Home ಉದ್ಯೋಗ ವಾರ್ತೆ 371 (ಜೆ) ಭಾಗದ ಖಾಲಿ ಹುದ್ದೆಗಳ ಭರ್ತಿಗೆ ಆಡಳಿತ ಇಲಾಖೆಗಳ ಹಂತದಲ್ಲಿಯೇ ಅವಕಾಶ: ಸಿದ್ದರಾಮಯ್ಯ
ಉದ್ಯೋಗ ವಾರ್ತೆದಾವಣಗೆರೆನವದೆಹಲಿಬೆಂಗಳೂರು

371 (ಜೆ) ಭಾಗದ ಖಾಲಿ ಹುದ್ದೆಗಳ ಭರ್ತಿಗೆ ಆಡಳಿತ ಇಲಾಖೆಗಳ ಹಂತದಲ್ಲಿಯೇ ಅವಕಾಶ: ಸಿದ್ದರಾಮಯ್ಯ

Share
Share

ಬೆಳಗಾವಿ ಸುವರ್ಣವಿಧಾನಸೌಧ: ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳಲ್ಲಿ ಮಂಜೂರಾದ ಹುದ್ದೆಗಳಲ್ಲಿ ಶೇ.80ರವರೆಗೆ ಹುದ್ದೆಗಳ ನೇಮಕಾತಿಯನ್ನು ಆಡಳಿತ ಇಲಾಖೆಗಳ ಹಂತದಲ್ಲಿಯೇ ನಿಯಮಾನುಸಾರ ಭರ್ತಿ ಮಾಡಿಕೊಳ್ಳಲು ಇಲಾಖಾ ಕಾರ್ಯದರ್ಶಿಗಳಿಗೆ ತಿಳಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ಮೇಲ್ಮನೆಯಲ್ಲಿ ಡಿ.11ರಂದು ಪ್ರಶ್ನೋತ್ತರ ವೇಳೆ ಸದಸ್ಯರಾದ ಡಾ.ಧನಂಜಯ ಸರ್ಜಿ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರದ (ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳು 1977ರ ನಿಯಮ 42ರಲ್ಲಿ ರಾಜ್ಯದ ಹಣಕಾಸಿನ ಮೇಲೆ ಪರಿಣಾಮ ಉಂಟು ಮಾಡುವಂತಹ ವಿಶೇಷವಾಗಿ ಯಾವುದೇ ಹುದ್ದೆಯನ್ನು ಸಾರ್ವಜನಿಕ ಹುದ್ದೆಗೆ ಸೇರಿಸುವ ಅಥವಾ ಸಾರ್ವಜನಿಕ ಸೇವೆಯಿಂದ ರದ್ದುಪಡಿಸುವ ಅಥವಾ ಯಾವುದೇ ಹುದ್ದೆಯ ಅವಧಿಯನ್ನು ಅಥವಾ ಉಪಲಬ್ದಗಳನ್ನು ವ್ಯತ್ಯಾಸ ಮಾಡುವ ಪ್ರಸ್ತಾವನೆಗಳಿಗೆ ಆರ್ಥಿಕ ಇಲಾಖೆಯ ಅನುಮತಿ ಪಡೆಯಲು ತಿಳಿಸಲಾಗಿರುತ್ತದೆ ಎಂದರು.

ಆದ್ದರಿಂದ ಹುದ್ದೆಗಳ ಸೃಜನ ಅಥವಾ ಹುದ್ದೆಗಳ ಸಂಖ್ಯೆಯನ್ನು ಒಳಗೊಂಡ ಪ್ರಸ್ತಾವನೆ, ಯೋಜನೆಗಳ ಕುರಿತು ಆದೇಶಗಳನ್ನು ಹೊರಡಿಸುವ ಪೂರ್ವದಲ್ಲಿ ಆರ್ಥಿಕ ಇಲಾಖೆಯ ಸಹಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ ಎಂದು ತಿಳಿಸಿದರು.

