Home ದಾವಣಗೆರೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ “ಇಂಡಿಪೆಂಡೆಂಟ್” ಆಗಿ ಕಣಕ್ಕಿಳಿಯಲ್ಲ, “ಮತ್ತೇ…”?: ಜಿ. ಬಿ. ವಿನಯ್ ಕುಮಾರ್ ಸ್ಪೋಟಕ ಸಂದರ್ಶನ
ದಾವಣಗೆರೆನವದೆಹಲಿಬೆಂಗಳೂರು

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ “ಇಂಡಿಪೆಂಡೆಂಟ್” ಆಗಿ ಕಣಕ್ಕಿಳಿಯಲ್ಲ, “ಮತ್ತೇ…”?: ಜಿ. ಬಿ. ವಿನಯ್ ಕುಮಾರ್ ಸ್ಪೋಟಕ ಸಂದರ್ಶನ

Share
ದಾವಣಗೆರೆ
Share

SUDDIKSHANA KANNADA NEWS/DAVANAGERE/DATE:05_01_2026

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಕಣ ರಂಗೇರುತ್ತಿದೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರಾಧ್ಯಕ್ಷರೂ ಆಗಿದ್ದ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪರ ನಿಧನದಿಂದ ಈ ಸ್ಥಾನ ತೆರವಾಗಿದೆ. ಬೈ ಎಲೆಕ್ಷನ್ ಗೆ ಕಾಂಗ್ರೆಸ್ ಹಾಗೂ ಬಿಜೆಪಿ ರೆಡಿಯಾಗುತ್ತಿವೆ. ಇನ್ನು ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ರಾಜ್ಯದ ಗಮನ ಸೆಳೆದಿದ್ದ, ಯುವ ನಾಯಕ ಹಾಗೂ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಅವರು ಹವಾ ಸೃಷ್ಟಿಸಿದ್ದರು. ಈಗ ವಿನಯ್ ಕುಮಾರ್ ಅವರತ್ತ ಎಲ್ಲರ ಚಿತ್ತ ನೆಟ್ಟಿದೆ.

ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರಾ? ಇಲ್ಲವೋ ಏನು ಎಂಬ ಕುತೂಹಲ ಎಲ್ಲರಲ್ಲಿಯೂ ಗರಿಗೆದರಿದೆ. ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕರೂ ಆದ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಅವರ ಸ್ಫೋಟಕ ಸಂದರ್ಶನವನ್ನು ಸುದ್ದಿಕ್ಷಣ ನ್ಯೂಸ್ ಪೋರ್ಟಲ್ ನಡೆಸಿದೆ. ಹಲವಾರು ಇಂಟ್ರೆಸ್ಟಿಂಗ್, ಸ್ಫೋಟಕ ಮಾಹಿತಿಯನ್ನು ಜಿ. ಬಿ. ವಿನಯ್ ಕುಮಾರ್ ಹಂಚಿಕೊಂಡಿದ್ದಾರೆ.

ಸುದ್ದಿಕ್ಷಣ ಪ್ರಶ್ನೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಬೈ ಎಲೆಕ್ಷನ್ ನಲ್ಲಿ ಕಣಕ್ಕಿಳಿಯುತ್ತೀರಾ?

ಜಿ. ಬಿ. ವಿನಯ್ ಕುಮಾರ್: ಸದ್ಯಕ್ಕೆ ಈ ಆಲೋಚನೆ ಇಲ್ಲ. ರಾಜಕೀಯ ಚದುರಂಗದಾಟದಲ್ಲಿ ಏನು ಬೇಕಾದರೂ ಆಗಬಹುದು. ಕಣಕ್ಕಿಳಿಯುವ ಕುರಿತಂತೆ ಗಂಭೀರ ಚಿಂತನೆ ನಡೆಸಿಲ್ಲ.

ಸುದ್ದಿಕ್ಷಣ ಪ್ರಶ್ನೆ: ಪಕ್ಷೇತರರಾಗಿ ಕಣಕ್ಕಿಳಿಯುತ್ತೀರಾ?

