Site icon Kannada News-suddikshana

BIG BREAKING: ಅತ್ಯಾಚಾರ ಕೇಸ್ ನಲ್ಲಿ ಪ್ರಜ್ವಲ್ ರೇವಣ್ಣಗೆ ಜೀವಂತ ಇರುವವರೆಗೆ ಜೈಲು ಶಿಕ್ಷೆ: ಗರಿಷ್ಠ ಶಿಕ್ಷೆ ನೀಡಿದ ಕೋರ್ಟ್

Prajwal Revanna

SUDDIKSHANA KANNADA NEWS/ DAVANAGERE/DATE:02_08_2025

ಬೆಂಗಳೂರು: ಮೈಸೂರಿನ ಕೆ. ಆರ್. ನಗರದ ಮನೆಗೆಲಸದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣ ಸಂಬಂಧ ಮಾಜಿ ಸಂಸದ ಪ್ರಜ್ವಲ್ ರೇವಣ್ಣರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಗರಿಷ್ಠ ಎಂದರೆ ಜೀವಾವಧಿ ಶಿಕ್ಷೆ ಹಾಗೂ 5 ಲಕ್ಷ ರೂಪಾಯಿ ದಂಡ ವಿಧಿಸಿದೆ. ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ಈ ಕೇಸ್ ಸಂಬಂಧ ಶಿಕ್ಷೆ ಪ್ರಮಾಣವನ್ನು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ. 

READ ALSO THIS STORY: ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ: ಅಸ್ಥಿಪಂಜರದ ಅವಶೇಷಗಳ ಪತ್ತೆ ಬಳಿಕ ಎಸ್ಐಟಿ ತನಿಖೆ ಶುರು, ಢವ..ಢವ.. ಶುರುವಾಗಿರೋದು ಯಾರಿಗೆ?

ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಶುಕ್ರವಾರ ಪ್ರಜ್ವಲ್ ರೇವಣ್ಣ ತಪ್ಪಿತಸ್ಥ ಎಂದು ತೀರ್ಪು ನೀಡಿತ್ತು. ಶಿಕ್ಷೆಯ ಪ್ರಮಾಣವನ್ನು ಇಂದಿಗೆ ಮುಂದೂಡಿತ್ತು. ಪ್ರಜ್ವಲ್ ರೇವಣ್ಣ ಶಿಕ್ಷೆ ಪ್ರಮಾಣ ತಿಳಿದುಕೊಳ್ಳಲು ನ್ಯಾಯಾಲಯದಲ್ಲಿ ಕಿಕ್ಕಿರಿದು ಜನರು ಸೇರಿದ್ದರು. ವಕೀಲರು ಸಹ ಕುತೂಹಲದಿಂದ ಕಾಯುತ್ತಿದ್ದರು. ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ಅವರು ಜೀವಾವಧಿ ಶಿಕ್ಷೆ ನೀಡಿದ್ದಾರೆ.

ಕೈ ಮುಗಿದು ನಿಂತ ಪ್ರಜ್ವಲ್ ರೇವಣ್ಣ: 

ಇನ್ನು ಪ್ರಜ್ವಲ್ ರೇವಣ್ಣನು ಕೈ ಮುಗಿದು ದೇವರನ್ನು ಬೇಡಿಕೊಳ್ಳುತ್ತಿದ್ದ ದೃಶ್ಯವೂ ಕಂಡು ಬಂತು. ಜನದಟ್ಟಣೆ ನಡುವೆಯೇ ಪ್ರಜ್ವಲ್ ರೇವಣ್ಣನನ್ನು ಪೊಲೀಸರು ಕರೆದುಕೊಂಡು ಬಂದರು. ತಂದೆ ಹೆಚ್. ಡಿ. ರೇವಣ್ಣ, ತಾಯಿ ಭವಾನಿ ರೇವಣ್ಣ ಅವರು ಬೆಳಿಗ್ಗೆಯಿಂದಲೂ ಪೂಜೆ, ಪುನಸ್ಕಾರ ನೆರವೇರಿಸಿದ್ದು, ತನ್ನ ಮಗನಿಗೆ ಕಡಿಮೆ ಶಿಕ್ಷೆ ಪ್ರಮಾಣ ಪ್ರಕಟ ಆಗಲಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಕೋರ್ಟ್ ಹಾಲ್ ನಲ್ಲಿ ಆದೇಶ ಪ್ರಕಟಿಸುವ ವೇಳೆ ಅಪರಾಧಿ ಪ್ರಜ್ವಲ್ ರೇವಣ್ಣ ಕೈಮುಗಿದು ನಿಂತಿದ್ದ.