ಆರ್ಥಿಕ ಇಲಾಖೆಯ ಪೂರ್ವಾನುಮತಿಯನ್ನು ಪಡೆಯದೇ ಆಡಳಿತ ಇಲಾಖೆಗಳು ಹುದ್ದೆಗಳನ್ನು ಭರ್ತಿ ಮಾಡಿಕೊಂಡಲ್ಲಿ ಈ ಹುದ್ದೆಗಳಿಗೆ ನೀಡಬೇಕಾದ ವೇತನಕ್ಕಾಗಿ ಆಯವ್ಯಯದಲ್ಲಿ ಸೂಕ್ತ ಅನುದಾನವನ್ನು ಕಲ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಜೊತೆಗೆ ಆರ್ಥಿಕ ಇಲಾಖೆಯು ಅಗತ್ಯತೆಗೆ ಅನುಗುಣವಾಗಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಸಹಮತಿಸುತ್ತದೆ. ಜೊತೆಗೆ, ಕೆಲವು ಇಲಾಖೆಗಳ ಕಾರ್ಯವೈಖರಿ ಅಥವಾ ಕಾರ್ಯ ಪದ್ಧತಿಗಳಲ್ಲಿ ಬದಲಾವಣೆ ಉಂಟಾದಾಗ, ಸಿಬ್ಬಂದಿಯ ಅವಶ್ಯಕತೆ ಹಾಗೂ ಸಂಖ್ಯೆಯ ಬಗ್ಗೆ ಪರಾಮರ್ಶಿಸಬೇಕಾಗುತ್ತದೆ. ಈ ಕಾರ್ಯಗಳನ್ನು ಆರ್ಥಿಕ ಇಲಾಖೆ ನಿರ್ವಹಿಸುತ್ತದೆ
ಎಂದರು.

ಒಂದು ವೇಳೆ ಆಡಳಿತ ಇಲಾಖೆಗಳು ಆರ್ಥಿಕ ಇಲಾಖೆಯ ಸಹಮತಿಯನ್ನು ಪಡೆಯದೇ ತಮ್ಮ ಹಂತದಲ್ಲಿಯೇ ಹುದ್ದೆಗಳನ್ನು ಭರ್ತಿ ಮಾಡಿಕೊಂಡಲ್ಲಿ ಆಯವ್ಯಯದಲ್ಲಿ ಸೂಕ್ತ ಅನುದಾನದ ಕೊರತೆ ಉಂಟಾಗಿ ಸಿಬ್ಬಂದಿಯ ವೇತನ ಪಾವತಿಗೆ ತೊಂದರೆಯಾಗುತ್ತದೆ. ಆರ್ಥಿಕ ಇಲಾಖೆಯ ಅನುಮತಿ ಪಡೆದು ಸೇವೆ ಪಡೆದ ಇಲಾಖೆಗಳ ಸಿಬ್ಬಂದಿಯ ವೇತನ ಪಾವತಿಸಲು ಆಯವ್ಯಯದಲ್ಲಿ ಅಗತ್ಯ ಅನುದಾನ ಕಲ್ಪಿಸಲಾಗುತ್ತದೆ. ಆದುದರಿಂದ ವೇತನ ಪಾವತಿಗೆ ತೊಂದರೆ ಹಾಗೂ ವಿಳಂಬ ಆಗುವುದಿಲ್ಲ ಎಂದು ವಿವರಿಸಿದರು.

ಆದಾಗ್ಯೂ ಮುಂಬಡ್ತಿ ಮೂಲಕ ಭರ್ತಿ ಮಾಡಿಕೊಳ್ಳಬೇಕಾದ ಹುದ್ದೆಗಳು, ಅನುಕಂಪದ ಆಧಾರದ ನೇಮಕಾತಿಗಳು, ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳಲ್ಲಿ ಮಂಜೂರಾದ ಹುದ್ದೆಗಳಲ್ಲಿ ಶೇ.80ರವರೆಗೆ ಹುದ್ದೆಗಳ ನೇಮಕಾತಿ, ಆರ್ಥಿಕ ಇಲಾಖೆಯಿಂದ ಅನುಮೋದಿಸಲ್ಪಟ್ಟ ಹುದ್ದೆಗಳಲ್ಲಿ ಬ್ಯಾಕ್‌ಲಾಗ್ ಹುದ್ದೆಗಳೆಂದು ಗುರುತಿಸಿದ ಹುದ್ದೆಗಳ ನೇಮಕಾತಿಯನ್ನು ಆಡಳಿತ ಇಲಾಖೆಗಳ ಹಂತದಲ್ಲಿಯೇ ನಿಯಮಾನುಸಾರ ಭರ್ತಿ ಮಾಡಿಕೊಳ್ಳಲು ಇಲಾಖಾ ಕಾರ್ಯದರ್ಶಿಗಳಿಗೆ ತಿಳಿಸಲಾಗಿದೆ ಎಂದು ಮುಖ್ಯಮಂತ್ರಿಗಳ ಸ್ಪಷ್ಟಪಡಿಸಿದರು.

Share

Leave a comment

Leave a Reply

Your email address will not be published. Required fields are marked *