SUDDIKSHANA KANNADA NEWS/DAVANAGERE/DATE:23_12_2025
ದಾವಣಗೆರೆ: ದಾವಣಗೆರೆಯ ಕಾಂಗ್ರೆಸ್ ಮುಖಂಡ ಮತ್ತು ರಿಯಲ್ ಎಸ್ಟೇಟ್ ಉದ್ಯಮಿ ಸೇರಿ ನಾಲ್ವರನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದು, ಮೂವರು ನಾಪತ್ತೆಯಾಗಿದ್ದಾರೆ. ಪರಾರಿಯಾದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಈ ಸುದ್ದಿಯನ್ನೂ ಓದಿ: ಡಿ.26ಕ್ಕೆ ಶಾಮನೂರು ಶಿವಶಂಕರಪ್ಪರ ಶಿವಗಣರಾಧನೆ – ನುಡಿನಮನ: ಸಿಎಂ, ಸಚಿವರು, ಮಠಾಧೀಶರು, ಗಣ್ಯ ವ್ಯಕ್ತಿಗಳು ಸೇರಿ ಯಾರ್ಯಾರು ಬರುತ್ತಾರೆ?
ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಆಪ್ತ ಶಾಮನೂರು ವೇದಮೂರ್ತಿ ಅಲಿಯಾಸ್ ಜಿ. ಎಸ್. ವೇದಮೂರ್ತಿ, ರಾಜಸ್ತಾನ ಮೂಲದ ರಾಮ್ ಸ್ವರೂಪ್, ದೊನಾರಮ್, ದಾವಣಗೆರೆ ಸಿದ್ದವೀರಪ್ಪ ಬಡಾವಣೆಯ ದೇವಕಿಶನ್ ಬಂಧಿತ ಆರೋಪಿಗಳು. ಇನ್ನು ಮೂವರು ತಪ್ಪಿಸಿಕೊಂಡಿದ್ದು, ಸದ್ಯದಲ್ಲಿಯೇ ಪತ್ತೆ ಹಚ್ಚಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.
ಖಚಿತ ವರ್ತಮಾನದ ಮೇರೆಗೆ ದಾವಣಗೆರೆ ವಿದ್ಯಾನಗರ ಪೊಲೀಸರು ದಾಳಿ ನಡೆಸಿದ್ದು, ದಾಳಿ ವೇಳೆ 290 ಗ್ರಾಂ ಸಿಂಥೆಟಿಕ್ ಡ್ರಗ್ಸ್, 90 ಗ್ರಾಂ ಬ್ರೌನ್ ಶುಗರ್ ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ವೇಳೆ ನಾಲ್ವರು ಸೆರೆ ಸಿಕ್ಕಿದ್ದಾರೆ.
ರಿಯಲ್ ಎಸ್ಟೇಟ್ ನಲ್ಲಿ ಕೋಟ್ಯಂತರ ರೂಪಾಯಿ ಗಳಿಸಿದ್ದ ಶಾಮನೂರು ವೇದಮೂರ್ತಿ ಅವರು ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡಿದ್ದರು. ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಆಪ್ತ ವಲಯದಲ್ಲಿ ಕಾಣಿಸಿಕೊಂಡಿದ್ದ ವೇದಮೂರ್ತಿ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿರುವುದು ಕಾಂಗ್ರೆಸ್ ವಲಯದಲ್ಲಿ ಶಾಕ್ ತಂದಿದೆ. ಜೊತೆಗೆ ಮುಜುಗರಕ್ಕೂ ಕಾರಣವಾಗಿದೆ.
ರಾಜಸ್ತಾನ ಮೂಲದ ಆರೋಪಿಗಳಿಂದ ಡ್ರಗ್ಸ್ ತರಿಸಿ ಉದ್ಯಮಿಗಳು ಮತ್ತು ವಿದ್ಯಾರ್ಥಿಗಳಿಗೆ ಸರಬರಾಜು ಮಾಡುತ್ತಿದ್ದ ಆರೋಪವೂ ಶಾಮನೂರು ವೇದಮೂರ್ತಿ ಮೇಲಿದ್ದು, ಡ್ರಗ್ಸ್ ಸೇವನೆ ವೇಳೆ ಸಿಕ್ಕಿಬಿದ್ದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.





Leave a comment