ಜಿ. ಬಿ. ವಿನಯ್ ಕುಮಾರ್: ಯಾವುದೇ ಕಾರಣಕ್ಕೂ ಪಕ್ಷೇತರ ಅಭ್ಯರ್ಥಿಯಾಗಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ರಾಷ್ಟ್ರೀಯ ಪಕ್ಷದಿಂದ ಟಿಕೆಟ್ ದೊರೆತರೆ ಮುಖಂಡರು, ಸ್ಥಳೀಯರ ಜೊತೆ ಚರ್ಚೆ ನಡೆಸಿ ನಿರ್ಧಾರ ತೆಗೆದುಕೊಳ್ಳುತ್ತೇನೆ. ಇಂಡಿಪೆಂಡೆಂಟ್ ಆಗಿ ಕಣಕ್ಕಿಳಿಯದಿರಲು ನಿರ್ಧರಿಸಿದ್ದೇನೆ.

ಸುದ್ದಿಕ್ಷಣ ಪ್ರಶ್ನೆ: ನಿಮ್ಮ ಹೆಸರು ಜನರ ಮಧ್ಯೆ ಹೆಚ್ಚಾಗಿ ಓಡಾಡುತ್ತಿದೆ?

ಜಿ. ಬಿ. ವಿನಯ್ ಕುಮಾರ್: ಕಳೆದ ದಾವಣಗೆರೆ ಲೋಕಸಭಾ ಚುನಾವಣೆಯಲ್ಲಿ ನಾನು ಜಿಲ್ಲೆಯಾದ್ಯಂತ ಪ್ರವಾಸ ಮಾಡಿದ್ದೇನೆ. ಎಲ್ಲೆಡೆ ಸಂಚರಿಸಿದ್ದೇನೆ. ದಾವಣಗೆರೆ ಜಿಲ್ಲೆಯ ಎಲ್ಲಾ 8 ಕ್ಷೇತ್ರಗಳಲ್ಲಿಯೂ ವಿಶ್ರಮಿಸದೇ ಓಡಾಡಿದ್ದೆ. ಜನರು ಪ್ರೀತಿ ತೋರಿದ್ದರು. ಜನರ ಮನಸ್ಸಿನಲ್ಲಿ ಉಳಿದಿದ್ದೇನೆ. ನಾನು ಚುನಾವಣೆಯಲ್ಲಿ ಪರಾಜಯಗೊಂಡರೂ ಸುಮ್ಮನೆ ಕುಳಿತಿಲ್ಲ. ಎಲ್ಲಾ ತಾಲೂಕುಗಳಲ್ಲಿಯೂ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಶಾಮನೂರು ಶಿವಶಂಕರಪ್ಪರ ಅನಿರೀಕ್ಷಿತ ನಿಧನದಿಂದ ಉಪ ಚುನಾವಣೆ ಎದುರಾಗಿದೆ. ಜನರೇ ವಿದ್ಯಾವಂತ, ಜನಸೇವೆಗೆ ಮುಡುಪಾಗಿಡುವ ನಾಯಕನ ಹುಡುಕಾಟದಲ್ಲಿದ್ದಾರೆ. ಹಾಗಾಗಿ, ನನ್ನ ಹೆಸರು ಬಲವಾಗಿ ಕೇಳಿ ಬರುತ್ತಿದೆ. ವ್ಯಾಪಕವಾಗಿ ಓಡಾಡಿದ್ದೇನೆ. ಪ್ರಚಾರವೂ ಆಗುತ್ತಿದೆ. ನನ್ನ ಹೆಸರು ಕೇಳಿ ಬರುತ್ತಿರುವುದು ನನ್ನ ಗಮನಕ್ಕೂ ಬಂದಿದೆ. ಜನರು ಅಪೇಕ್ಷೆ ಪಟ್ಟರೆ, ರಾಷ್ಟ್ರೀಯ ಪಕ್ಷದ ಬಿ ಫಾರಂ ದೊರೆತರೆ ಆಗ ಯೋಚನೆ ಮಾಡುತ್ತೇನೆ.

