SUDDIKSHANA KANNADA NEWS/ DAVANAGERE/DATE:16_09_2025
ದಾವಣಗೆರೆ: ಸೆಪ್ಟಂಬರ್ 22ರಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ತೋಟಗಾರಿಕೆ ಇಲಾಖೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ 58ನೇ ಜನುಮದಿನ ಇದ್ದು ಕೇಕ್, ಶಾಲು, ಹಾರ ತರುವುದು ಬೇಡ. ಇದೇ ಹಣವನ್ನು ಸಮಾಜಮುಖಿ ಕಾರ್ಯಕ್ರಮಗಳಿಗೆ ವಿನಿಯೋಗಿಸಿ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಸಲಹೆ ನೀಡಿದರು.
READ ALSO THIS STORY: ಸಾವಿನಲ್ಲೂ ಸಾರ್ಥಕತೆ ಮೆರೆದ ಗಾಯತ್ರಮ್ಮ
ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಜನ್ಮದಿನ ಆಚರಣೆಯ ಹಿನ್ನೆಲೆಯಲ್ಲಿ ಗೃಹಕಚೇರಿಯ ಆವರಣದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಪ್ರತಿವರ್ಷವೂ ಮಲ್ಲಿಕಾರ್ಜುನ್ ಅವರ ಜನುಮದಿನವನ್ನು ಅಭಿಮಾನಿಗಳು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಬ್ಬದಂತೆ ಆಚರಿಸುತ್ತಾರೆ. ದೊಡ್ಡದಾದ ಹಾರ, ಶಾಲುಗಳು, ಕೇಕ್ ಗಳಿಗೆ ಹೆಚ್ಚಿನ ಹಣ ವಿನಿಯೋಗಿಸುತ್ತಾರೆ. ಇದೇ ಹಣವನ್ನು ಸಮಾಜಮುಖಿ ಕಾರ್ಯಕ್ರಮಗಳನ್ನು ಏರ್ಪಡಿಸಿ ಜನರಿಗೆ ನೆರವಾಗಿ. ಅವರ ಜನುಮದಿನ ನಿಮಗೆ ಮಾತ್ರವಲ್ಲ ನಮಗೂ ಸ್ಪೆಷಲ್. ಈ ಬಾರಿ ಅರ್ಥಪೂರ್ಣವಾಗಿ ಮಲ್ಲಿಕಾರ್ಜುನ್ ಅವರ ಜನುಮದಿನ ಆಚರಿಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ದಾವಣಗೆರೆ ಮಹಾನಗರ ಪಾಲಿಕೆಯ 28 ಮತ್ತು 37ನೇ ವಾರ್ಡ್ ಪ್ರಬಲ ಟಿಕೆಟ್ ಆಕಾಂಕ್ಷಿ ಹಾಗೂ ಉತ್ತರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗಜೇಂದ್ರ ಜಗನ್ನಾಥ, ಪ್ರತಿವರ್ಷವೂ ಮಲ್ಲಿಕಾರ್ಜುನ್ ಅವರ ಜನುಮದಿನವನ್ನು ನಮ್ಮ ವಾರ್ಡ್ ನಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿ ಆಚರಿಸಿಕೊಂಡು ಬಂದಿದ್ದೇವೆ. ಸರ್ಕಾರಿ ಶಾಲೆಗಳು ರಜೆ ಇರುತ್ತವೆ. ಏರ್ಪಾಟುಗಳನ್ನು ಸೆ. 20ರೊಳಗೆ ಮಾಡಬೇಕು. 28 ಮತ್ತು 37ನೇ ವಾರ್ಡ್ ನಲ್ಲಿ ಮಲ್ಲಿಕಾರ್ಜುನ್ ಅವರು, ಪ್ರಭಾ ಮಲ್ಲಿಕಾರ್ಜುನ್ ಅವರ ಜನುಮದಿನದಂದು ಮಜ್ಜಿಗೆ ವಿತರಣೆಯನ್ನೂ ಮಾಡುತ್ತೇವೆ. ಕೈಯಲಾದಷ್ಟು ಸಹಾಯ ಮಾಡಿಕೊಂಡು ಬಂದಿದ್ದೇವೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಭಾ ಮಲ್ಲಿಕಾರ್ಜುನ್ ಅವರು ಇದೇ ರೀತಿಯಲ್ಲಿ ಉತ್ತಮ ಕಾರ್ಯಗಳನ್ನು ಮುಂದುವರಿಸಿಕೊಂಡು ಮುನ್ನಡೆಯಿರಿ ಎಂದು ಹೇಳಿದರು.
ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಎಲ್ಲಾ ವಾರ್ಡ್‌ಗಳ ಮಾಜಿ ಸದಸ್ಯರು, ಯುವ ಕಾಂಗ್ರೆಸ್ ಕಾರ್ಯಕರ್ತರು, ಮಹಿಳಾ ಘಟಕದ ಸದಸ್ಯರು, ಮುಖಂಡರು ಹಾಗೂ ಎಸ್.ಎಸ್.ಎಂ. ಅಭಿಮಾನಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು
ಆಯೋಜಿಸುವ ಕುರಿತು ಅಭಿಪ್ರಾಯ ಸಂಗ್ರಹಿಸಲಾಯಿತು. ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್. ಬಿ. ಮಂಜಪ್ಪ, ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಧ್ಯಕ್ಷ ಕೆ. ಜಿ. ಶಿವಕುಮಾರ್, ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಗಡಿಗುಡಾಳ್
ಮಂಜುನಾಥ್, ಮಾಗನೂರು ಪರಶುರಾಮ್, ನಂಜಾನಾಯ್ಕ ಮತ್ತಿತರರು ಹಾಜರಿದ್ದರು.


