ದಾವಣಗೆರೆ: ನಗರ ಅಭಿವೃದ್ಧಿ ಪ್ರಾಧಿಕಾರದಿಂದ ದಾವಣಗೆರೆ ಮತ್ತು ಹರಿಹರ ನಗರದಲ್ಲಿ ಕೇವಲ 2 ವರ್ಷದಲ್ಲಿ 34 ಕೋಟಿಗಳ ಅಭಿವೃದ್ಧಿ ಕಾಮಗಾರಿಗಳು ನಡೆಸಿರುವುದಕ್ಕೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಶ್ಲಾಘನೆ ವ್ಯಕ್ತಪಡಿಸಿದರು.
ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ದಾವಣಗೆರೆ-ಹರಿಹರ ನಗರದಲ್ಲಿ ರೂ.215 ಲಕ್ಷಗಳ ವೆಚ್ಚದಲ್ಲಿ ವಿವಿಧ ಉದ್ಯಾನವನ ಮತ್ತು ವೃತ್ತಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ಈ ಹಿಂದೆ ಅಭಿವೃದ್ಧಿ ಪ್ರಾಧಿಕಾರದಿಂದ ಕೆಲಸಗಳಾಗಿದ್ದರೂ ಸಹ ಕಳೆದ 2 ವರ್ಷಗಳ ಹಿಂದೆ ದಿನೇಶ್ ಕೆ.ಶೆಟ್ಟಿ ಅವರು ಅಧ್ಯಕ್ಷರಾದ ನಂತರ ಲಿಂಗೈಕ್ಯ ಡಾ|| ಶಾಮನೂರು ಶಿವಶಂಕರಪ್ಪನವರು ಮತ್ತು ಸಚಿವ ಎಸ್. ಎಸ್.ಮಲ್ಲಿಕಾರ್ಜುನ್ ಅವರ ಸೂಚನೆಯಂತೆ 34 ಕೋಟಿ ವೆಚ್ಚದಲ್ಲಿ ದಾವಣಗೆರೆ ಮತ್ತು ಹರಿಹರ ಎರಡು ನಗರಗಳಲ್ಲೂ ಕಾಮಗಾರಿಗಳು ನಡೆದಿವೆ. ಇದೇ ರೀತಿ ಮುಂದಿನ ದಿನಗಳಲ್ಲೂ ಸಹ ಅಭಿವೃದ್ಧಿ ಕಾಮಗಾರಿಗಳನ್ನು ಮುಂದುವರೆಸಬೇಕೆಂದು ಸೂಚಿಸಿದರು.
ಮುಖ್ಯ ಅಂಶಗಳು:
ಗುಣಮಟ್ಟದ ಕಾಮಗಾರಿ: ಪ್ರತಿಯೊಂದು ಕೆಲಸವೂ ಗುಣಮಟ್ಟದಿಂದ ಕೂಡಿರಬೇಕು ಮತ್ತು ಸಾರ್ವಜನಿಕರಿಗೆ ದೀರ್ಘಕಾಲದವರೆಗೆ ಉಪಯುಕ್ತವಾಗಬೇಕು.
ಉದ್ಯಾನವನಗಳ ರಕ್ಷಣೆ: ಉದ್ಯಾನವನಗಳಲ್ಲಿ ಅನೈತಿಕ ಚಟುವಟಿಕೆಗಳು ನಡೆಯದಂತೆ ಕಟ್ಟುನಿಟ್ಟಿನ ನಿಗಾ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಪರಿಸರ ಸ್ನೇಹಿ ದಾವಣಗೆರೆ: ಕುಂದುವಾಡ ಕೆರೆ ಸೇರಿದಂತೆ ಪ್ರಮುಖ ತಾಣಗಳಲ್ಲಿ ಪರಿಸರ ರಕ್ಷಣೆಯೊಂದಿಗೆ ಸಾರ್ವಜನಿಕರಿಗೆ ಆರೋಗ್ಯಕರ ವಾತಾವರಣ ಕಲ್ಪಿಸಲಾಗಿದೆ.
ದಾವಣಗೆರೆ-ಹರಿಹರ ನಗರದಲ್ಲಿ ನಡೆಯುತ್ತಿರುವ ಈ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಲಿ ಎಂದು ಹೇಳಿದ ಅವರು ದಾವಣಗೆರೆಯಲ್ಲಿ 2013ರಿಂದ ಉದ್ಯಾನವನಗಳು, ಕುಂದುವಾಡ ಕೆರೆಯ ಏರಿಯ ಮೇಲೆ ಪರಿಸರ ರಕ್ಷಣೆ ಜೊತೆಗೆ ಸಾರ್ವಜನಿಕರಿಗೆ ಆರೋಗ್ಯಕರ ವಾತಾವರಣ ಸೃಷ್ಟಿ ಮಾಡಲಾಗಿದೆ ಎಂದರು.
ಉದ್ಯಾನವನಗಳಲ್ಲಿ ಅಳವಡಿಸುವ ಕ್ರೀಡೋಪಕರಣಗಳನ್ನು ನಿರ್ವಹಿಸಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ ಅವರು ಉದ್ಯಾನವನಗಳಲ್ಲಿ ಅನೈತಿಕ ಚಟುವಟಿಕೆಗಳು ನಡೆಯದಂತೆಯೂ ಸಹ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಿದರು.
ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಮಾತನಾಡಿ ಪ್ರಾಧಿಕಾರದಿಂದ ದಾವಣಗೆರೆ-ಹರಿಹರ ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯಲು ಲಿಂಗೈಕ್ಯ ಡಾ|| ಶಾಮನೂರು ಶಿವಶಂಕರಪ್ಪನವರು ಮತ್ತು ಸಚಿವರಾದ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಮಾರ್ಗದರ್ಶನ ಕಾರಣವೆಂದರು.
ಈ ಸಂದಭದಲ್ಲಿ ಪ್ರಾಧಿಕಾರದ ಆಯುಕ್ತ ಹುಲ್ಮನಿ ತಿಮ್ಮಣ್ಣ, ಸದಸ್ಯರುಗಳಾದ ವಾಣಿ ಬಕ್ಕೇಶ್, ಜಬ್ಬಾರ್ ಖಾನ್, ಹರಿಹರ ತಾಲ್ಲೂಕು ಗ್ಯಾರಂಟಿ ಯೋಜನೆಯ ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್, ಮುಖಂಡರುಗಳಾದ ಬಸಪ್ಪ, ರೇವಣಸಿದ್ದಪ್ಪ, ಹುಲಿಗೇಶ್, ಶಂಕರ್ ಖಟಾವ್‌ಕರ್, ಜಯದೇವಪ್ಪ, ಸನಾವುಲ್ಲಾ, ಬ್ಲಾಕ್ ಅಧ್ಯಕ್ಷರುಗಳಾದ ಹನುಮಂತಪ್ಪ, ಅಬೀದ್ ಅಲಿ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಗಳಾದ ಎ.ನಾಗರಾಜ್, ಜಿ.ಎಸ್.ಮಂಜುನಾಥ್, ಪ್ರಾಧಿಕಾರದ ಕಾರ್ಯಪಾಲಕ ಅಭಿಯಂತರರಾದ ಪರಮೇಶ್ವರ ನಾಯ್ಕ, ಶ್ವೇತಾ ಮತ್ತಿತರರಿದ್ದರು.





Leave a comment