ನಾನು ಸರ್ಕಾರಿ ಶಾಲೆಗಳ ಉಳಿವಿಗೆ ಟೊಂಕಕಟ್ಟಿ ನಿಂತಿದ್ದೇನೆ. ದಾವಣಗೆರೆ ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿನ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದ್ದೇನೆ. ಅಲ್ಲಿಯ ಸಮಸ್ಯೆಗಳನ್ನು ಅರಿತಿದ್ದೇನೆ. ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದ್ದೇನೆ. ಬಡವರು, ಹಿಂದುಳಿದವರು, ಅಲ್ಪಸಂಖ್ಯಾತರು, ಶೋಷಿತ ಸಮುದಾಯದ ಮಕ್ಕಳಲ್ಲಿ ಐಎಎಸ್, ಐಪಿಎಸ್, ಕೆಎಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ಹೇಗೆ? ಎಂಬ ಕುರಿತಂತೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದೇನೆ. ಕೈಯಲ್ಲಾದಷ್ಟು ಸಹಾಯವನ್ನೂ ಮಾಡುತ್ತಿದ್ದೇನೆ. ಬಡವರ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮುತುವರ್ಜಿ, ಗುಣಮಟ್ಟದ ಶಿಕ್ಷಣ ಕೊಡಿಸುವಂತೆ ಜಾಗೃತಿ ಮೂಡಿಸುತ್ತಿದ್ದು, ಇದು ಜನರಿಗೂ ತುಂಬಾನೇ ಖುಷಿ ಕೊಟ್ಟಿದೆ. ರಾಜಕಾರಣದಲ್ಲಿ ಹೊಸ ಭರವಸೆಯನ್ನೂ ಹುಟ್ಟಿಸಿದೆ. ಹಾಗಾಗಿ, ಜನರೇ ಪ್ರೀತಿಯಿಂದ ನನ್ನ ಹೆಸರು ಪ್ರಸ್ತಾಪ ಮಾಡುತ್ತಿದ್ದಾರೆ.

ಸುದ್ದಿಕ್ಷಣ ಪ್ರಶ್ನೆ: ಉಪಚುನಾವಣೆ ಅಷ್ಟು ಸುಲಭನಾ?

ಜಿ. ಬಿ. ವಿನಯ್ ಕುಮಾರ್:  ಯಾವುದೇ ಉಪಚುನಾವಣೆಗಳಾದರೂ ಸುಲಭವಲ್ಲ. ಆಡಳಿತದಲ್ಲಿರುವ ಪಕ್ಷದ ಪರವಾಗಿ ಜನರ ಒಲವು ಇರುತ್ತದೆ. ವಿರೋಧ ಪಕ್ಷಗಳೂ ಗೆದ್ದ ಇತಿಹಾಸವೂ ಇದೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಶೇಕಡಾ 85ರಷ್ಟು ಅಹಿಂದ ವರ್ಗದವರೇ ಇದ್ದಾರೆ. ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಲ್ಪಸಂಖ್ಯಾತರು, ಹಿಂದುಳಿದ ವರ್ಗಕ್ಕೆ ಆದ್ಯತೆ ನೀಡಬೇಕು ಎಂಬುದು ನನ್ನ ಆಗ್ರಹ. ಅಹಿಂದ ವರ್ಗದವರಿಗೆ ಟಿಕೆಟ್ ನೀಡಿದರೆ ಬೆಂಬಲಿಸುತ್ತೇನೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದು, ಆಡಳಿತ ಪಕ್ಷವು ಹಣಬಲ, ತೋಳ್ಬಲ ಸೇರಿದಂತೆ ಎಲ್ಲಾ ರೀತಿಯಲ್ಲಿಯೂ ಚುನಾವಣೆಯಲ್ಲಿ ಗೆಲ್ಲಲು ರಣತಂತ್ರದ ಜೊತೆಗೆ ವಾಮಮಾರ್ಗ ಅನುಸರಿಸುತ್ತದೆ. ಈ ಚುನಾವಣೆಯಲ್ಲಿ ಸಾಮಾನ್ಯರು ಸ್ಪರ್ಧೆ ಮಾಡಿ ಗೆಲ್ಲುವುದು ಅಷ್ಟು ಸುಲಭವಲ್ಲ. ಜನರು ಮನಸ್ಸು ಮಾಡಿದರೆ ಯಾವುದೂ ಕಷ್ಟವಾಗದು.

ಸುದ್ದಿಕ್ಷಣ ಪ್ರಶ್ನೆ: ನಿಮ್ಮ ಹೆಸರು ಕೇಳಿ ಬರುತ್ತಿರುವುದೇಕೆ?

