Site icon Kannada News-suddikshana

ನಮ್ಮನ್ನು ನಾವೇ ಅರಿತುಕೊಂಡರೆ ಸಮಾಜದಲ್ಲಿ ದ್ವೇಷ ಭಾವನೆ ಮೂಡುವುದಿಲ್ಲ: ಒಡಿಯೂರು ಶ್ರೀ ಅಭಿಮತ

SUDDIKSHANA KANNADA NEWS/ DAVANAGERE/ DATE:12-02-2024

ಉಡುಪಿ: ಬದುಕು ಚಲನಶೀಲವಾಗಬೇಕಾದರೆ ಸಂಸ್ಕಾರ ಅಗತ್ಯ. ಸಂಸ್ಕಾರವಿಲ್ಲದ ಬದುಕು, ಬದುಕಲ್ಲ. ಮೊದಲು ನಮ್ಮನ್ನು ನಾವೇ ಅರಿತಿರಬೇಕು. ನಮ್ಮನ್ನು ನಾವೇ ಅರಿತುಕೊಂಡರೆ, ಸಮಾಜದಲ್ಲಿ ದ್ವೇಷ ಭಾವನೆಯಿಲ್ಲ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಉಡುಪಿ ಜಿಲ್ಲೆಯ ಬೆಳ್ಮಣ್ಮವಿನ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಸೇವಾ ಟ್ರಸ್ಟ್ ಸಚ್ಚೇರಿಪೇಟೆ ವತಿಯಿಂದ ಸಚ್ಚೇರಿಪೇಟೆಯ ಶ್ರೀ ಮಹಮ್ಮಾಯೀ ಅಮ್ಮನವರ ಅಶ್ವತ್ಥಕಟ್ಟೆಯಲ್ಲಿ ನಡೆದ 20ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಮಹೋತ್ಸವದ ಧಾರ್ಮಿಕ ಸಭೆ – ಸಂತ ಸಮಾಗಮ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು.

ಮೂಡಬಿದ್ರೆ ಜೈನ ಮಠದ ಸ್ವಸ್ತಿ ಶ್ರೀ ಭಾರತಭೂಷಣ ಚಾರುಕೀರ್ತಿ ಭಟ್ಟಾರಕ ಪಂಡಿತಾಚರ್ಯವರ್ಯ ಮಹಾಸ್ವಾಮೀಜಿ, ಶ್ರೀ ಧಾಮ ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ ಸ್ವಾಮೀಜಿ, ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹಾಗೂ ಜಂಗಮಮಠದ ಶ್ರೀ ಮ.ನಿ.ಪ್ರ. ರುದ್ರಮುನಿ ಮಹಾಸ್ವಾಮೀಗಳವರು ಮಾತನಾಡಿ, ಹಿಂದೂ ಸಮಾಜದ ಧರ್ಮ ಜಾಗೃತಿಗಾಗಿ ಈ ರೀತಿಯ ಸಂತ ಸಮಾವೇಶದ ಅಗತ್ಯತೆ ಇದೆ ಎಂದು ಕರೆ ನೀಡಿದರು. ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು.

ಕಿನ್ನಿಗೋಳಿ ಯುಗಪುರುಷದ ಪ್ರಧಾನ ಸಂಪಾದಕ ಶ್ರೀ ಭುವನಾಭಿರಾಮ ಉಡುಪ ಅಧ್ಯಕ್ಷತೆ ವಹಿಸಿದ್ದರು. ಕೀರ್ತಿಶೇಷ ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರ ಪೂರ್ವಾಶ್ರಮದ ಸಹೋದರ ಶ್ರೀ ಲಾತವ್ಯ ಆಚಾರ್ಯ ಶುಭಾಶಂಸನೆಗೈದರು.

ಈ ಸಂದರ್ಭದಲ್ಲಿ ವರ್ಷಂಪ್ರತಿ ಕಾರ್ಯಕ್ರಮಕ್ಕೆ ಸಹಕರಿಸುವ ಬಾಲಕೃಷ್ಣ ಶೆಟ್ಟಿ ಪಾಲಿಂಗೇರಿ, ಅರುಣ್ ಭಂಡಾರಿ ಸಚ್ಚೇರಿಪೇಟೆ, ಸೇವಾಭಾರತಿ ಭಜನಾ ತಂಡದ ತರಬೇತುದಾರ ಶ್ರೀನಿವಾಸ ಪೂಜಾರಿ ಎರ್ಲಪಾಡಿ ಹಾಗೂ ಜಿಲ್ಲಾ ಪ್ರಶಸ್ತಿ ಪುರಸ್ಕೃತೆ ಸಚ್ಚೇರಿಪೇಟೆಯ ಅಂಗನವಾಡಿ ಕಾರ್ಯಕರ್ತೆ ಶಶಿಕಲಾ ಭಂಡಾರಿ ಇವರನ್ನು ಸನ್ಮಾನಿಸಲಾಯಿತು.

ಹಿಂದೂ ಜಾಗರಣ ವೇದಿಕೆಯ ಪ್ರಾಂತ್ಯ ಕಾರ್ಯಕಾರಿಣಿ ಸದಸ್ಯ ಮಹೇಶ್ ಶೆಣೈ ಬೈಲೂರು, ಉದ್ಯಮಿ ಭೋಜ ಸುವರ್ಣ ಸೂರತ್, ಉದ್ಯಮಿ ರವೀಂದ್ರ ಡಿ. ಪೂಂಜಾ, ಸಚ್ಚೇರಿಪೇಟೆ ಲಕ್ಷ್ಮೀ ವೆಂಕಟೇಶ ಭಜನಾ ಮಂದಿರದ ಅಧ್ಯಕ್ಷ ರಾಮಚಂದ್ರ ನಾಯಕ್, ಸಂಘಟಕ ಜಿತೇಂದ್ರ ಪೇರೂರು ಉಪಸ್ಥಿತರಿದ್ದರು.

ಭವಿಷ್ ಪ್ರಾರ್ಥಿಸಿ, ಸತೀಶ್ ಹೊಸ್ಮಾರ್ ಹಾಗೂ ಶಿಕ್ಷಕ ಸುಧೀರ್ ನಾಯಕ್ ನಿರೂಪಿಸಿದರು. ಹರೀಶ್ ಸಚ್ಚೇರಿಪೇಟೆ ಸ್ವಾಗತಿಸಿ, ವಂದಿಸಿದರು.

Exit mobile version