Home ದಾವಣಗೆರೆ ನ್ಯಾಷನಲ್ ಹೆರಾಲ್ಡ್ ಕೇಸ್ ಆರೋಪ ಪಟ್ಟಿ ನಿರಾಕರಿಸಿದ್ದು ಸತ್ಯಕ್ಕೆ ಸಂದ ಜಯ: ಸೈಯದ್ ಖಾಲಿದ್ ಅಹ್ಮದ್
ದಾವಣಗೆರೆನವದೆಹಲಿಬೆಂಗಳೂರು

ನ್ಯಾಷನಲ್ ಹೆರಾಲ್ಡ್ ಕೇಸ್ ಆರೋಪ ಪಟ್ಟಿ ನಿರಾಕರಿಸಿದ್ದು ಸತ್ಯಕ್ಕೆ ಸಂದ ಜಯ: ಸೈಯದ್ ಖಾಲಿದ್ ಅಹ್ಮದ್

Share
Share

SUDDIKSHANA KANNADA NEWS/DAVANAGERE/DATE:16_12_2025

ದಾವಣಗೆರೆ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ವಿರುದ್ಧ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ಆರೋಪಪಟ್ಟಿ ಸಲ್ಲಿಸಿದ್ದನ್ನು ಸ್ವೀಕರಿಸಲು ದೆಹಲಿ ನ್ಯಾಯಾಲಯವು ನಿರಾಕರಿಸಿರುವುದು ಸತ್ಯಕ್ಕೆ ಸಂದ ಜಯ ಎಂದು ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಅವರು ಹೇಳಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಇತರ ಐವರಿಗೆ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯವು ಬಿಗ್ ರೀಲೀಫ್ ನೀಡಿದೆ. ಜಾರಿ ನಿರ್ದೇಶನಾಲಯದ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ರಾಜಕೀಯ ದ್ವೇಷಕ್ಕೆ ಮುಂದಾಗಿತ್ತು. ಆದರೆ ನ್ಯಾಯಾಲಯದ ಆದೇಶದಿಂದ ಬಿಜೆಪಿ ಷಡ್ಯಂತ್ರ ವಿಫಲಗೊಂಡಿದೆ ಎಂದು ಕಿಡಿಕಾರಿದ್ದಾರೆ.

ದೆಹಲಿ ನ್ಯಾಯಾಲಯವು ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ರಾಷ್ಟ್ರೀಯ ಹೆರಾಲ್ಡ್ ಹಣ ವರ್ಗಾವಣೆ ಪ್ರಕರಣದ ದೂರಿನ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳಲು ನಿರಾಕರಿಸಿದೆ. ಇದು ಕಾಂಗ್ರೆಸ್ ನಾಯಕರಿಗೆ ಮಹತ್ವದ ಗೆಲುವು ತಂದುಕೊಟ್ಟಿದೆ ಎಂದು ತಿಳಿಸಿದ್ದಾರೆ.

ವಿಶೇಷ ನ್ಯಾಯಾಧೀಶರಾದ ವಿಶಾಲ್ ಗೋಗ್ನೆ ಅವರು, ಜಾರಿ ನಿರ್ದೇಶನಾಲಯ ಸಲ್ಲಿಸಿದ ದೂರು, ತನಿಖಾ ವರದಿಯ ಆಧಾರದ ಮೇಲೆ ಇಲ್ಲದೆ, ಖಾಸಗಿ ದೂರಿನ ಮೇಲೆ ಆಧರಿತವಾಗಿರುವುದರಿಂದ ಅದು ಸ್ವೀಕಾರಾರ್ಹವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಸಲ್ಲಿಸಲಾದ ಈ ದೂರು ನ್ಯಾಯಾಲಯದಲ್ಲಿ ಮುಂದುವರಿಯಲು ಅರ್ಹತೆ ಹೊಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಆದರೆ ನ್ಯಾಷನಲ್ ಹೆರಾಲ್ಡ್ ಕೇಸ್ ಮೂಲಕ ರಾಹುಲ್ ಗಾಂಧಿ ಅವರ ಹೋರಾಟ ದಮನಗೊಳಿಸುವ ಹಾಗೂ ಜನಪ್ರಿಯತೆ ಕುಗ್ಗಿಸುವ ವಿರೋಧಿಗಳಿಗೆ ತಕ್ಕ ಉತ್ತರ ಇದು ಎಂದು ಹೇಳಿದ್ದಾರೆ.

ಈ ಪ್ರಕರಣದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಲ್ಲದೆ, ಸುಮನ್ ದುಬೆ, ಸ್ಯಾಮ್ ಪಿಟ್ರೋಡಾ, ಯಂಗ್ ಇಂಡಿಯನ್, ಡೋಟೆಕ್ಸ್ ಮರ್ಚಂಡೈಸ್ ಮತ್ತು ಸುನೀಲ್ ಭಂಡಾರಿ ಅವರನ್ನೂ ಜಾರಿ ನಿರ್ದೇಶನಾಲಯ ಆರೋಪಿಗಳನ್ನಾಗಿ ಮಾಡಿತ್ತು. ಆದರೆ, ನ್ಯಾಯಾಲಯದ ಇಂದಿನ ಆದೇಶವು ಈ ಎಲ್ಲ ಆರೋಪಿಗಳಿಗೆ ರಿಲೀಫ್ ನೀಡಿದ್ದು, ಇನ್ನು ಮುಂದಾದರೂ ದ್ವೇಷದ ರಾಜಕಾರಣ ಮಾಡುವುದನ್ನು ಕೇಂದ್ರ ಸರ್ಕಾರ ಬಿಡಬೇಕು ಎಂದು ಸೈಯದ್ ಖಾಲಿದ್ ಅಹ್ಮದ್ ಒತ್ತಾಯಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *