ದಾವಣಗೆರೆ: ಹರಿಹರ ತಾಲೂಕಿನ ದುಗ್ಗತ್ತಿ, ಚಿಕ್ಕಬಿದರೆ ಸೇರಿದಂತೆ ವಿವಿಧ ಗ್ರಾಮಗಳ ರೈತರ ಭೂಕಬಳಿಕೆ, ಕಾಡಜ್ಜಿ ಗ್ರಾಮದ ಕೃಷಿ ಕೇಂದ್ರದ ಸಮೀಪದಿಂದ ಕಲ್ಲೇಶ್ವರ ರೈಸ್ ಮಿಲ್ ಹಿಂಭಾಗಕ್ಕೆ ಮಣ್ಣು ಅಕ್ರಮ ಸಾಗಾಟ, ಅಟ್ರಾಸಿಟಿ ಕೇಸ್, ಜಿಲ್ಲಾ ಉಸ್ತುವಾರಿ ಸಚಿವರ ಭ್ರಷ್ಟಾಚಾರ, ಅವ್ಯವಹಾರದ ವಿರುದ್ಧ ಜನವರಿ 19ರಂದು ಬೃಹತ್ ಪ್ರತಿಭಟನೆ ನಡೆಸಿ, ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಗೆ ಮೆರವಣಿಗೆಯಲ್ಲಿ ತೆರಳಿ ದೂರು ಸಲ್ಲಿಸಲು ಬಿಜೆಪಿ ನಿರ್ಧರಿಸಿದೆ.
ಈ ಸುದ್ದಿಯನ್ನೂ ಓದಿ: BIG BREAKING: ದಾವಣಗೆರೆ ಸಿಂಥೆಟಿಕ್ ಡ್ರಗ್ಸ್ ಕೇಸಲ್ಲಿ ಬಂಧಿತರ ಸಂಖ್ಯೆ 11ಕ್ಕೇರಿಕೆ: ವೀರಶೈವ ಲಿಂಗಾಯತ ಮಹಾಸಭಾ ಯುವ ಘಟಕದ ಜಿಲ್ಲಾಧ್ಯಕ್ಷ ಶಿವರಾಜ್ ಬಂಧನ!
ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಹರಿಹರ ಶಾಸಕ ಬಿ. ಪಿ. ಹರೀಶ್ ಅವರು, ಬೃಹತ್ ಹೋರಾಟ ನಡೆಸುವಂತೆ ಹಾಗೂ ನನ್ನ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಿಸಿರುವ ವಿರುದ್ಧ ಪ್ರತಿಭಟನೆ ನಡೆಸುವಂತೆ ರಾಜ್ಯ ಬಿಜೆಪಿ ಸೂಚನೆ ನೀಡಿದೆ. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ್ ನಾಗಪ್ಪರನ್ನೊಳಗೊಂಡಂತೆ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಅಂಬೇಡ್ಕರ್ ಸರ್ಕಲ್ ನಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ಮೆರವಣಿಗೆ ಮೂಲಕ ಹದಡಿ ರಸ್ತೆಯಲ್ಲಿರುವ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಅಕ್ರಮ ಮಣ್ಣು ಸಾಗಣೆ ವೇಳೆ ಸ್ಥಳದಲ್ಲಿದ್ದ ಲಾರಿಗಳು, ಕಾರುಗಳ ಬಂದಿದ್ದ ವ್ಯಕ್ತಿಗಳು ಸೇರಿದಂತೆ ಎಲ್ಲಾ ಸಾಕ್ಷ್ಯಗಳನ್ನು ನೀಡಿ ಪೊಲೀಸರಿಗೆ ಲಿಖಿತವಾಗಿ ದೂರು ನೀಡುತ್ತೇವೆ. ಕಠಿಣ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಇಲ್ಲಿಗೆ ನಿಲ್ಲದು. ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಕಾಡಜ್ಜಿ, ಬಾತಿಗುಡ್ಡ ಸೇರಿದಂತೆ ಹಲವೆಡೆಗಳಿಂದ ಅಕ್ರಮವಾಗಿ ಮಣ್ಣು ಸಾಗಾಟ ಮಾಡಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರೆ ಅವರು ನಾನು ವರ್ಗಾವಣೆ ಮಾಡಿಸಿಕೊಂಡು ಹೋಗುತ್ತೇನೆ ಎನ್ನುತ್ತಾರೆ. ಅಧಿಕಾರಿಗಳು ಸಚಿವರ ದೌರ್ಜನ್ಯಕ್ಕೆ ಬೇಸತ್ತು ಹೋಗಿದ್ದಾರೆ. ಅಕ್ರಮಗಳಿಗೆ ಬೆಂಬಲ ನೀಡುವ ಸ್ಥಿತಿಯಲ್ಲಿದ್ದಾರೆ. ಇಲ್ಲದಿದ್ದರೆ ಅಧಿಕಾರಿಗಳನ್ನು ಬೆದರಿಸುವ ಮೂಲಕ ಕೆಲಸ ಮಾಡಿಕೊಳ್ಳಲಾಗುತ್ತಿದೆ. ಕೆರೆಗಳ ಮಣ್ಣು, ಜಾಗ, ಕೃಷಿ ಇಲಾಖೆಯ ಜಾಗದಲ್ಲಿನ ಮಣ್ಣು ಲೂಟಿ ಹೊಡೆಯಲಾಗಿದೆ. ನಾನು ಅಕ್ರಮ ಮಣ್ಣು ಸಾಗಾಟ ತಡೆಯಲು ಪೊಲೀಸರು ಮತ್ತು ಕೃಷಿ ಇಲಾಖೆಯ ಅಧಿಕಾರಿಗಳ ಜೊತೆ ಹೋಗಿದ್ದೆ. ಆದರೆ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಹಿಂಬಾಲಕರು ಬಂದು ದಬ್ಬಾಳಿಕೆ ನಡೆಸಿದರು ಎಂದು ಆರೋಪಿಸಿದರು.
ಆಪ್ತ ಸಹಾಯಕನ ಮೇಲೆ ಹಲ್ಲೆ:
ನನ್ನ ಆಪ್ತ ಸಹಾಯಕನ ಮೇಲೆ ಮನಬಂದಂತೆ ಥಳಿಸಿದ್ದಾರೆ. ಫೋನ್ ನಲ್ಲಿ ಮಾತನಾಡುತ್ತಾ ಹೊಡೆಯಿರಿ ಹೊಡೆಯಿರಿ ಎಂದು ಹೇಳುತ್ತಲೇ ದೌರ್ಜನ್ಯ ನಡೆಸಿದ್ದಾರೆ. ಕೊಂಡಜ್ಜಿ ಗ್ರಾಮದ ರೈತರಾಗಲೀ, ಜನರಾಗಲೀ ಅಲ್ಲಿ ಇರಲಿಲ್ಲ. ನಾನು ಅವಾಚ್ಯ ಶಬ್ಧಗಳಿಂದ ಯಾರನ್ನೂ ನಿಂದಿಸಿಲ್ಲ. ಆದರೂ ಅಟ್ರಾಸಿಟಿ ಕೇಸ್ ಅನ್ನು ಕಾಂತರಾಜ್ ಎಂಬಾತನಿಂದ ಹಾಕಿಸಿದ್ದಾರೆ. ಆತ ಸ್ಥಳದಲ್ಲಿಯೇ ಇರಲಿಲ್ಲ ಎಂದ ಮೇಲೆ ನಾನು ಹೇಗೆ ಜಾತಿ ನಿಂದನೆ ಮಾಡಲು ಸಾಧ್ಯ? ಎಂದು ಪ್ರಶ್ನಿಸಿದರು.
