Site icon Kannada News-suddikshana

ಕೃತಜ್ಞತೆ ಇಲ್ಲದ ನಾಲಾಯಕ್ ಶಾಸಕ ಬಿ. ಪಿ. ಹರೀಶ್: ಗಡಿಗುಡಾಳ್ ಮಂಜುನಾಥ್ ಆಕ್ರೋಶ

ಬಿ. ಪಿ. ಹರೀಶ್

SUDDIKSHANA KANNADA NEWS/DAVANAGERE/DATE:26_10_2025

ದಾವಣಗೆರೆ: ದಾನ, ಧರ್ಮದಲ್ಲಿ ಹೆಸರಾಗಿರುವ, ಅಭಿವೃದ್ಧಿ ಬಗ್ಗೆ ಹಗಲಿರುಳು ಶ್ರಮಿಸುವ ಶಾಮನೂರು ಶಿವಶಂಕರಪ್ಪರ ಮನೆತನದ ಬಗ್ಗೆ ಮಾತನಾಡುವ ನೈತಿಕತೆ ಹರಿಹರ ಬಿಜೆಪಿ ಶಾಸಕ ಬಿ. ಪಿ. ಹರೀಶ್ ಗೆ ಇಲ್ಲ. ರಾಜಕೀಯ ಜನ್ಮ ನೀಡಿದ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ, ಅವರ ಪುತ್ರ ಬಿ. ವೈ. ವಿಜಯೇಂದ್ರ ಅವರ ಬಗ್ಗೆ ಕೆಟ್ಟದಾಗಿ ಮಾತನಾಡುವ ಕೃತಜ್ಞತೆ ಇಲ್ಲದ ರಾಜಕಾರಣಿ ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಹಾನಗರ ಪಾಲಿಕೆ ಮಾಜಿ ಸದಸ್ಯ ಗಡಿಗುಡಾಳ್ ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

READ ALSO THIS STORY: ಬಿ. ಎಸ್. ಯಡಿಯೂರಪ್ಪರ ಪುತ್ರ ವಾತ್ಸಲ್ಯದಂತೆ ಸಿದ್ದರಾಮಯ್ಯರ “ರಾಜಕೀಯ”ಕ್ಕೂ ಮುಳುವಾಗುತ್ತಾ? ಇಂಟ್ರೆಸ್ಟಿಂಗ್ ಸ್ಟೋರಿ!

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಹರಿಹರ ಕ್ಷೇತ್ರದಲ್ಲಿನ ಸಮಸ್ಯೆ ಬಗ್ಗೆ ಗಮನ ಹರಿಸುವುದು ಬಿಟ್ಟು ಶಾಮನೂರು ಶಿವಶಂಕರಪ್ಪ, ಎಸ್. ಎಸ್. ಮಲ್ಲಿಕಾರ್ಜುನ್, ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಅವರ ಬಗ್ಗೆ ಹಗುರವಾಗಿ ಮಾತನಾಡಿದರೆ ದೊಡ್ಡ ರಾಜಕಾರಣಿಯಾಗುತ್ತೇನೆಂಬ ಭ್ರಮೆಯಲ್ಲಿದ್ದಾರೆ. ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಕಾನೂನು ಪ್ರಕಾರವೇ ಕ್ರಮ ಕೈಗೊಂಡಿದ್ದರೂ ಸುಖಾಸುಮ್ಮನೆ ಆರೋಪ ಮಾಡುತ್ತಾ ತಮ್ಮದೇ ವ್ಯಕ್ತಿತ್ವ ಬಯಲುಗೊಳಿಸಿಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ.

ದಾವಣಗೆರೆ ಜಿಲ್ಲೆಯಲ್ಲಿ ಇಷ್ಟೊಂದು ಅಭಿವೃದ್ಧಿಯಾಗಲು ಶಾಮನೂರು ಕುಟುಂಬವೇ ಕಾರಣ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಕಾನೂನು ಹೋರಾಟ ಮಾಡಲಿ. ಇದಕ್ಕೆ ಅವಕಾಶ ಇದೆ. ಆದರೆ ವಿನಾಕಾರಣ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಬಗ್ಗೆ ಕೀಳಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ. ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ ಬೇರೆ ತಟ್ಟೆ ನೋಡುವ ಚಾಳಿ ಬಿಡಬೇಕು ಎಂದು ಎಚ್ಚರಿಸಿದ್ದಾರೆ.

ಬಿಜೆಪಿ ನಾಯಕರ ಬಗ್ಗೆಯೇ ಕೆಟ್ಟದಾಗಿ ಮಾತನಾಡುವ ಬಿ. ಪಿ. ಹರೀಶ್ ಭಿನ್ನಮತೀಯ ನಾಯಕನಾಗಿದ್ದಾರೆ. ಮೂರು ಗುಂಪುಗಳಾಗಿ ದಾವಣಗೆರೆ ಬಿಜೆಪಿ ಇದೆ. ಜಿ. ಎಂ. ಸಿದ್ದೇಶ್ವರರ ಪರ ವಕಾಲತ್ತು ವಹಿಸುವ ಬಿ. ಪಿ. ಹರೀಶ್ ಯೋಗ್ಯತೆಯನ್ನು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಸೇರಿದಂತೆ ಅವರದ್ದೇ ಪಕ್ಷದ ನಾಯಕರು ಬಿಚ್ಚಿಟ್ಟಿದ್ದಾರೆ. ಆದರೂ ನಾಚಿಕೆ, ಮಾನ ಮರ್ಯಾದೆ ಇಲ್ಲದಂತೆ ವರ್ತಿಸುತ್ತಿದ್ದಾರೆ. ಯಡಿಯೂರಪ್ಪರ ಬಲ ಇಲ್ಲದೇ ಬಿ. ಪಿ. ಹರೀಶ್ ಹರಿಹರ ಕ್ಷೇತ್ರದಲ್ಲಿ ಗೆಲ್ಲಲು ಸಾಧ್ಯವಾಗುತ್ತಿತ್ತಾ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ. ಟೀಕೆ ಮಾಡಲಿ, ಆದರೆ ಹದ್ದುಮೀರಿ ವರ್ತಿಸುವುದು ಯೋಗ್ಯತೆ ಶೋಭೆ ತರುವುದಿಲ್ಲ ಎಂದು ಗಡಿಗುಡಾಳ್ ಮಂಜುನಾಥ್ ಅವರು ಕಿಡಿಕಾರಿದ್ದಾರೆ.

Exit mobile version