ಪ್ರಜ್ವಲ್ ರೇವಣ್ಣ ಮಾಜಿ ಪ್ರಧಾನಿ ಮೊಮ್ಮಗ:

ಮಾಜಿ ಸಚಿವ ಮತ್ತು ಹೊಳೆನರಸೀಪುರ ಶಾಸಕ ಹೆಚ್ ಡಿ ರೇವಣ್ಣ ಅವರ ಪುತ್ರ, ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಕಳೆದ 14 ತಿಂಗಳಿನಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದರು. ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿರುವ ನಾಲ್ಕು ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳ ಪೈಕಿ ಒಂದು ಪ್ರಕರಣದ ತೀರ್ಪು ಹೊರ ಬಿದ್ದಿದೆ.

ಸರ್ಕಾರಿ ಅಭಿಯೋಜಕರು ಪ್ರಜ್ವಲ್ ರೇವಣ್ಣರಿಗೆ ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸಬೇಕು ಮತ್ತು 25 ಲಕ್ಷ ರೂಪಾಯಿ ಸಂತ್ರಸ್ತೆಗೆ ಪರಿಹಾರ ನೀಡುವಂತೆ ವಾದ ಮಂಡಿಸಿದ್ದರು. ಪ್ರಜ್ವಲ್ ರೇವಣ್ಣ ಪರ ವಕೀಲರು ಜನಪ್ರತಿನಿಧಿಯಾಗಿದ್ದ ಪ್ರಜ್ವಲ್ ರೇವಣ್ಣರಿಗೆ ಕಡಿಮೆ ಶಿಕ್ಷೆ ವಿಧಿಸಬೇಕು ಎಂದು ನ್ಯಾಯಾಲಯದಲ್ಲಿ ಮನವಿ ಮಾಡಿದರು. ಸಂತ್ರಸ್ತೆಗಿಂತ ಹೆಚ್ಚು ಪ್ರಜ್ವಲ್ ರೇವಣ್ಣ ನೋವು ಅನುಭವಿಸಿದ್ದಾರೆ. ಹಾಗಾಗಿ, ಕಡಿಮೆ ಶಿಕ್ಷೆ ವಿಧಿಸಬೇಕು ಎಂದು ಮನವಿ ಮಾಡಿದರು.

READ ALSO THIS STORY: ಮೊದಲ ಬಾರಿ ಮನೆ ಖರೀದಿ, ಕಟ್ಟಿಸುತ್ತಿದ್ದೀರಾ? ಹಾಗಾದ್ರೆ ಈ ಐದು ವಿಷಯ ನೆನಪಿನಲ್ಲಿಟ್ಟುಕೊಳ್ಳಿ!

ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ್ ಭಟ್ ಅವರು ಗೂಗಲ್ ನಕ್ಷೆಗಳ ಡೇಟಾ, ತಾಂತ್ರಿಕ ಪುರಾವೆಗಳು ಮತ್ತು ಎಫ್‌ಎಸ್‌ಎಲ್ ವರದಿಗಳ ಕುರಿತು ಸ್ಪಷ್ಟೀಕರಣವನ್ನು ಕೋರಿದ್ದರು. ಈ ಸಾಕ್ಷ್ಯ ಮಾನ್ಯವಾದ ಕಾರಣ ಪ್ರಜ್ವಲ್ ರೇವಣ್ಣನಿಗೆ ಶಿಕ್ಷೆ ವಿಧಿಸಲಾಗಿತ್ತು.

