Site icon Kannada News-suddikshana

ಪೌರಕಾರ್ಮಿಕರ ಮನೆಗೆ ಭೇಟಿ ನೀಡಿ ಸಮಸ್ಯೆಗಳ ಆಲಿಸಿದ ಡಾ. ಪ್ರಭಾ ಮಲ್ಲಿಕಾರ್ಜುನ್: ಆರೋಗ್ಯ ಶಿಬಿರಕ್ಕೆ ಉತ್ತಮ ರೆಸ್ಪಾನ್ಸ್

SUDDIKSHANA KANNADA NEWS/ DAVANAGERE/ DATE:15-02-2024

ದಾವಣಗೆರೆ: ಎಸ್. ಎಸ್. ಕೇರ್.ಟ್ರಸ್ಟ್ ವತಿಯಿಂದ ನಗರದ ಪಾಲಿಕೆ ವ್ಯಾಪ್ತಿಯ ಬಡಾವಣೆಗಳಲ್ಲಿ ಆರೋಗ್ಯ ಶಿಬಿರ ನಡೆಸಲಾಗುತ್ತಿದೆ. ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಪೌರಕಾರ್ಮಿಕರ ಬಡಾವಣೆಯಲ್ಲಿ ಎಸ್.ಎಸ್.ಕೇರ್ ಟ್ರಸ್ಟ್ ನ ಅಡಿಯಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಡಾ. ಪ್ರಭಾ ಮಲ್ಲಿಕಾರ್ಜುನ್ ಭಾಗವಹಿಸಿ, ಪೌರಕಾರ್ಮಿಕರಿಗೆ ಆರೋಗ್ಯದ ಬಗ್ಗೆ ಗಮನಹರಿಸಲು ಸೂಚಿಸಿದರು. ಬಾಪೂಜಿ ಆರೋಗ್ಯ ಕಾರ್ಡ್ ಅನ್ನು ಇದೇ ವೇಳೆ ವಿತರಿಸಿದರು.

ಪೌರಕಾರ್ಮಿಕರ ಮನೆಗೆ ಭೇಟಿ ನೀಡಿದರು. ನೂತನ ಬಡಾವಣೆಯಲ್ಲಿರುವ ಮೂಲಭೂತ ಸೌಕರ್ಯಗಳ ಬಗ್ಗೆ ಮಾಹಿತಿ ಪಡೆದರು. ಏನೇ ಸಮಸ್ಯೆಗಳಿದ್ದರೂ ಗಮನಕ್ಕೆ ತರುವಂತೆ ಸೂಚನೆ ನೀಡಿದರು.

ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಬಿಪಿ, ಶುಗರ್, ಕ್ಯಾನ್ಸರ್ ಸಂಬಂಧಿತ ಕಾಯಿಲೆಗಳ ಬಗ್ಗೆ ಎಚ್ಚರ ವಹಿಸಿ. ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಿ. ಯಾವುದೇ ಕಾರಣಕ್ಕೂ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಬೇಡಿ. ಕ್ಯಾನ್ಸರ್ ಬಗ್ಗೆ ಯಾರೂ ನಿಷ್ಕಾಳಜಿ ತೋರಬೇಡಿ. ಈಗಲೇ ಹೋಗಿ ತಪಾಸಣೆ ಮಾಡಿಸಿಕೊಳ್ಳಿ. ಆರ್ಥಿಕ ಸಮಸ್ಯೆ ಇದ್ದರೆ ನನ್ನ ಗಮನಕ್ಕೆ ತನ್ನಿ. ಎಲ್ಲಾ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದರು.

ಪೌರಕಾರ್ಮಿಕರ ಬಡಾವಣೆಯಲ್ಲಿ ಏನೇ ಸಮಸ್ಯೆಗಳಿದ್ದರೂ ಪರಿಹರಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಸಚಿವರು ಹಾಗೂ ಶಾಸಕರ ಗಮನಕ್ಕೆ ತರಲಾಗುವುದು ಎಂದು ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತೆ ರೇಣುಕಾ, ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಜಗದೀಶ್, ಪಾಲಿಕೆ ಸದಸ್ಯ ಜಿ.ಡಿ ಪ್ರಕಾಶ್ ಹಾಗೂ ಪಕ್ಷದ ಯುವ ಮುಖಂಡರಾದ ಸಾಗರ್ ಎಲ್.ಎಂ.ಹೆಚ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Exit mobile version