Site icon Kannada News-suddikshana

ಇಲಾಖೆಗಳ ನಡುವೆ ಲೋಪ ಸರಿಪಡಿಸಿಕೊಂಡರೆ ಪ್ರಕರಣ ತ್ವರಿತ ವಿಲೇವಾರಿ ಸಾಧ್ಯ: ನ್ಯಾ. ಮಹಾವೀರ ಕರೆಣ್ಣನವರ

SUDDIKSHANA KANNADA NEWS/ DAVANAGERE/ DATE:01-09-2024

ದಾವಣಗೆರೆ: ಜಿಲ್ಲಾ ಪೊಲೀಸ್ ಕಚೇರಿಯ ಪೊಲೀಸ್ ಸಭಾಂಗಣದಲ್ಲಿ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅಧ್ಯಕ್ಷತೆಯಲ್ಲಿ ನ್ಯಾಯಾಂಗ ಇಲಾಖೆ, ಅಭಿಯೋಜನಾ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಸಮನ್ವಯ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.

ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹಾವೀರ ಕರೆಣ್ಣವರ ಮಾತನಾಡಿ, ಪ್ರಕರಣಗಳ ತ್ವರಿತ ವಿಲೇವಾರಿ ಮಾಡಲು, ಇಲಾಖೆಗಳ ನಡುವೆ ಆಗುವ ಲೋಪಗಳನ್ನು ಸರಿಪಡಿಸಿಕೊಳ್ಳಲು ಇಂದು ಹಮ್ಮಿಕೊಂಡಿರುವ ನ್ಯಾಯಾಂಗ ಇಲಾಖೆ, ಅಭಿಯೋಜನಾ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಸಮನ್ವಯ ಸಭೆಯು ತುಂಬಾ ಉಪಯುಕ್ತವಾಗಿದೆ ಹಾಗೂ ತುಂಬಾ ಅವಶ್ಯಕವಾಗಿದೆ ಎಂದು ತಿಳಿಸಿದರು.

ಸಭೆಗೆ ಮುಖ್ಯಅತಿಥಿಗಳಾಗಿ ಆಗಮಿಸಿದ್ದ ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ಮಾತನಾಡಿ, ಈ ಕ್ರಿಮಿನಲ್ ಜಸ್ಟೀಸ್ ಅಡ್ಮಿನಿಸ್ಟ್ರೇಷನ್ ನಲ್ಲಿ ಮೂರು ಇಲಾಖೆಗಳ ಪ್ರಮುಖ ಪಾತ್ರವಿದೆ.
ಮೊದಲನೆದಾಗಿದೆ ಪೊಲೀಸ್, ನಂತರ ಪ್ರಾಸಿಕ್ಯೂಟರ್ಸ್ ಅನಂತರ ನ್ಯಾಯಾಧೀಶರು ಬರುತ್ತಾರೆ. ನಮ್ಮ ಮೇಲೆ ತುಂಬಾ ಜವಾಬ್ದಾರಿ ಇರುತ್ತದೆ ನಾವೇನಾದರೂ ತಪ್ಪು ಮಾಡಿದರೆ ಇದು ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ
ನಮ್ಮಿಂದ ಯಾವುದೇ ತಪ್ಪಾಗಬಾರದು ಎಂದು ತಿಳಿಸಿದರು.

ಸಮನ್ವಯ ಸಭೆಯಲ್ಲಿ ನಾವುಗಳು ಚರ್ಚಿಸುವುದರಿಂದ ನಮ್ಮಲ್ಲಿರುವ ಜ್ಞಾನ ಹೆಚ್ಚುತ್ತದೆ, ಇದರಿಂದ ನಮ್ಮಲ್ಲಿ ಕಾರ್ಯ ದಕ್ಷತೆ ಹೆಚ್ಚುತ್ತದೆ. ಪ್ರಕರಣಗಳ ಶೀಘ್ರ ವಿಲೇವಾರಿ, ಪ್ರಕರಣಗಳ ತನಿಖೆಯಲ್ಲಿ ತನಿಖಾಧಿಕಾರಿಗಳಿಂದ ಆಗುವ ಲೋಪಗಳನ್ನು ಸರಿಪಡಿಸಿಕೊಳ್ಳಲು, ನೊಂದವರಿಗೆ ನ್ಯಾಯ ದೊರಕಿಸಕೊಡುವ ನಿಟ್ಟಿನಲ್ಲಿ ನ್ಯಾಯಾಂಗ ಇಲಾಖೆ, ಅಭಿಯೋಜನಾ ಇಲಾಖೆ ಮತ್ತು ಪೊಲೀಸ್ ಇಲಾಖೆಗಳ ನಡುವೆ ಸಮನ್ವಯತೆ ತುಂಬಾ ಪ್ರಮುಖವಾಗಿದೆ. ಆದ್ದರಿಂದ ಇಂದು ಹಮ್ಮಿಕೊಂಡಿರುವ ಈ ಸಭೆಯಲ್ಲಿ ನ್ಯಾಯಾಂಗ ಇಲಾಖೆ, ಅಭಿಯೋಜನಾ ಇಲಾಖೆ ಮತ್ತು ಪೊಲೀಸ್ ಇಲಾಖೆಗಳ ಅಧಿಕಾರಿಗಳು ತಮ್ಮ ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಉಂಟಾಗುವ ಗೊಂದಲಗಳು, ಲೋಪದೋಷಗಳು, ಕಾನೂನುಗಳ ಪಾಲನೆ ಬಗ್ಗೆ ವಿಸ್ತೃತ ಚರ್ಚೆ ಮಾಡುವ ಮೂಲಕ ಗೊಂದಲಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ. ನೊಂದವರಿಗೆ ಸರಿಯಾದ ನ್ಯಾಯ ದೊರಕಿಸುವ ಹಾಗೂ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಕಾರ್ಯೋನ್ಮುಖವಾಗಲು ಸಾಧ್ಯವಾಗುತ್ತದೆ ಎಂದರು.

ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿದ್ದ ಎಸ್ಪಿ ಉಮಾ ಪ್ರಶಾಂತ್ ಮಾತನಾಡಿ ನ್ಯಾಯಾಂಗ ಇಲಾಖೆ, ಅಭಿಯೋಜನಾ ಇಲಾಖೆ ಮತ್ತು ಪೊಲೀಸ್ ಇಲಾಖೆಗಳ ನಡುವೆ ಸಮನ್ವಯ ಸಭೆ ಹಮ್ಮಿಕೊಂಡಿರುವ ಉದ್ದೇಶ ಈಡೇರಿದಾಗ ಮಾತ್ರ ಸಭೆಗೆ ಮಹತ್ವ ಬರುತ್ತದೆ ಎಂದು ತಿಳಿಸಿದರು.

ಹೊಸ ಹೊಸ ಕಾನೂನುಗಳು ಬಂದಿದ್ದು ಅವುಗಳ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಬೆಕಾಗಿದೆ, ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಎವಿಡೆನ್ಸ್ ಗಳನ್ನು ಹೇಗೆ ಸಂಗ್ರಹಿಸಬೇಕು, ನ್ಯಾಯಾಲಗಳಿಗೆ ಸಲ್ಲಿಸುವ ಬಗ್ಗೆ ಅರಿವು ಇರುವುದು ತುಂಬಾ ಅವಶ್ಯಕವಾಗಿದೆ. ನಾವುಗಳು ಹೆಚ್ಚು ಆಸಕ್ತಿಯಿಂದ ಕೆಲಸ ಮಾಡಿದಾಗ ನೊಂದವರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಸಭೆಯಲ್ಲಿ ಪೊಲೀಸ್ ಅಧಿಕಾರಿಗಳು, ಪ್ರಾಸಿಕ್ಯೂಟರ್ಸ್ ಹಾಗೂ ನ್ಯಾಯಾಧೀಶರುಗಳು ಪ್ರಕರಣಗಳ ಆರಂಭದಿಂದ ಅಂತಿಮ ಘಟ್ಟದ ವರೆಗೂ ಬರುವ ವಿವಿಧ ಹಂತಗಳಲ್ಲಿ ಉಂಟಾಗುವ ಲೋಪದೋಷಗಳ ಬಗ್ಗೆ, ಕಾರ್ಯವ್ಯಾಪ್ತಿ ಬಗ್ಗೆ ವಿಸ್ತೃತವಾಗಿ
ಚರ್ಚಿಸಿದರು.

ಸರ್ಕಾರಿ ಅಭಿಯೋಜಕ ಮಂಜುನಾಥ್ ನಿರೂಪಿಸಿದರು. ಎಎಸ್ಪಿ ಜಿ. ಮಂಜುನಾಥ್ ಸ್ವಾಗತಿಸಿದರು. ಡಿವೈಎಸ್ಪಿ ಬಸವರಾಜ್ ವಂದಿಸಿದರು.

ಸಭೆಯಲ್ಲಿ 1ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮಂಜಪ್ಪ ಹನುಮಂತಪ್ಪ ಅಣ್ಣಯ್ಯನವರ್, ನ್ಯಾಯಾಧೀಶರಾದ ಬಸವರಾಜ್, ಪ್ರವೀಣ್ ಕುಮಾರ್, ಶ್ರೀರಾಮ ನಾರಾಯಣ ಹೆಗಡೆ, ನಿವೇದಿತ, ರೇಷ್ಮಾ ಹೆಚ್.ಕೆ.,ಜಿಲ್ಲೆಯ ಎಲ್ಲಾ ಘನ ನ್ಯಾಯಾಲಯದ ಸರ್ಕಾರಿ ಅಭಿಯೋಜಕರು, ನಗರ ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ, ಸಿಇಎನ್ ಡಿವೈಎಸ್ಪಿ ಪದ್ಮಶ್ರೀ ಗುಂಜಿಕರ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version