Site icon Kannada News-suddikshana

60 ವರ್ಷದ ವೃದ್ಧೆ ಮೇಲೆ ಅತ್ಯಾಚಾರ: ಅಪರಾಧಿಗೆ 25 ವರ್ಷ ಜೈಲು, 37,000 ರೂ. ದಂಡ

SUDDIKSHANA KANNADA NEWS/ DAVANAGERE/ DATE:02-03-2024

ದಾವಣಗೆರೆ: 60 ವರ್ಷದ ವೃದ್ಧೆ ಮೇಲೆ ಅತ್ಯಾಚಾರ ಎಸಗಿದ್ದ ಅಪರಾಧಿಗೆ 25 ವರ್ಷ ಜೈಲು ಶಿಕ್ಷೆ ಹಾಗೂ 37 ಸಾವಿರ ರೂಪಾಯಿ ದಂಡ ವಿಧಿಸಿ ದಾವಣಗೆರೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್.ಟಿ.ಎಸ್.ಸಿ- 1 ನ್ಯಾಯಾಲಯವು ತೀರ್ಪು ನೀಡಿದೆ.

ಹೊನ್ನಾಳಿ ತಾಲೂಕಿನ ಅರಕೆರೆ ಗ್ರಾಮದ ಮಹಿಳೆಯು 2022ರ ಏಪ್ರಿಲ್ 1 ರಂದು ಹೊನ್ನಾಳಿ ಠಾಣೆಗೆ ಹಾಜರಾಗಿ ದೂರು ನೀಡಿದ್ದರು.

60 ವರ್ಷದ ವೃದ್ಧೆ ಒಬ್ಬರೇ ವಾಸವಾಗಿದ್ದರು. ನಾನು ನನ್ನ ಗಂಡ ಮತ್ತು ಮಕ್ಕಳೊಂದಿಗೆ ಅದೇ ಗ್ರಾಮದಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದೆವು. ಅದೇ ವರ್ಷದ ಮಾರ್ಚ್ 30ರಂದು ಬೆಳಿಗ್ಗೆ8.30ಕ್ಕೆ ಕೂಲಿ ಕೆಲಸಕ್ಕೆ ಹೊರಟಿದ್ದೆವು. ಅದೇ ವೇಳೆಗೆ ನಮ್ಮ ಚಿಕ್ಕಮ್ಮ ನಿಮ್ಮ ತಾಯಿ ಕೂಗಿಕೊಳ್ಳುತ್ತಿದ್ದಾರೆ. ಎರಡೂ ಕೈಗಳು ಮುರಿದಂತೆ ಕಾಣುತ್ತಿವೆ ಅಂತಾ ತಿಳಿಸಿದಾಗ ನಾವು ಕೂಡಲೇ ಬಂದು ನೋಡಲಾಗಿ ನಮ್ಮ ಅಮ್ಮನ ಎರಡೂ ಕೈಗಳು ಹಿಂದಕ್ಕೆ ತಿರುಗಿದ್ದು, ಕುತ್ತಿಗೆ ಗಲ್ಲದ ಮೇಲೆ ಗಾಯದ ಗುರುತುಗಳಾಗಿ ರಕ್ತ ಬರುತ್ತಿತ್ತು.

ಈ ಬಗ್ಗೆ ವಿಚಾರಿಸಿದ್ದಕ್ಕೆ ಮಾರ್ಚ್ 29ರಂದು ರಾತ್ರಿ ಸುಮಾರು 11.30ರ ಸುಮಾರಿನಲ್ಲಿ ನಾನು ಮನೆಯಲ್ಲಿ ಮಲಗಿದ್ದಾಗ ಹರಪನಹಳ್ಳಿ ತಾಲೂಕಿನ ಹಲವಾಗಲು ಗ್ರಾಮದ ಆಂಜಿನಪ್ಪ ಅಲಿಯಾಸ್ ಮೋಹನ್ ಎಂಬಾತ ಊಟ ತಂದಿದ್ದೇನೆ. ಎದ್ದೇಳು ಅಜ್ಜಿ ಎಂದು ಬಾಗಿಲು ತೆಗೆಸಿ ನನ್ನನ್ನು ದಬ್ಬಿ ಅತ್ಯಾಚಾರ ಮಾಡಿದ್ದಾನೆ ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಅಂಜಿನಪ್ಪ ಅಲಿಯಾಸ್ ಮೋಹನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದರು.

ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದ ತನಿಖಾಧಿಕಾರಿ ಟಿ. ವಿ. ದೇವರಾಜ್ ಅವರು ಆಂಜಿನಪ್ಪ ಅಲಿಯಾಸ್ ಮೋಹನ ಈತನ ವಿರುದ್ದ ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿ ಸಲ್ಲಿಸಿದ್ದರು. ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್.ಟಿ.ಎಸ್.ಸಿ-೧ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿತ್ತು. ಆರೋಪಿತನ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಶ್ರೀಪಾದ್.ಎನ್ ರವರು ಆರೋಪಿ ಆಂಜಿನಪ್ಪ ಅಲಿಯಾಸ್ ಮೋಹನನಿಗೆ 25 ವರ್ಷ ಶಿಕ್ಷೆ ಹಾಗೂ 37,000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದರು. ಈ ಪ್ರಕರಣದಲ್ಲಿ ಸಂತ್ರಸ್ತೆ ಪರವಾಗಿ ಸರ್ಕಾರಿ ವಕೀಲರಾದ ಸುನಂದಾ ಮಡಿವಾಳರ್ ಅವರು ನ್ಯಾಯ ಮಂಡನೆ ಮಾಡಿದ್ದರು.

ಪ್ರಕರಣದಲ್ಲಿ ತನಿಖೆಮಾಡಿ ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ ದೇವರಾಜ್ ಟಿ.ವಿ. ಹಾಗೂ ಸಂತ್ರಸ್ತೆ ಪರ ನ್ಯಾಯ ಮಂಡನೆ ಮಾಡಿದ ಸರ್ಕಾರಿ ವಕೀಲರಾದ ಸುನಂದಾ ಮಡಿವಾಳರ್‌ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಅಭಿನಂದಿಸಿದ್ದಾರೆ.

Exit mobile version