ಕೆಡಿಪಿ ಸಭೆಯಲ್ಲಿ ಪ್ರಸ್ತಾಪ:
ಘಟನೆ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದೆ. ಎಸ್. ಎಸ್. ಮಲ್ಲಿಕಾರ್ಜುನ್ ಅವರು ಸಭೆಯ ಅರ್ಧಕ್ಕೆ ಸಂಸದರನ್ನು ಕರೆದುಕೊಂಡು ಹೋದರು. ನಾನು ಈ ಘಟನೆ ಕುರಿತಂತೆ ತಪ್ಪಿತಸ್ಥರ
ವಿರುದ್ಧ ಎಫ್ ಐಆರ್ ದಾಖಲಿಸಬೇಕು ಎಂಬ ಒತ್ತಾಯ ಮಾಡಿದ್ದೆ. ಕಾಂಗ್ರೆಸ್ ನ ನಾಲ್ವರು ಶಾಸಕರು ಸಹ ನನಗೆ ಬೆಂಬಲಿಸಿದರು. ಅಧಿಕಾರಿಗಳು ಎಫ್ ಐಆರ್ ದಾಖಲಿಸಿ ನನ್ನ ಮನೆಗೆ ಕಳುಹಿಸಿಕೊಡುತ್ತೇನೆಂದರು. ಆಗ ಕಾಂಗ್ರೆಸ್ ಶಾಸಕರಾದ ಶಾಂತನಗೌಡ,
ಶಿವಗಂಗಾ ಬಸವರಾಜ್, ಕೆ. ಎಸ್. ಬಸವಂತಪ್ಪ ಅವರು ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಿ. ಎಫ್ ಐಆರ್ ದಾಖಲಿಸಿ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ ಎಂಬ ಒತ್ತಾಯ ಮಾಡಿದರು. ರಾತ್ರಿಯಾದರೂ ಇಲ್ಲಿಯೇ ಇರುತ್ತೇವೆಂದರೂ ಅಧಿಕಾರಿಗಳು ಮಾತ್ರ
ಏನೂ ಇಲ್ಲದ ಎಫ್ಐಆರ್ ದಾಖಲಿಸಿದ್ದಾರೆ ಎಂದು ದೂರಿದರು.
ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಒ ಅವರು ಕಾಡಜ್ಜಿ ಗ್ರಾಮದ ಕೃಷಿ ಕೇಂದ್ರಕ್ಕೆ ಭೇಟಿ ನೀಡುವುದಾಗಿ ಸಭೆಯಲ್ಲಿ ಹೇಳಿದ್ದರೂ ಹೋಗಿಲ್ಲ. ಸಾಕ್ಷ್ಯ ಇದ್ದರೂ ಕ್ರಮ ಕೈಗೊಂಡಿಲ್ಲ. ಇದನ್ನು ನೋಡಿದರೆ ಸಚಿವರ ಅಣತಿಯಂತೆ ಕೆಲಸ ಮಾಡುತ್ತಿದ್ದಾರೆ ಎಂಬುದಕ್ಕೆ ಇದಕ್ಕೆ ಸಾಕ್ಷಿ ಬೇಕಾ ಎಂದು ಬಿ. ಪಿ. ಹರೀಶ್ ಪ್ರಶ್ನಿಸಿದರು.
ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಮುಖಂಡರಾದ ಶ್ರೀನಿವಾಸ್ ದಾಸಕರಿಯಪ್ಪ, ಮಾಜಿ ಶಾಸಕರಾದ ಎಸ್. ವಿ. ರಾಮಚಂದ್ರಪ್ಪ, ಹೆಚ್. ಪಿ. ರಾಜೇಶ್, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ
ಶಿವಕುಮಾರ್, ಬಿ. ಟಿ. ಸಿದ್ಧಪ್ಪ, ಪಿ. ರಾಜೇಶ್ ನಾಯ್ಕ ಮತ್ತಿತರರು ಹಾಜರಿದ್ದರು.





Leave a comment