Site icon Kannada News-suddikshana

ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಅಮಿತ್ ಶಾ: ರಾಜ್ಯ ಕಾಂಗ್ರೆಸ್ ನಾಯಕರ ಆಕ್ರೋಶ

ಬೆಳಗಾವಿ:“ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ನೀಡಿದ ಹೇಳಿಕೆ ಖಂಡನೀಯ. ಇಡೀ ವಿಶ್ವ ಅಂಬೇಡ್ಕರ್ ಬಗ್ಗೆ ಪ್ರಶಂಸೆಯಿಂದ ಮಾತನಾಡುತ್ತದೆ. ಪ್ರಜಾಪ್ರಭುತ್ವಕ್ಕೆ ಸಂವಿಧಾನ ಕೊಡುವ ಮೂಲಕ ದೇಶವನ್ನು ಒಗ್ಗೂಡಿಸಿದವರು ಅಂಬೇಡ್ಕರ್​. ಅವರ ಬಗ್ಗೆ ಲಘುವಾಗಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕ್ಷಮೆ ಕೇಳಬೇಕು. ಹಾಗೂ ಅಮಿತ್ ಶಾ ಅವರು ಅಂಬೇಡ್ಕರ್ ಅವರ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳಬೇಕು” ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಸುವರ್ಣಸೌಧದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಅಂಬೇಡ್ಕರ್ ಬಗ್ಗೆ ಕೇಂದ್ರ ಗೃಹಸಚಿವ ಅಮಿತ್ ಶಾ ಅವಹೇಳನಕಾರಿ ಹೇಳಿಕೆ ಆರೋಪ ವಿಚಾರವಾಗಿ ಮಾತನಾಡಿ, “ನಾನು ಇದನ್ನು ಖಂಡಿಸುತ್ತೇನೆ. ಇದು ಅಂಬೇಡ್ಕರ್ ಅವರ ವ್ಯಕ್ತಿತ್ವದ ಪ್ರಶ್ನೆ. ಅಂಬೇಡ್ಕರ್ ಅವರು ಗಾಂಧೀಜಿಯವರ ಜೊತೆಗೂ ಭಿನ್ನಾಭಿಪ್ರಾಯ ಇಟ್ಟುಕೊಂಡಿದ್ದರು. ಆದರೆ, ಇವರು ಅಂಬೇಡ್ಕರ್​ ಅವರ ವ್ಯಕ್ತಿತ್ವದ ಬಗ್ಗೆ ಮಾತಾಡಿದ್ದು, ನಮಗೆ ನೋವಾಗಿದೆ. ಹೀಗೆ ಅವಹೇಳನಕಾರಿಯಾಗಿ ಮಾತನಾಡುವುದು ಸರಿಯಲ್ಲ. ಅಂಬೇಡ್ಕರ್ ಕೂಡಾ ನಮಗೆ ದೇವರೇ. ಅವರನ್ನು ಪೂಜ್ಯ ಭಾವನೆಯಿಂದ ನೋಡುವ ಕೋಟ್ಯಂತರ ಜನ ಇದ್ದಾರೆ. ಅಮೆರಿಕ, ಯು.ಕೆಯಲ್ಲಿ ಅವರ ಪ್ರತಿಮೆ ಇಟ್ಟಿದಾರೆ” ಎಂದು ಅಮಿತ್ ಶಾ ಅವರಿಗೆ ಕಿವಿಮಾತು ಹೇಳಿದರು.
ಗುಪ್ತ ಕಾರ್ಯಸೂಚಿ ತರಲು ಅಮಿತ್​ ಶಾ ಈ ರೀತಿ ಹೇಳಿದ್ದಾರೆ- ಬಿಕೆ ಹರಿಪ್ರಸಾದ್:”ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬರುವ 2025ಕ್ಕೆ ನೂರು ವರ್ಷ ಪೂರೈಸುತ್ತಿದೆ. ಆರ್​ಎಸ್​ಎಸ್​ನವರ ಗುಪ್ತ ಕಾರ್ಯಸೂಚಿ‌ ಅನುಷ್ಠಾನಕ್ಕೆ ತರುವುದಕ್ಕೆ ಸದನದಲ್ಲಿ ಕೇಂದ್ರ ಸಚಿವ ಅಮಿತ್ ಶಾ, ಅಂಬೇಡ್ಕರ್​ ಅವರ ಬಗ್ಗೆ ಈ ರೀತಿ ಹೇಳಿಕೆ ನೀಡಿದ್ದಾರೆ. ಕೇಂದ್ರ ಗೃಹ ಮಂತ್ರಿಗಳು ನೀಡಿರುವ ಹೇಳಿಕೆ ಬಾಯಿ ತಪ್ಪಿ ನೀಡಿರುವ ಹೇಳಿಕೆ ಅಲ್ಲ” ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಸಂಘ ಪರಿವಾರದ ಮೇಲೆ ಕಿಡಿಕಾರಿದರು.