ಘಟನೆ ಹಿನ್ನೆಲೆ ಏನು?

ಪ್ರಜ್ವಲ್ ಅವರ ತೋಟದ ಮನೆಯಲ್ಲಿ ಮಾಜಿ ಮನೆಕೆಲಸದವಳ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊರಿಸಲಾಗಿತ್ತು. ಸಂತ್ರಸ್ತೆ ಏಪ್ರಿಲ್ 28, 2024 ರಂದು ಹಾಸನದ ಹೊಳೆನರಸೀಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ
ದೂರು ದಾಖಲಿಸಿದ್ದರು. ಪ್ರಜ್ವಲ್ ರೇವಣ್ಣರನ್ನು ನ್ಯಾಯಾಧೀಶರು ಕೇಳಿದಾಗ ನಾನು ಪದವೀಧರ. ನನ್ನ ಸರ್ಟಿಫಿಕೆಟ್ ನೋಡಿ. ರಾಜಕೀಯ ಷಡ್ಯಂತ್ರದಿಂದ ಆರೋಪ ಮಾಡಲಾಗಿದೆ. ಶಿಕ್ಷೆ ಕಡಿಮೆ ವಿಧಿಸಬೇಕು ಎಂದು ಮನವಿ ಮಾಡಿದರು.

ಪ್ರಜ್ವಲ್ ರೇವಣ್ಣ ಅವರನ್ನು ಕಳೆದ 14 ತಿಂಗಳಿನಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ. ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಒಂದು ದಿನದ ನಂತರ ಬೆಳಕಿಗೆ ಬಂದ ಬಹು ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳಲ್ಲಿ ಅವರು ಪ್ರಮುಖ ಆರೋಪಿ. ಸಾಮಾಜಿಕ ಮಾಧ್ಯಮಗಳಲ್ಲಿ ಬಹು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯವನ್ನು ತೋರಿಸುವ ಅಶ್ಲೀಲ ವೀಡಿಯೊ ತುಣುಕುಗಳು ವೈರಲ್ ಆಗಿದ್ದವು. ಇಂಥ ವೀಡಿಯೊಗಳನ್ನು ಹೊಂದಿರುವ ಪೆನ್ ಡ್ರೈವ್‌ಗಳನ್ನು ಹಾಸನದಲ್ಲಿ ಹಂಚಲಾಗಿತ್ತು. ಆನಂತರ ಪೊಲೀಸರು ವಶಪಡಿಸಿಕೊಂಡಿದ್ದರು. ನಂತರ ಪ್ರಜ್ವಲ್ ಏಪ್ರಿಲ್ 27, 2024 ರಂದು ದೇಶದಿಂದ
ಎಸ್ಕೇಪ್ ಆಗಿದ್ದರು.

ಪ್ರಕರಣಗಳ ದಾಖಲಾದ ನಂತರ, ರಾಜ್ಯ ಸರ್ಕಾರವು ಅವರ ವಿರುದ್ಧದ ಎಲ್ಲಾ ಆರೋಪಗಳ ತನಿಖೆಗಾಗಿ ಸಿಐಡಿ ಅಡಿಯಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಅನ್ನು ರಚಿಸಿತ್ತು. ಪ್ರಜ್ವಲ್ ರೇವಣ್ಣ ಅವರನ್ನು ಮೇ 31, 2024 ರಂದು
ಜರ್ಮನಿಯ ಮ್ಯೂನಿಚ್‌ನಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆ ಬಂಧಿಸಲಾಗಿತ್ತು.

Exit mobile version