Site icon Kannada News-suddikshana

ಎಲ್ಲರನ್ನೂ ಭೇಟಿಯಾಗಿ ಮಾತನಾಡಿದ್ದೇನೆ, ಎಲ್ಲಿಯೂ ವಿರೋಧ ಇಲ್ಲ: ತಾಯಿ, ಮಗಳ ಸ್ಪರ್ಧೆ ಹೌದು ಎಂದ ಗಾಯತ್ರಿ ಸಿದ್ದೇಶ್ವರ

SUDDIKSHANA KANNADA NEWS/ DAVANAGERE/ DATE:22-03-2024

ದಾವಣಗೆರೆ: ಮಾಜಿ ಸಚಿವರಾದ ಎಸ್. ಎ. ರವೀಂದ್ರನಾಥ್, ಎಂ. ಪಿ. ರೇಣುಕಾಚಾರ್ಯ ಅವರ ಜೊತೆ ಮಾತನಾಡಿದ್ದೇನೆ. ಅವರು ಟಿಕೆಟ್ ಕೇಳಿದ್ದರು, ಸಿಕ್ಕಿಲ್ಲ. ಸಹಜವಾಗಿಯೇ ಬೇಸರಗೊಂಡಿದ್ದಾರೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಹೇಳಿದರು.

ದಾವಣಗೆರೆ ನಗರ ದೇವತೆ ದುರ್ಗಾಂಬಿಕಾ ದೇವಿ ದರ್ಶನ ಪಡೆದ ಬಳಿಕ ಮಾತನಾಡಿದ ಅವರು, ಅವರೆಲ್ಲರನ್ನೂ ನಾನು ಅಣ್ಣ ಎಂದೇ ಮಾತಾಡಿಸುತ್ತಿದ್ದೆ, ಎಲ್ಲರನ್ನೂ ಭೇಟಿಯಾಗಿ ಮಾತಾಡಿದ್ದೇನೆ. ಎಲ್ಲರೂ ಖುಷಿಯಾಗಿಯೇ ಇದ್ದಾರೆ, ನನ್ನನ್ನು ಒಪ್ಪಿಕೊಳ್ಳುತ್ತಾರೆ ಎಂಬ ವಿಶ್ವಾಸ ಇದೆ. ಎಲ್ಲವೂ ಸರಿ ಆಗುತ್ತದೆ ಎಂದು ತಿಳಿಸಿದರು.

ಇದೇ ಮೊದಲ ಬಾರಿಗೆ ದಾವಣಗೆರೆಯಲ್ಲಿ ಮಹಿಳೆಯರಿಗೆ ಅವಕಾಶ ಸಿಕ್ಕಿದೆ, 33 % ಮೀಸಲಾತಿ ಸಿಕ್ಕಿರೋದು ಖುಷಿ ತಂದಿದೆ. ಮೋದಿ ಜೀ ಅವರ ಆಶೀರ್ವಾದ ಸಿಕ್ಕಿದೆ, ಕೇಂದ್ರದ, ರಾಜ್ಯದ ನಾಯಕರು ನನ್ನನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಈ ಅವಕಾಶ ಸದುಪಯೋಗ ಪಡಿಸಿಕೊಳ್ಳುತ್ತೇನೆ, ಎಲ್ಲರಿಗೂ ನ್ಯಾಯಯುತವಾಗಿ ಸೇವೆ ಸಲ್ಲಿಸುತ್ತೇನೆ. ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಕಾರ್ಯಕರ್ತರು ಈ ಬಾರಿ ನನ್ನ ಕೈ ಹಿಡಿಯುತ್ತಾರೆ, ಕಮಲ ತೆಗೆದುಕೊಂಡು ಹೋಗಿ ಮೋದಿ ಜೀಗೆ ಅರ್ಪಿಸುತ್ತೇನೆ. ಕಾಂಗ್ರೆಸ್ ನಿಂದ ಪ್ರಭಾ ಮಲ್ಲಿಕಾರ್ಜುನ್ ಸ್ಪರ್ಧೆ ಎಂಬ ಪತ್ರಕರ್ತರ ಪ್ರಶ್ನೆಗೆ ಗಾಯತ್ರಿ ಸಿದ್ದೇಶ್ವರ್ ಪ್ರತಿಕ್ರಿಯೆ ನೀಡಿದ್ದು, ಹೌದು ಬೀಗರು ಆಗ್ತಿವಿ, ನಾನು ತಾಯಿ ಸ್ಥಾನದಲ್ಲಿದ್ದೇನೆ, ಅವರು ಮಗಳು ಎಂದು ಹೇಳಿದರು.

ಮೋದಿ ಜೀ ವಿಶ್ವನಾಯಕ, ಅವರನ್ನು ಮತ್ತೆ ಪ್ರಧಾನಿ ಮಾಡಬೇಕು ಅನ್ನೋದು ಕಾರ್ಯಕರ್ತರ, ಮತದಾರರ ಆಶಯ. ದಾವಣಗೆರೆಯಲ್ಲಿ ಸಿದ್ದೇಶ್ವರ್ ಅವರು 20 ವರ್ಷಗಳ ಕಾಲ ಮಾಡಿರೋ ಅಭಿವೃದ್ಧಿ ಕೆಲಸಗಳ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಿದ್ದೇವೆ. ನಮ್ಮ ಮಾವ ಮಲ್ಲಿಕಾರ್ಜುನಪ್ಪ ಅವರು ಒಬ್ಬ ಎಂ.ಪಿ. ಹೇಗೆ ಜನರ ಕೈಗೆ ಸಿಗುತ್ತಾರೆ ಅನ್ನೊದನ್ನು ತೊರಿಸಿಕೊಟ್ಟಿದ್ದರು‌. ನಾನೂ ಕಾರ್ಯಕರ್ತರಿಗೆ ಸ್ಪಂದಿಸಿದ್ದೇನೆ, ಹೋದ ಎಲ್ಲ ಕಡೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸ್ಪಂದನೆಯೂ ಸಿಗುತ್ತಿದೆ. ಎಲ್ಲರೂ ಖುಷಿಯಿಂದ ಬೆಂಬಲ ನೀಡುತ್ತಿದ್ದಾರೆ ಎಂದು ಗಾಯತ್ರಿ ಸಿದ್ದೇಶ್ವರ ತಿಳಿಸಿದರು.

Exit mobile version