ಸುವರ್ಣಸೌಧದಲ್ಲಿ ಮಾದ್ಯಮಗಳ ಜೊತೆ ಮಾತನಾಡಿ, “ಹಿಂದೆ ಅವರ ಲೀಡರ್ ಗೋಳ್ವಾಳ್ಕರ್, ನಾವು ಬೇಕಾದರೆ ಬ್ರಿಟಿಷರ ಗುಲಾಮರಾಗಿರುತ್ತೇವೆ. ದಲಿತ, ಹಿಂದುಳಿದ, ಮುಸ್ಲಿಂಮರಿಗೆ ಸಮಾನ ಅಧಿಕಾರ ಕೊಡುವುದಾದರೆ ನಮಗೆ ಸ್ವಾತಂತ್ರ್ಯ ಬೇಡ ಅಂದಿದ್ದರು. ಈಗ ಅಮಿತ್ ಶಾ ಅವರು ಇಂಥ ಹೇಳಿಕೆ ನೀಡುವ ಮೂಲಕ ಜನ ಸಾಮಾನ್ಯರ ಪ್ರತಿಕ್ರಿಯೆ ಏನು ಬರುತ್ತದೆ ನೋಡಿ ಮುಂದುವರೆಯಲು ನಿರ್ಧರಿಸಿದ್ದಾರೆ. ಸಂವಿಧಾನದ ಬಗ್ಗೆ ಇವರಿಗೆ ಕಿಂಚಿತ್ತೂ ಗೌರವವಿಲ್ಲ. ಓಲೈಕೆ ತುಷ್ಟೀಕರಣ ಮಾಡುವುದು ಇವರ ಫ್ಯಾಷನ್ ಆಗಿದೆ” ಎಂದು ಬಿಜೆಪಿ ಪಕ್ಷದ ಮೇಲೆ ಅಸಮಾಧಾನ ವ್ಯಕ್ತಪಡಿಸಿದರು.

ಅಮಿತ್ ಷಾ ಹೇಳಿಕೆ ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ – ಡಿಕೆಶಿ:”ದೇವರ ಹೆಸರು ಹೇಳಿದರೆ ಮುಕ್ತಿ ಸಿಗುತ್ತದೆ. ಅಂಬೇಡ್ಕರ್ ಹೆಸರು ಹೇಳಿದರೆ ಮುಕ್ತಿ ಸಿಗಲ್ಲ ಎಂದರೆ, ಇದು ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಮಾಡಿದ ಅವಮಾನ” ಎಂದು ಕೇಂದ್ರ ಸಚಿವ ಅಮಿತ್ ಷಾ ವಿರುದ್ಧ ಡಿಸಿಎಂ ಡಿ.ಕೆ. ಶಿವಕುಮಾರ್​ ವಾಗ್ದಾಳಿ ನಡೆಸಿದರು‌.
ಸಂವಿಧಾನದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ವಿಚಾರಕ್ಕೆ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಅವರು, “ಲೋಕಸಭೆ ಅಧಿವೇಶನದ ಕೊನೆಯ ದಿನ ಅಮಿತಾ ಶಾ ಹೇಳಿಕೆ ನಮಗೆಲ್ಲ ದಿಗ್ಭ್ರಮೆ ಉಂಟು ಮಾಡಿದೆ. ಪ್ರಜಾಪ್ರಭುತ್ವ ಸಂವಿಧಾನದಿಂದ ಎಲ್ಲ ಸಮಾಜಕ್ಕೂ ರಕ್ಷಣೆ ಸಿಕ್ಕಿರೋದು ಅಂಬೇಡ್ಕರ್ ಅವರಿಂದ” ಎಂದು ತಿರುಗೇಟು‌ ಕೊಟ್ಟರು.
“ನಾನು ಒಬ್ಬ ಹಿಂದೂ. ದೇವರ ಮೇಲೆ ನಂಬಿಕೆ ಇಡೋಣ. ಕಾಯಕವೇ ಕೈಲಾಸ ಅಂತ ಬಸವಣ್ಣನವರು ನಮಗೆ ಹೇಳಿಕೊಟ್ಟಿದ್ದಾರೆ. ಅಂಬೇಡ್ಕರ್ ಮತ್ತು ಸಂವಿಧಾನದ ಹೆಸರನ್ನು ನಾವು ಪ್ರತಿಪಾದನೆ ಮಾಡೋದು ಬಿಟ್ಟರೆ ಇನ್ಯಾರು ಮಾಡ್ತಾರೆ? ಇದಕ್ಕಾಗಿಯೇ ಅಂಬೇಡ್ಕರ್​ಗೆ ಎಲ್ಲರೂ ಗೌರವ ಕೊಡುತ್ತಾರೆ. ಅಂಬೇಡ್ಕರ್ ಹೆಸರು ಹೇಳದೇ ದೇವರ ಹೆಸರು ಹೇಳುತ್ತಾರೆ. ಹಾಗಾಗಿ, ಈ ವಿಚಾರದಲ್ಲಿ ಬಹಳ ಚರ್ಚೆ‌ ಮಾಡುವ ಅವಶ್ಯಕತೆ ಇದೆ. ಮುಂದೆ ನೋಡೋಣ” ಎಂದು ಹೇಳಿದರು‌.

Exit mobile version