ದಾವಣಗೆರೆ: ಆನ್ ಲೈನ್ ಗೇಮ್ ಆಡಿ ಮಾಡಿಕೊಂಡಿದ್ದ ಸಾಲ ತೀರಿಸಲು ಒಂಟಿ ವೃದ್ಧೆಯನ್ನು ಕತ್ತು ಹಿಸುಕಿ ಕೊಲೆ ಮಾಡಿ, ಆಭರಣ ದೋಚಿದ್ದ ಪ್ರಕರಣವನ್ನು ನ್ಯಾಮತಿ ಪೊಲೀಸರು ಭೇದಿಸಿದ್ದಾರೆ.
ಪ್ರಕರಣದ ಆರೋಪಿ ಅಭಿಷೇಕ್ ಕೆ. (23) ಎಂಬಾತನನ್ನು ಬಂಧಿಸಿರುವ ಪೊಲೀಸರು, ಆತನಿಂದ ಸುಮಾರು 8,44,000 ರೂ. ಮೌಲ್ಯದ 67.1 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಘಟನೆಯ ವಿವರ:
ಫೆಬ್ರವರಿ 2 ರಂದು ಆರುಂಡಿ ಗ್ರಾಮದ ಕಮಲಮ್ಮ (64) ಎಂಬುವವರನ್ನು ಅವರ ಮನೆಯಲ್ಲೇ ಕೊಲೆ ಮಾಡಲಾಗಿತ್ತು. ದೇವರ ಪಲ್ಲಕ್ಕಿ ಉತ್ಸವದ ಸಂದರ್ಭದಲ್ಲಿ ಹೊಂಚು ಹಾಕಿದ್ದ ಆರೋಪಿಯು, ವೃದ್ಧೆ ಮಲಗಿದ ನಂತರ ಮನೆಯ ಹಿಂಬಾಗಿಲಿನಿಂದ ನುಗ್ಗಿ ಕತ್ತು ಹಿಸುಕಿ ಕೊಲೆ ಮಾಡಿದ್ದ. ಬಳಿಕ ಮೈಮೇಲಿದ್ದ ಸರ, ಬಳೆ ಮತ್ತು ಓಲೆಗಳನ್ನು ದೋಚಿ ಶಿಕಾರಿಪುರದ ವಿವಿಧ ಬ್ಯಾಂಕುಗಳಲ್ಲಿ ಅಡವಿಟ್ಟಿದ್ದನು.
ತನಿಖೆ ಮತ್ತು ಬಂಧನ:
ಜಿಲ್ಲಾ ಪೊಲೀಸ್ ಅಧೀಕ್ಷಕ ಶೇಖರ್ ಹೆಚ್.ಟಿ. ಅವರ ಮಾರ್ಗದರ್ಶನದಲ್ಲಿ, ನ್ಯಾಮತಿ ಸಿಪಿಐ ರವಿ ಎನ್.ಎಸ್. ಮತ್ತು ಪಿಎಸ್ಐ ಹೊಳಬಸಪ್ಪ ಹೋಳಿ ನೇತೃತ್ವದ ತಂಡವು ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ತನಿಖೆ ವೇಳೆ ಆರೋಪಿಯು ಆನ್ಲೈನ್ ಗೇಮ್‌ನಿಂದಾಗಿ ಸಾಲ ಮಾಡಿಕೊಂಡಿದ್ದೇ ಈ ಕೃತ್ಯಕ್ಕೆ ಪ್ರೇರಣೆ ಎಂದು ಒಪ್ಪಿಕೊಂಡಿದ್ದಾನೆ.





Leave a comment