Site icon Kannada News-suddikshana

ಕಾರಿನ ಜೊತೆ ಬೈಕ್ ಇದ್ರೆ ರೇಷನ್ ಕಾರ್ಡ್ ಕ್ಯಾನ್ಸಲ್ : 22 ಲಕ್ಷ ಅನರ್ಹ ಪಡಿತರ ಚೀಟಿ ಪತ್ತೆ

(Ration -card;) ರಾಜ್ಯ ಅಥವಾ ಕೇಂದ್ರ ಸರ್ಕಾರದ ಯಾವುದೇ ಯೋಜನೆಯ ಲಾಭ ಪಡೆಯಲು ರೇಷನ್ ಕಾರ್ಡ್ ಮುಖ್ಯವಾಗಿದೆ. ಆದರೆ, ಅನರ್ಹ ರೇಷನ್ ಕಾರ್ಡ್ ಅನ್ನು ರದ್ದುಪಡಿಸುವ ಕಾರ್ಯಕ್ಕೆ ವೇಗ ನೀಡಿರುವ ಆಹಾರ ಇಲಾಖೆ ಅನರ್ಹ ಪಡಿತರ ಚೀಟಿಗಳ ಪತ್ತೆಗೆ ಕುಟುಂಬ ತಂತ್ರಾಂಶದ ಮೊರೆ ಹೋಗಿದ್ದು ರಾಜ್ಯದಲ್ಲಿ ಒಟ್ಟು 22,62,413 ಅನರ್ಹ ಅಂತ್ಯೋದಯ, ಬಿಪಿಎಲ್ ಕಾರ್ಡ್ಗಳು ಇರುವುದನ್ನು ಈ ತಂತ್ರಾಂಶದ ಮೂಲಕ ಪತ್ತೆ ಮಾಡಿದೆ.

ಸರ್ಕಾರ ನಿಗದಿಪಡಿಸಿದ ಮಾನದಂಡಗಳಿಗೆ ವಿರುದ್ಧವಾಗಿ ಪಡೆದ ಅನರ್ಹ ಪಡಿತರ ಚೀಟಿಗಳ ವಿವರ ನೀಡುವಂತೆ ಆಹಾರ ಇಲಾಖೆ ಇ- ಆಡಳಿತ ಕೇಂದ್ರಕ್ಕೆ ಮನವಿ ಮಾಡಿದ್ದು, ಈ ತಂತ್ರಾಂಶದಿಂದ ದೊರೆತ ಮಾಹಿತಿಯ ಅನ್ವಯ 10,97,621 ಬಿಪಿಎಲ್, ಅಂತ್ಯೋದಯ ಕಾರ್ಡ್ ಗಳು ಪತ್ತೆಯಾಗಿವೆ. 10,54,368 ಕಾರ್ಡುಗಳನ್ನು 1.20 ಲಕ್ಷ ರೂಪಾಯಿಗಿಂತ ಹೆಚ್ಚು ಆದಾಯ ಪಡೆಯುತ್ತಿರುವವರು ಹೊಂದಿದ್ದಾರೆ.

1,06,152 ಕಾರ್ಡ್ ಗಳನ್ನು ಆದಾಯ ತೆರಿಗೆ ಪಾವತಿದಾರರು ಪಡೆದುಕೊಂಡಿದ್ದಾರೆ. 4272 ಪಡಿತರ ಚೀಟಿಗಳು ಕೆಜಿಐಡಿ ಹೆಚ್.ಆರ್.ಎಂ.ಎಸ್.ನಲ್ಲಿ ಜೋಡಣೆ ಆಗಿರುವುದನ್ನು ಕುಟುಂಬ ತಂತ್ರಾಂಶದಲ್ಲಿ ಇ- ಆಡಳಿತ ಕೇಂದ್ರ ಪತ್ತೆ ಮಾಡಿದೆ. ಹತ್ತು ದಿನಗಳ ಒಳಗೆ ಅನರ್ಹ ಪಡಿತರ ಚೀಟಿಗಳನ್ನು ಮುಕ್ತಾಯಗೊಳಿಸಬೇಕು ಎಂದು ಎಲ್ಲಾ ಜಂಟಿ ಮತ್ತು ಉಪ ನಿರ್ದೇಶಕರಿಗೆ ಆಹಾರ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ.

ವಾರ್ಷಿಕ 1.20 ಲಕ್ಷ ಗಿಂತ ಹೆಚ್ಚು ಆದಾಯ ಪಡೆಯುತ್ತಿರುವವರ, ಮನೆಯಲ್ಲಿ ಕಾರು ಹೊಂದಿರುವ, ಆದಾಯ ತೆರಿಗೆ ಪಾವತಿಸುವವರು, ಏಳೂವರೆ ಎಕರೆ ಒಣ ಅಥವಾ ನೀರಾವರಿ ಭೂಮಿ ಹೊಂದಿರುವವರು, ಅನುದಾನಿತ- ಅನುದಾನರಹಿತ ಕಾಲೇಜು ನೌಕರರು, ನೊಂದಾಯಿತ ಗುತ್ತಿಗೆದಾರರು, ಬಹುರಾಷ್ಟ್ರೀಯ ಕಂಪನಿ, ಕೈಗಾರಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರು, ಸ್ವಂತಕ್ಕಾಗಿ ಒಂದು ಆಟೋ ರೀಕ್ಷಾ ಹೊರತುಪಡಿಸಿ 100 ಸಿಸಿ ಮೇಲಟ್ಟ ಇಂಧನ ಚಾಲಿತ ದ್ವಿಚಕ್ರ, ತ್ರಿಚಕ್ರ, ಕಾರು ಹೊಂದಿರುವುದು ಸೇರಿ 14 ಮಾನದಂಡ ಮುಂದಿಟ್ಟುಕೊಂಡು ಬಿಪಿಎಲ್ ಕಾರ್ಡ್ ರದ್ದುಪಡಿಸುವ ಪ್ರಕ್ರಿಯೆಗೆ ಇಲಾಖೆ ಮುಂದಾಗಿದೆ.

Exit mobile version