Home ದಾವಣಗೆರೆ ಕುಟುಂಬ ರಾಜಕಾರಣದಿಂದ ಪ್ರಜಾಪ್ರಭುತ್ವ ನಿರ್ನಾಮ: ದಾವಣಗೆರೆಯಲ್ಲಿ ಕಾಂಗ್ರೆಸ್ ವಿರುದ್ಧ ಪ್ರಲ್ಹಾದ್ ಜೋಶಿ ವಾಗ್ದಾಳಿ
ದಾವಣಗೆರೆಬೆಂಗಳೂರು

ಕುಟುಂಬ ರಾಜಕಾರಣದಿಂದ ಪ್ರಜಾಪ್ರಭುತ್ವ ನಿರ್ನಾಮ: ದಾವಣಗೆರೆಯಲ್ಲಿ ಕಾಂಗ್ರೆಸ್ ವಿರುದ್ಧ ಪ್ರಲ್ಹಾದ್ ಜೋಶಿ ವಾಗ್ದಾಳಿ

Share
ದಾವಣಗೆರೆ
Share

ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕುಟುಂಬ ರಾಜಕಾರಣವೇ ಮುಖ್ಯವಾಗಿದೆ. ಇದರಿಂದ ಪ್ರಜಾಪ್ರಭುತ್ವ ನಿರ್ನಾಮವಾಗಲಿದೆ. ಒಂದೇ ಕುಟುಂಬಕ್ಕೆ ಯಾಕೆ ಮನ್ನಣೆ ಕೊಡಬೇಕು ಎಂದು ಈ ಬಾರಿ ಚಿಂತಿಸಿರುವ ಮತದಾರರು ಬಿಜೆಪಿಗೆ ಮತ ಹಾಕುತ್ತಾರೆ ಎಂಬ ವಿಶ್ವಾಸವಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮನೆಯಲ್ಲಿ ತಾತ ಇದ್ದಾಗ ಅವರು ಶಾಸಕರು ಹಾಗೂ ಮಂತ್ರಿಯಾಗಿದ್ದರು. ಈಗ ಮಗ ಶಾಸಕರು ಹಾಗೂ ಮಂತ್ರಿಯಾಗಿದ್ದಾರೆ. ಅವರ ಪತ್ನಿ ಸಂಸದರು. ಇದರ ಜೊತೆಗೆ ಅವರ ಮಗನೂ ಶಾಸಕನಾಗಬೇಕು
ಎಂದು ಟಿಕೆಟ್ ನೀಡಿದ್ದಾರೆ. ಹೀಗೆ ಅವರ ಕುಟುಂಬಕ್ಕೇ ಟಿಕೆಟ್ ನೀಡಿ ದಾವಣಗೆರೆ ಕಬ್ಜಾ ಮಾಡಲು ಮುಂದಾಗಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಈ ಬಾರಿಯೂ ಗೆದ್ದರೆ ಮುಂದಿನ 40 ವರ್ಷ ಬೇರೆ ಯಾರಿಗೂ ಟಿಕೆಟ್ ಕೊಡಲ್ಲ ಎಂಬುದನ್ನು ಎಚ್ಚರಿಸುತ್ತಿದ್ದೇನೆ
ಎಂದರು.

ಬಾಗಲಕೋಟೆಯಲ್ಲಿ ಅಹಿಂದ ಮಂತ್ರ. ದಾವಣಗೆರೆಯಲ್ಲಿ ಗೋವಿಂದ. ಇಲ್ಲಿ ಬೇರೆ ಯಾರೂ ಸಮರ್ಥರು ಇಲ್ಲ ಎನ್ನುವಂತೆ ಅವರದೇ ಕುಟುಂಬಕ್ಕೆ ಟಿಕೆಟ್ ನೀಡಿದರು. ಸೋನಿಯಾ ಗಾಂಧಿ ಕುಟುಂಬದಂತೆ ಶಾಮನೂರು ಕುಟುಂಬವೂ ಎಲ್ಲರೂ ಅಧಿಕಾರದಲ್ಲಿ ಇರಬೇಕು ಎಂದು ಬಯಸಿದ್ದಾರೆ. ಈ ಬಾರಿ ಮತದಾರ ತಕ್ಕ ಬುದ್ಧಿ ಕಲಿಸಲಿದ್ದಾರೆ ಎಂದು ತಿಳಿಸಿದರು.

ಈ ಕುಟುಂಬದಲ್ಲಿ ಹಣ ಇದೆ. ಭ್ರಷ್ಟಾಚಾರದಿಂದ ಮಾಡಿದ ಹಣವೂ ಇದೆ. ದುಡ್ಡಿನ ಬಲದಿಂದ ಪ್ರಜಾಪ್ರಭುತ್ವವನ್ನು ನಿರ್ನಾಮ ಮಾಡಲು ಹೊರಟಿದ್ದಾರೆ. ಇದನ್ನು ಜನ ಬಿಡಲ್ಲ. ಅವರು ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್‍ನಲ್ಲಿ ಭ್ರಷ್ಟಾಚಾರ, ದುರಾಡಳಿತ ಸರ್ವೇ ಸಾಮಾನ್ಯವಾಗಿದೆ. ಕುಟುಂಬ ರಾಜಕಾರಣ, ಓಲೈಕೆ ರಾಜಕಾರಣ ಪರಾಕಾಷ್ಟೆ ತಲುಪಿದೆ. ದಾವಣಗೆರೆಯಲ್ಲಿ ಅಭಿವೃದ್ಧಿ ಏನೂ ಆಗಿಲ್ಲ. ಸ್ಮಾರ್ಟ್ ಸಿಟಿ ಯೋಜನೆ ಜಿ.ಎಂ.ಸಿದ್ದೇಶ್ವರ ಅವರು ಸಂಸದರಾಗಿದ್ದಾಗ ಜಾರಿಯಾಗಿದ್ದು. ಅದು ಬಿಟ್ಟರೆ ಬೇರೆ ಏನೂ ಆಗಿಲ್ಲ. ಒಂದೇ ಕುಟುಂಬದವರು ಉದ್ಯೋಗ ಬೆಳೆಸಲು, ಅಧಿಕಾರ ಕೇಂದ್ರೀಕರಣ ಮಾಡಲು ಮುಂದಾಗಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದರು.

