ದಾವಣಗೆರೆ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯನ್ನೇ ಕೊಲೆ ಮಾಡಲು ಯತ್ನಿಸಿ ಕಳೆದ 14 ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದ ಎಲ್‌ಪಿಆರ್ (LPR) ಪ್ರಕರಣದ ಆರೋಪಿಯನ್ನು ನ್ಯಾಮತಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಯ ವಿವರ:
ಕಳೆದ ದಿನಾಂಕ 06-01-2012 ರಂದು ರಾತ್ರಿ ವೇಳೆ ನ್ಯಾಮತಿ ತಾಲ್ಲೂಕಿನ ಚೀ.ಕಡದಕಟ್ಟೆ ಗ್ರಾಮದ ನಿವಾಸಿ ಹಬೀಬುಲ್ಲಾ ಎಂಬಾತನು ತನ್ನ ಪತ್ನಿ ಅಲ್ಮಾಸ್ ಭಾನು ಅವರನ್ನು ಕೊಲೆ ಮಾಡಲು ಯತ್ನಿಸಿದ್ದನು. ಈ ಕುರಿತು ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ: 08/2012 ರಂತೆ ಐಪಿಸಿ ಕಲಂ 323, 498(ಎ), 307, 436 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಲಾಗಿತ್ತು.
ಎಲ್‌ಪಿಆರ್ ಪ್ರಕರಣ:
ಸದರಿ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದಾಗ (CC No. 506/2012), ಆರೋಪಿ ಹಬೀಬುಲ್ಲಾ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದನು. ಈ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಲಯವು ಇದನ್ನು ಎಲ್‌ಪಿಆರ್ ಪ್ರಕರಣ (LPR No: 02/2013) ಎಂದು ಆದೇಶಿಸಿತ್ತು.
ಪೊಲೀಸ್ ಕಾರ್ಯಾಚರಣೆ:
ಆರೋಪಿಯ ಪತ್ತೆಗಾಗಿ ನ್ಯಾಮತಿ ಪೊಲೀಸ್ ನಿರೀಕ್ಷಕ ಶ್ರೀ ರವಿ ಎನ್.ಎಸ್ ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ತಂಡವು, ದಿನಾಂಕ 07/03/2026 ರಂದು ಶಿವಮೊಗ್ಗ ನಗರದ ಚಿಕ್ಕಲ್ ಬಳಿ 55 ವರ್ಷದ ಹಬೀಬುಲ್ಲಾನನ್ನು ಬಂಧಿಸಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ.
ತಂಡಕ್ಕೆ ಶ್ಲಾಘನೆ: ಸುಮಾರು ಒಂದೂವರೆ ದಶಕದ ಕಾಲ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆಹಚ್ಚಿದ ನ್ಯಾಮತಿ ಸಿಪಿಐ ರವಿ ಎನ್.ಎಸ್, ಪಿಎಸ್ಐ ಹೊಳಬಸಪ್ಪ ಹೋಳಿ, ಸಿಬ್ಬಂದಿಗಳಾದ ಶಿವರಾಜ್ ಮತ್ತು ಪಂಪಾನಾಯ್ಕ ಅವರ ಕಾರ್ಯವೈಖರಿಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.





Leave a comment