ಜಿ. ಬಿ. ವಿನಯ್ ಕುಮಾರ್: ಹೌದು. ನನ್ನ ಹೆಸರು ಕೇಳಿ ಬರುತ್ತಿದೆ. ಜನರು ಪ್ರಸ್ತಾಪ ಮಾಡುತ್ತಿದ್ದಾರೆ. ನಾನೇನೂ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆಂದು ಹೇಳಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಚರ್ಚಿತವಾಗುತ್ತಿದೆ. ಸದ್ಯಕ್ಕೆ ನಾನು ಆಕಾಂಕ್ಷಿಯಲ್ಲ. ಎಲ್ಲಾ ಸಮುದಾಯದ ಜನರು ನನ್ನ ಬಳಿ ಬಂದು ಸ್ಪರ್ಧೆ ಮಾಡುವಂತೆ ತುಂಬಾನೇ ಒತ್ತಡ ಹೇರುತ್ತಿದ್ದಾರೆ. ಅದು ಹೆಚ್ಚಾದರೆ ಆಗ ಯೋಚಿಸುತ್ತೇನೆ. ನನಗೆ ಇದುವರೆಗೆ ಯಾವುದೇ ಪಕ್ಷಗಳಿಂದ ಆಫರ್ ಬಂದಿಲ್ಲ. 

ನಾನು ಈಗಲೂ ಸ್ವತಂತ್ರ. ರಾಜ್ಯಾದ್ಯಂತ ಓಡಾಡುತ್ತಿದ್ದೇನೆ. ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೇನೆ. ಜನರೂ ಪ್ರೀತಿ, ವಿಶ್ವಾಸದಿಂದ ಆಹ್ವಾನಿಸುತ್ತಿದ್ದಾರೆ. ಅವರು ತೋರುತ್ತಿರುವ ಪ್ರೀತಿ ನೋಡಿದರೆ ಆತ್ಮಸ್ಥೈರ್ಯ ಹೆಚ್ಚಾಗುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಬೇಕೆಂಬ ನನ್ನ ಕನಸಿಗೆ ಪ್ರೋತ್ಸಾಹ, ಬೆಂಬಲ, ಆತ್ಮಸ್ಥೈರ್ಯ ತುಂಬುತ್ತಿದ್ದಾರೆ. ನಾನು ಬಿಜೆಪಿಯಿಂದ ಕಣಕ್ಕಿಳಿಯುತ್ತೇನೆ ಎಂಬ ಬಗ್ಗೆ ವದಂತಿ ಹಬ್ಬಿದೆ. ನಾನು ಯಾವ ರಾಷ್ಟ್ರೀಯ ಪಕ್ಷ ಸಂಪರ್ಕಿಸಿಲ್ಲ.

ಇದು ಕೇವಲ ಊಹಾಪೋಹ. ಜನರೇ ಮನಸ್ಸು ಮಾಡಿದರೆ ಏನೂ ಬೇಕಾದರೂ ಆಗುತ್ತದೆ. ಎಲ್ಲದಕ್ಕೂ ಕಾಲವೇ ಉತ್ತರ ನೀಡಲಿದೆ. ಎಲ್ಲಾ ಸಮುದಾಯದವರು ಭೇಟಿ ಮಾಡಿ ಸ್ಪರ್ಧೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಇದು ದಿನಕಳೆದಂತೆ
ಹೆಚ್ಚಾಗುತ್ತಲೇ ಇದೆ. ಮುಂದೆ ಮತ್ತಷ್ಟು ಒತ್ತಡ ಜಾಸ್ತಿಯಾಗುತ್ತಲೇ ಹೋದಾಗ ಸ್ಪರ್ಧೆ ಬಗ್ಗೆ ಗಂಭೀರ ಚಿಂತನೆ ನಡೆಸುತ್ತೇನೆ.

ಸುದ್ದಿಕ್ಷಣ ಪ್ರಶ್ನೆ: ಕುಟುಂಬ ರಾಜಕಾರಣದ ಬಗ್ಗೆ?