ದೇಶದಲ್ಲಿ ಎಲ್ಲಾ ಕಡೆ ಕಾಂಗ್ರೆಸ್ ಹೀನಾಯ ಸ್ಥಿತಿಯಲ್ಲಿದೆ. ದೇಶ ಸದ್ಯದಲ್ಲೇ ಕಾಂಗ್ರೆಸ್ ಮುಕ್ತವಾಗಲಿದೆ. ಕ್ಷೇತ್ರ ವಿಂಗಡಣೆ ಬಗ್ಗೆ ಮುಖ್ಯಮಂತ್ರಿಗಳು ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ದಕ್ಷಿಣ ಮತ್ತು ಉತ್ತರ ಅನ್ನೋ ರೀತಿ ಮಾತಾಡ್ತ ಇದ್ದಾರೆ. ದೇಶವನ್ನು ಆಳಿದವರು ಈಗ ದೇಶವನ್ನೇ ಒಡೆಯಲು ಹೋಗ್ತಿದ್ದಾರೆ. ಜನರನ್ನು ನೀತಿಗಳ ಮೂಲಕ, ಅಭಿವೃದ್ಧಿ ಕಾರ್ಯದ ಮೂಲಕ ಬದಲಾಯಿಸಬೇಕು. ಅದು ಬಿಟ್ಟು ಹೀಗೆ ದೇಶ ಒಡೆಯುವ ಮೂಲಕ ಅಲ್ಲ ಎಂದು ಹೇಳಿದರು.

ಕಾಂಗ್ರೆಸ್‍ಗೆ ಕರ್ನಾಟಕದಲ್ಲಿ ಅವಕಾಶ ನೀಡಿದರು. ಆದರೆ ಏನು ಮಾಡಿದ್ರಿ. ಗ್ಯಾರಂಟಿಗಳನ್ನೂ ಸರಿಯಾಗಿ ಜಾರಿ ಮಾಡಲಿಲ್ಲ. ಒಂದು ಕಾಳು ಅಕ್ಕಿ ಅನ್ನಭಾಗ್ಯದಲ್ಲಿ ನೀಡಲಿಲ್ಲ. ಅಕ್ಕಿ ಕೇಂದ್ರ ಕೊಟ್ಟಿದ್ದು ಎಂದರು.

ಗ್ಯಾಸ್ ಪೂರೈಕೆಗೆ ಯುದ್ಧದಿಂದ ಸಮಸ್ಯೆಯಾಗಿದೆ. ಆದರೆ ಆ ಸಮಸ್ಯೆಯನ್ನು ಕೇಂದ್ರ ಸರ್ಕಾರ ಸಮರ್ಥವಾಗಿ ನಿಭಾಯಿಸಿದೆ. ಗೃಹ ಬಳಕೆ ಗ್ಯಾಸ್‍ಗೆ ಸಮಸ್ಯೆಯಾಗಿಲ್ಲ. ಪೆಟ್ರೋಲ್ ಎರಡು ದಿನದಲ್ಲಿ ಸಿಗಲ್ಲ ಅಂತ ರಾಹುಲ್ ಗಾಂಧಿ ಅವರು ಹೇಳಿದ್ದರು.
ಈಗಲೂ ಎಲ್ಲೂ ಪೆಟ್ರೋಲ್ ಸಮಸ್ಯೆ ಆಗಿಲ್ಲ. ನಮ್ಮಲ್ಲಿ ಸಾಕಷ್ಟು ಸಂಗ್ರಹ ಇದೆ. ನಾವು ಮೊದಲೇ ಯೋಜನೆ ಮಾಡಿದ್ರಿಂದ ಸಮಸ್ಯೆ ಆಗಿಲ್ಲ. ಆದರೆ ಎಲ್‍ಪಿಜಿ ಕೊರತೆ ಆಗಿದೆ. ಅದಕ್ಕೂ ಪರಿಹಾರ ಕಂಡುಕೊಳ್ಳಲಾಗುವುದು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಮಾಜಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರ, ಮಾಜಿ ಶಾಸಕ ಹೆಚ್. ಪಿ. ರಾಜೇಶ್, ಶಿವನಗೌಡ ನಾಯಕ್, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್ ನಾಗಪ್ಪ, ಜಿ. ಎಸ್. ಅನಿತ್ ಮತ್ತಿತರರು ಹಾಜರಿದ್ದರು.

Share

Leave a comment

Leave a Reply

Your email address will not be published. Required fields are marked *