡಿ ವಾರಸುದಾರರ ಹೆಸರಿಗೆ ಖಾತೆ ಮಾಡಲು ಕ್ರಮವಹಿಸಲಾಗಿದೆ ಎಂದರು.

ದಾವಣಗೆರೆ ಜಿಲ್ಲೆಯ ‘ಪೋಡಿ’ ಪ್ರಕರಣಗಳಂತಹ ದೀರ್ಘಕಾಲದ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. 1960 ಮತ್ತು 70 ರ ದಶಕದಿಂದ ಬಾಕಿ ಇರುವ 8,000 ಪೋಡಿ ಪ್ರಕರಣಗಳಲ್ಲಿ ಈಗಾಗಲೇ 4,300 ಪೂರ್ಣಗೊಂಡಿದ್ದು, ಉಳಿದ ಪ್ರಕರಣಗಳನ್ನು ಮುಂದಿನ ಎರಡು ತಿಂಗಳಲ್ಲಿ ಮುಗಿಸಲು ಗುರಿ ಹೊಂದಲಾಗಿದೆ. ಭೂಮಿಗೆ ಸಂಬಂಧಿಸಿದ ಗೊಂದಲಗಳನ್ನು ನಿವಾರಿಸಿ ಜನರಿಗೆ ಭೂ ಗ್ಯಾರಂಟಿ ನೀಡಲು ಸರ್ಕಾರ ಶ್ರಮಿಸುತ್ತಿದೆ, ಇಲಾಖೆಯಲ್ಲಿ ಇನ್ನೂ ಮಾಡಬೇಕಾದ ಕೆಲಸಗಳು ಸಾಕಷ್ಟಿದ್ದು, ಆದ್ಯತೆಯ ಮೇರೆಗೆ ಅವುಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುತ್ತಿದೆ ಎಂದು ತಿಳಿಸಿದರು.

Share

Leave a comment

Leave a Reply

Your email address will not be published. Required fields are marked *