Site icon Kannada News-suddikshana

PARIS OLYMPICS 2024: ಶೂಟಿಂಗ್​ನಲ್ಲಿ ಭಾರತಕ್ಕೆ ಒಲಿದ 2ನೇ ಪದಕ

ಪ್ಯಾರಿಸ್: ಒಲಿಂಪಿಕ್ಸ್​ನ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ಸ್ಫರ್ಧೆದಲ್ಲಿ ಭಾರತವು ಕಂಚಿನ ಪದಕ ಗೆದ್ದುಕೊಂಡಿದೆ. ಮೂರನೇ ಸ್ಥಾನಕ್ಕಾಗಿ ನಡೆದ ಈ ಸ್ಪರ್ಧೆಯಲ್ಲಿ ರಿಪಬ್ಲಿಕ್ ಆಫ್ ಕೊರಿಯಾದ ಓಹ್ ಯೆ ಜಿನ್ ಮತ್ತು ಲೀ ವೊನ್ಹೋ ಅವರನ್ನು ಸೋಲಿಸಿ ಮನುಭಾಕರ್ – ಸರಬ್ಜೋತ್ ಸಿಂಗ್ ಜೋಡಿ ಭಾರತಕ್ಕೆ 2ನೇ ಪದಕ ಗೆದ್ದುಕೊಟ್ಟಿದ್ದಾರೆ.

ಸೋಮವಾರ ಫ್ರಾನ್ಸ್‌ನ ಚಟೌರೌಕ್ಸ್‌ನಲ್ಲಿ ನಡೆದ ಅರ್ಹತಾ ಸುತ್ತಿನಲ್ಲಿ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಮೂರನೇ ಸ್ಥಾನಗಳಿಸಿ ಕಂಚಿನ ಪದಕದ ಸ್ಪರ್ಧೆಗೆ ಅರ್ಹತೆಗಿಟ್ಟಿಸಿಕೊಂಡಿದ್ದರು. 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಭಾರತೀಯ ಜೋಡಿ ಒಟ್ಟು 580 ಅಂಕಗಳನ್ನು ಕಲೆಹಾಕಿದ್ದರು.

ರಿಪಬ್ಲಿಕ್ ಆಫ್ ಕೊರಿಯಾದ ಓಹ್ ಯೆ ಜಿನ್ ಮತ್ತು ಲೀ ವೊನ್ಹೋ 579 ಅಂಕಗಳಿಸಿ ನಾಲ್ಕನೇ ಸ್ಥಾನ ಪಡೆದಿದ್ದರು. ಇಲ್ಲಿ 3ನೇ ಮತ್ತು 4ನೇ ಸ್ಥಾನಗಳನ್ನು ಪಡೆದ ಸ್ಪರ್ಧಿಗಳ ನಡುವೆ ಕೇವಲ 1 ಅಂಕಗಳ ವ್ಯತ್ಯಾಸವಿದ್ದಿದ್ದರಿಂದ ಕಂಚಿನ ಪದಕದ ಸ್ಪರ್ಧೆಯಲ್ಲಿ ಉತ್ತಮ ಪೈಪೋಟಿ ಇತ್ತು.ಅದರಂತೆ ಇದೀಗ ಕೊರಿಯನ್ ಜೋಡಿಯನ್ನು ಸೋಲಿಸಿ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಜಯಭೇರಿ ಬಾರಿಸಿದ್ದಾರೆ.

ವಿಶೇಷ ಎಂದರೆ ಈ ಬಾರಿ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಮನು ಭಾಕರ್​ಗೆ ಇದು ಎರಡನೇ ಪದಕ. ಇದಕ್ಕೂ ಮುನ್ನ ಮಹಿಳಾ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಅಲಂಕರಿಸುವ ಮೂಲಕ ಕಂಚಿನ ಪದಕ ಗೆದ್ದಿದ್ದರು. ಈ ಮೂಲಕ ಭಾರತದ ಪದಕದ ಖಾತೆ ತೆರೆದಿದ್ದರು.ಇದೀಗ ಸರಬ್ಜೋತ್ ಸಿಂಗ್ ಜೊತೆಗೂಡಿ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ಸ್ಫರ್ಧೆದಲ್ಲಿ ಕಂಚಿನ ಪದಕ ಗೆಲ್ಲುವಲ್ಲಿ ಮನು ಭಾಕರ್ ಯಶಸ್ವಿಯಾಗಿದ್ದಾರೆ.

Exit mobile version