ಜಿ. ಬಿ. ವಿನಯ್ ಕುಮಾರ್: ನಾನು ಮೊದಲಿನಿಂದಲೂ ಕುಟುಂಬ ರಾಜಕಾರಣದ ವಿರುದ್ಧ ಹೋರಾಟ ಮಾಡಿದ್ದೇನೆ. ಒಂದು ವೇಳೆ ಕುಟುಂಬ ರಾಜಕಾರಣಕ್ಕೆ ಮಣೆ ನೀಡಿದರೆ ಸ್ವಾಭಿಮಾನಿ ಬಳಗದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ. ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಅಸಮಾನತೆ ದೂರವಾಗಿಲ್ಲ. ಬಲಾಢ್ಯರು ಮಾತ್ರ ರಾಜಕೀಯ ಅಧಿಕಾರ ಅನುಭವಿಸುತ್ತಿದ್ದಾರೆ. ಇದು ವಿಕೇಂದ್ರೀಕರಣವಾಗಬೇಕು. ಈ ನಿಟ್ಟಿನಲ್ಲಿ ನನ್ನ ಹೋರಾಟ ನಿಲ್ಲದು. ರಾಜಕೀಯ ಸಮಾನತೆಯೂ ಬರಬೇಕು. ಅಹಿಂದ ವರ್ಗಕ್ಕೆ ಟಿಕೆಟ್ ನೀಡಿದರೆ ಸ್ವಾಭಿಮಾನಿ ಬಳಗದ ಪ್ರಮುಖರೊಂದಿಗೆ ಚರ್ಚಿಸಿ ಬೆಂಬಲಿಸುವ ಕುರಿತಂತೆ ಅಂತಿಮ ನಿರ್ಧಾರ ಪ್ರಕಟಿಸುತ್ತೇವೆ.

ನನ್ನ ಹೋರಾಟ ಕೇವಲ ಶಾಮನೂರು ಶಿವಶಂಕರಪ್ಪರ ಕುಟುಂಬದ ವಿರುದ್ಧ ಅಲ್ಲ. ಈ ರೀತಿಯ ಅಭಿಪ್ರಾಯವೂ ಸರಿಯಲ್ಲ. ಯಾವುದೇ ಪಕ್ಷವಾಗಲೀ, ಎಲ್ಲೇ ಆಗಲಿ ಕುಟುಂಬ ರಾಜಕಾರಣದ ವಿರುದ್ಧದ ಹೋರಾಟ ಮುಂದುವರಿಯಲಿದೆ. ದೇಶದಲ್ಲಿನ ಫ್ಯಾಮಿಲಿ ಪೊಲಿಟಿಕ್ಸ್ ವಿರುದ್ಧದ ಹೋರಾಟ ನಿರಂತರವಾಗಿರಲಿದೆ.

ಒಟ್ಟಿನಲ್ಲಿ ಜಿ. ಬಿ. ವಿನಯ್ ಕುಮಾರ್ ಅವರು ಲೋಕಸಭಾ ಚುನಾವಣೆಗೂ ಮುನ್ನ ದಾವಣಗೆರೆ ಜಿಲ್ಲೆಯಾದ್ಯಂತ ಪಾದಯಾತ್ರೆ ನಡೆಸಿ, ಮಿಂಚಿನ ಸಂಚಾರ ನಡೆಸಿದ್ದರು. ಜನರ ಹೃದಯಕ್ಕೆ ಲಗ್ಗೆ ಇಟ್ಟು ನೆಲೆಸಿದ್ದರು. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಎದುರಾಗುತ್ತಿದ್ದಂತೆ ಜಿ. ಬಿ. ವಿನಯ್ ಕುಮಾರ್ ಹೆಸರು ಮತ್ತೆ ಮುನ್ನೆಲೆಗೆ ಬಂದಿದೆ.

ಸೋಷಿಯಲ್ ಮೀಡಿಯಾದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ ಎಂದೆಲ್ಲಾ ಚರ್ಚೆಗಳು ಶುರುವಾಗಿವೆ. ಈಗ ವಿನಯ್ ಕುಮಾರ್ ಅವರ ನಿರ್ಧಾರದ ಬಗ್ಗೆ ಎಲ್ಲಾ ಪಕ್ಷಗಳ ಚಿತ್ತ ನೆಟ್ಟಿದೆ.

 

Share

Leave a comment

Leave a Reply

Your email address will not be published. Required fields are marked *