Site icon Kannada News-suddikshana

ಲೋಕಸಭೆ ಮಾದರಿಯಲ್ಲಿ ಪರಿಷತ್ ಚುನಾವಣೆ ಎದುರಿಸುತ್ತೇವೆ: ಡಿಕೆಶಿ

ಬೆಂಗಳೂರು: “ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಪಕ್ಷದ ಸಭೆ ಬಳಿಕ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಭಾನುವಾರ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದರೆ ಮೋದಿ ಅವರ ಅವಧಿ ಕೇವಲ ಒಂದು ವರ್ಷ ಮಾತ್ರ ಎಂಬ ಕೇಜ್ರಿವಾಲ್ ಅವರ ಹೇಳಿಕೆಗೆ ಬಿಜೆಪಿ ಟೀಕೆ ಮಾಡಿರುವ ಬಗ್ಗೆ ಕೇಳಿದಾಗ ಅವರು ಉತ್ತರಿಸಿ “ಈ ಬಾರಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರಲಿದ್ದು, ಬಿಜೆಪಿಯವರು ಪ್ರಧಾನಿಯಾಗಲು ಸಾಧ್ಯವಿಲ್ಲ. ದೇಶದಲ್ಲಿ ಕಾಂಗ್ರೆಸ್ ಹಾಗು ಇಂಡಿಯಾ ಮೈತ್ರಿಕೂಟ ಆಡಳಿತ ಮಾಡಲಿದೆ ಎಂಬ ವಿಶ್ವಾಸ ನನ್ನದು” ಎಂದರು.

ಲೋಕಸಭೆ ಮಾದರಿಯಲ್ಲಿ ಪರಿಷತ್ ಚುನಾವಣೆ ಎದುರಿಸುತ್ತೇವೆ:

ಪರಿಷತ್ ಚುನಾವಣೆ ಪೂರ್ವಭಾವಿ ಸಭೆ ಬಗ್ಗೆ ಕೇಳಿದಾಗ, “ಶಿಕ್ಷಕರ ಹಾಗು ಪದವೀಧರ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ವಿಚಾರವಾಗಿ ನಮ್ಮ ಪಕ್ಷದ ನಾಯಕರು ಹಾಗು ಪದಾಧಿಕಾರಿಗಳ ಜತೆ ಚರ್ಚೆ ಮಾಡಿದ್ದೇವೆ.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಂದ ಹಿಡಿದು ಎಲ್ಲಾ ಮುಖಂಡರು ಸೇರಿ ಈ ಚುನಾವಣೆ ಎದುರಿಸಬೇಕು. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ನಿರ್ದೇಶನ ನೀಡಲಾಗಿದೆ. ಇನ್ನು ಪಕ್ಷದ ಅಭ್ಯರ್ಥಿಗಳಿಗೆ ಬಿ ಫಾರಂ ನೀಡಲಾಗಿದೆ” ಎಂದು ತಿಳಿಸಿದರು.

ಲೋಕಸಭೆ ಮಾದರಿಯಲ್ಲೇ ಚುನಾವಣೆ ಮಾಡುತ್ತೀರಾ ಎಂದು ಕೇಳಿದಾಗ, “ಹೌದು, ಲೋಕಸಭೆ ಚುನಾವಣೆ ಮಾದರಿಯಲ್ಲಿ ಈ ಚುನಾವಣೆ ಎದುರಿಸುತ್ತೇವೆ” ಎಂದರು.

ಪರಿಷತ್ ಚುನಾವಣೆಗೂ ಬಿಜೆಪಿ ಹಾಗು ಜೆಡಿಎಸ್ ಮೈತ್ರಿ ಬಗ್ಗೆ ಕೇಳಿದಾಗ, “ಅವರು ಶಾಶ್ವತವಾಗಿ ಮೈತ್ರಿ ಮಾಡಿಕೊಳ್ಳಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಮೈತ್ರಿಯಾದರೂ ಮಾಡಿಕೊಳ್ಳಲಿ, ವಿಲೀನವಾದರೂ ಮಾಡಿಕೊಳ್ಳಲಿ. ಅದು ಅವರ ಪಕ್ಷಗಳ ತೀರ್ಮಾನ. ನಮಗೂ ಅದಕ್ಕೂ ಸಂಬಂಧವಿಲ್ಲ” ಎಂದು ತಿಳಿಸಿದರು.

 

Exit mobile version